ಬೆಂಗಳೂರು ಸಬ್‌ಅರ್ಬನ್‌ ರೈಲಿಗೆ ಖಾಸಗಿ ಕಂಪನಿ ಬೋಗಿ..!

Published : Apr 13, 2023, 06:00 AM IST
ಬೆಂಗಳೂರು ಸಬ್‌ಅರ್ಬನ್‌ ರೈಲಿಗೆ ಖಾಸಗಿ ಕಂಪನಿ ಬೋಗಿ..!

ಸಾರಾಂಶ

ಬೆಂಗಳೂರಿಗರ ನಾಲ್ಕು ದಶಕಗಳ ಬೇಡಿಕೆಯಾದ ಉಪನಗರ ರೈಲು ಯೋಜನೆಯ ಭೌತಿಕ ಅನುಷ್ಠಾನಕ್ಕೆ ಚಾಲನೆ ದೊರೆತಿದೆ. 2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅದರಂತೆ ಯೋಜನೆಯ ನಾಲ್ಕು ಮಾರ್ಗಗಳ ಪೈಕಿ ಚಿಕ್ಕಬಾಣಾವಾರದಿಂದ ಬೈಯಪನಹಳ್ಳಿವರೆಗಿನ ಮಾರ್ಗ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. 

ಗಿರೀಶ್‌ ಗರಗ

ಬೆಂಗಳೂರು(ಏ.13):  ನಗರದ ಸಂಚಾರ ದಟ್ಟಣೆಗೆ ಪರಿಹಾರ ಎನ್ನುವಂತೆ ಅನುಷ್ಠಾನಗೊಳಿಸಲಾಗುತ್ತಿರುವ ಉಪನಗರ ರೈಲು ಯೋಜನೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈಲುಗಳ ಸೇವೆ ನೀಡುವ ಪ್ರಯತ್ನ ಆರಂಭವಾಗಿದ್ದು, ಅದಕ್ಕಾಗಿ ಖಾಸಗಿಯವರಿಂದ 264 ರೈಲ್ವೆ ಬೋಗಿಗಳನ್ನು 35 ವರ್ಷಕ್ಕೆ ಗುತ್ತಿಗೆ ಅಧಾರದಲ್ಲಿ ಪಡೆಯಲಾಗುತ್ತಿದೆ.

ಬೆಂಗಳೂರಿಗರ ನಾಲ್ಕು ದಶಕಗಳ ಬೇಡಿಕೆಯಾದ ಉಪನಗರ ರೈಲು ಯೋಜನೆಯ ಭೌತಿಕ ಅನುಷ್ಠಾನಕ್ಕೆ ಚಾಲನೆ ದೊರೆತಿದೆ. 2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅದರಂತೆ ಯೋಜನೆಯ ನಾಲ್ಕು ಮಾರ್ಗಗಳ ಪೈಕಿ ಚಿಕ್ಕಬಾಣಾವಾರದಿಂದ ಬೈಯಪನಹಳ್ಳಿವರೆಗಿನ ಮಾರ್ಗ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಉಪನಗರ ರೈಲು ಯೋಜನೆಗಾಗಿ ರೈಲು ಹಾಗೂ ಬೋಗಿಗಳನ್ನು ಪೂರೈಸುವ ಸಂಸ್ಥೆ ನೇಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌) ಮುಂದಾಗಿದೆ.

ಬೆಂಗಳೂರು: ಸಬ್‌ಅರ್ಬನ್‌ ರೈಲಿನ ಮಲ್ಲಿಗೆ ಮಾರ್ಗಕ್ಕೆ ವೇಗ

ಅತ್ಯಾಧುನಿಕ ಸೌಲಭ್ಯದ ಬೋಗಿಗಳು

ಉಪನಗರ ರೈಲು ಯೋಜನೆಯ ಎಲಿವೇಟೆಡ್‌ ಮತ್ತು ನೆಲಮಟ್ಟದ ಮಾರ್ಗ, ನಿಲ್ದಾಣಗಳು ಸೇರಿ ಇನ್ನಿತರ ಮೂಲಸೌಕರ್ಯ ಕಾಮಗಾರಿಗಳನ್ನು ಕೆ-ರೈಡ್‌ ಅನುಷ್ಠಾನಗೊಳಿಸಲಿದೆ. ಅದರಲ್ಲಿ ಚಿಕ್ಕಬಾಣಾವಾರದಿಂದ ಬೈಯಪನಹಳ್ಳಿವರೆಗಿನ ಮಾರ್ಗ ನಿರ್ಮಾಣಕ್ಕೆ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಆರಂಭಿಸಲಾಗಿದೆ. ಅದರ ಜತೆಗೆ ಹೀಲಲಿಗೆಯಿಂದ ರಾಜನುಕುಂಟೆವರೆಗಿನ ಮಾರ್ಗದ ಕಾಮಗಾರಿಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಹೀಗೆ ನಿರ್ಮಾಣವಾಗಲಿರುವ ಮಾರ್ಗಗಳಲ್ಲಿ ಸೇವೆ ನೀಡಲು ಅಗತ್ಯವಿರುವ ರೈಲ್ವೆ ಎಂಜಿನ್‌ ಮತ್ತು 264 ಬೋಗಿಗಳನ್ನು ಖಾಸಗಿ ಸಂಸ್ಥೆ ಮೂಲಕ ಭೋಗ್ಯ (ಲೀಸ್‌)ದ ಆಧಾರದಲ್ಲಿ ಪಡೆಯಲಾಗುತ್ತಿದೆ.

ಬೋಗಿಗಳು ಸ್ಟೇನ್‌ಲೆಸ್‌ ಸ್ಟೀಲ್‌ ಅಥವಾ ಅಲ್ಯೂಮಿನಿಯಂನಿಂದ ತಯಾರಿಸಿದ್ದಾಗಿರಲಿದೆ. ಅಲ್ಲದೆ, ಪ್ರತಿ ಬೋಗಿಯೂ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದೆ. ಸೈಕಲ್‌, ವ್ಹೀಲ್‌ಚೇರ್‌ ಹಾಗೂ ಪ್ರಯಾಣಿಕರು ಸಾಮಗ್ರಿಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ, ರೈಲ್ವೆ ಎಂಜಿನ್‌ ಪ್ರತಿ ಗಂಟೆಗೆ 80ರಿಂದ 90 ಕಿ.ಮೀ. ವೇಗದಲ್ಲಿ ಸಂಚರಿಸುವಂತಿರಲಿದೆ. ಭೋಗ್ಯದ ಆಧಾರದಲ್ಲಿ ಬೋಗಿ ನೀಡುವ ಗುತ್ತಿಗೆ ಪಡೆದ 3ರಿಂದ 5 ವರ್ಷದೊಳಗೆ ಎಲ್ಲ ಬೋಗಿಗಳನ್ನು ಪೂರೈಸಬೇಕಿದೆ. ರೈಲ್ವೆ ಎಂಜಿನ್‌ ಮತ್ತು ಬೋಗಿಗಳನ್ನು ಪೂರೈಸುವ ಸಂಸ್ಥೆಯು ಮುಂದಿನ 35 ವರ್ಷಗಳವರೆಗೆ ರೈಲು ಸೇವೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ಮಾಡಬೇಕಿದೆ. ಅದಕ್ಕಾಗಿ ಸ್ವಯಂಚಾಲಿತ ರೈಲ್ವೆ ನಿಯಂತ್ರಣ ವ್ಯವಸ್ಥೆ (ಎಟಿಸಿ)ಯನ್ನು ಅನುಷ್ಠಾನಗೊಳಿಸಬೇಕಿದೆ. ಹೀಗೆ ರೈಲು ಬೋಗಿ ಪೂರೈಕೆ, ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಂದಿಗೆ ಕೆ-ರೈಡ್‌ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಕೆ-ರೈಡ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸಬ್‌ ಅರ್ಬನ್‌ ರೈಲಿಗೆ ಅನಂತಕುಮಾರ್‌ ಹೆಸರು: ಸಚಿವ ಸೋಮಣ್ಣ

2026ರಲ್ಲಿ ಸೇವೆ ಆರಂಭ

ಉಪನಗರ ರೈಲು ಯೋಜನೆಯ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಚಿಕ್ಕಬಾಣಾವಾರದಿಂದ ಬೈಯಪನಹಳ್ಳಿವರೆಗಿನ ಮಾರ್ಗದ ಸಿವಿಲ್‌ ಕಾಮಗಾರಿ 2022ರ ಅಕ್ಟೋಬರ್‌-ನವೆಂಬರ್‌ನಲ್ಲಿಯೇ ಆರಂಭವಾಗಿದೆ. ಈ ಮಾರ್ಗಕ್ಕಾಗಿ .800 ಕೋಟಿ ವ್ಯಯಿಸಲಾಗುತ್ತಿದ್ದು, ಅದರ ಕಾಮಗಾರಿ 2026ರಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ. ಅದರ ಪ್ರಕಾರ ಮುಂದಿನ ಮೂರು ವರ್ಷದಲ್ಲಿ ಉಪನಗರ ರೈಲು ಯೋಜನೆಯ ಮೊದಲ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ. ಅದಾದ ನಂತರ ಹೀಲಲಿಗೆ-ರಾಜನುಕುಂಟೆ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ದೇವನಹಳ್ಳಿ, ಕೆಂಗೇರಿ-ವೈಟ್‌ಫೀಲ್ಡ್‌ ಮಾರ್ಗದ ಕಾಮಗಾರಿ ಆರಂಭವಾಗಲಿದ್ದು, ಒಂದೊಂದೇ ಮಾರ್ಗದಲ್ಲಿ ಸೇವೆ ಆರಂಭಿಸಲು ಕೆ-ರೈಡ್‌ ಯೋಜನೆ ರೂಪಿಸಿದೆ.

ಯೋಜನೆ ವಿವರ ಮಾರ್ಗ ಉದ್ದ

ಕೆಎಸ್‌ಆರ್‌-ದೇವಹಳ್ಳಿ 41.40 ಕಿ.ಮೀ
ಬೈಯಪನಹಳ್ಳಿ-ಚಿಕ್ಕಬಾಣಾವಾರ 25 ಕಿ.ಮೀ
ಕೆಂಗೇರಿ-ವೈಟ್‌ಫೀಲ್ಡ್‌ 35.52 ಕಿ.ಮೀ
ಹೀಲಲಿಗೆ-ರಾಜನುಕುಂಟೆ 46.24 ಕಿ.ಮೀ
ಒಟ್ಟು 148.17 ಕಿ.ಮೀ
ಯೋಜನಾ ವೆಚ್ಚ .15,767 ಕೋಟಿ
ಒಟ್ಟು ನಿಲ್ದಾಣಗಳು 65

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ