ಮೈಸೂರು: ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಪೂರ್ವಾನುಮತಿ ಕಡ್ಡಾಯ

By Kannadaprabha NewsFirst Published Aug 25, 2019, 2:35 PM IST
Highlights

ಗಣೇಶ ಹಬ್ಬ ಸಮೀಪಿಸಿದ್ದು, ಪಿಒಪಿ ಗಣೇಶ ಮೂರ್ತಿ ಮೈಸೂರಿನಲ್ಲಿ ಪಿಒಪಿ ಗಣೇಶ ಮೂರ್ತಿ  ಬಳಸುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಗಣೇಶ ಕೂರಿಸುವುದಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚಿಸಿದ್ದಾರೆ.

ಮೈಸೂರು(ಆ.25): ಈ ಸಾಲಿನ ಗೌರಿ ಮತ್ತು ಗಣೇಶ ಹಬ್ಬವು ಸೆ.2ರಂದು ನಡೆಯಲಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವವರು ನಿಗದಿತ ಅರ್ಜಿಯನ್ನು ವ್ಯಾಪ್ತಿಯ ಪೊಲೀಸ್‌ ಠಾಣೆಗಳಿಂದ ಪಡೆದು, ಭರ್ತಿ ಮಾಡಿ ಅವಶ್ಯಕ ದಾಖಲಾತಿ ಲಗತ್ತಿಸಿ, ಆ.31ರೊಳಗೆ ಸಂಬಂಧಿಸಿದ ಪೊಲೀಸ್‌ ಠಾಣೆಗಳಿಗೆ ಸಲ್ಲಿಸಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚಿಸಿದ್ದಾರೆ.

ಹಬ್ಬದ ಆಚರಣೆ ವೇಳೆ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರ ಗಮನಕ್ಕೆ ಈ ಕೆಳಕಂಡ ಸೂಚನೆ ನೀಡಲಾಗಿದೆ.

ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

ಗಣಪತಿ ಪ್ರತಿಷ್ಠಾಪನೆ ಮಾಡುವವರು ಪೇಪರ್‌ ಮೌಲ್ಡ್‌ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡದೇ, ಮಣ್ಣಿನಿಂದ ಮಾಡಿದ ಸೀಸ ಮುಕ್ತ ಬಣ್ಣವಿರುವ ಗಣಪತಿ ಪ್ರತಿಷ್ಠಾಪಿಸಬೇಕು. ಬಲವಂತವಾಗಿ ಯಾವುದೇ ರೀತಿಯ ಚಂದಾ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದ್ದು, ಹಾಗೇ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಗಣಪತಿ ಪ್ರತಿಷ್ಠಾಪನೆ ಮತ್ತು ಇತರೆ ಕಾರ್ಯಕ್ರಮಗಳ ಸಂಬಂಧ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಸ್ಥಳ ಆಯ್ಕೆ ಮಾಡುವುದು. ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ, ನಗರ ಪಾಲಿಕೆಯಿಂದ ಪಡೆದಿರುವ ಅನುಮತಿ ಪತ್ರ, ವಿದ್ಯುಚ್ಛಕ್ತಿ ಅಳವಡಿಸುವ ಬಗ್ಗೆ ಸೆಸ್ಕ್‌ನಿಂದ ಅನುಮತಿ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಮೈಸೂರು: 'ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಉದ್ಧಾರ ಆಗಿಲ್ಲ'

ಯಾವುದೇ ಮನರಂಜನೆ ಕಾರ್ಯಕ್ರಮಗಳು ಹಾಗೂ ವಿಸರ್ಜನಾ ಮೆರವಣಿಗೆಗೆ 2 ದಿನಗಳ ಮುಂಚಿತವಾಗಿಯೇ ಸಂಬಂಧಪಟ್ಟಪೊಲೀಸ್‌ ಠಾಣೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯುವುದು. ಮನರಂಜನಾ ಕಾರ್ಯಕ್ರಮಗಳು ಮತ್ತು ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯ ಒಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಯಾವುದೇ ಅಶ್ಲೀಲ ಹಾಡು, ನೃತ್ಯಗಳು ಇರಬಾರದು.

ಮನರಂಜನಾ ಕಾರ್ಯಕ್ರಮ ಮತ್ತು ಮೆರವಣಿಗೆ ವೇಳೆ ಮದ್ಯಪಾನ ಮಾಡಿ ಅಸಭ್ಯ ವರ್ತನೆ ಮತ್ತು ಅಶ್ಲೀಲ ವರ್ತನೆ ತೋರತಕ್ಕದ್ದಲ್ಲ. ವಿಸರ್ಜನಾ ಮೆರವಣಿಗೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ಸಂಚಾರ ಪೊಲೀಸರು ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು. ಯಾವುದೇ ವ್ಯಕ್ತಿ, ಧರ್ಮ, ಜನಾಂಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಮೆರವಣಿಗೆ ನಡೆಸುವುದು. ಪ್ರಾರ್ಥನ ಮಂದಿರಗಳ ಬಳಿ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಏರು ಧ್ವನಿಯಲ್ಲಿ ಹಾಡುಗಳನ್ನು ಹಾಕುವುದನ್ನು ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.

ಸೂರ್ಯ ಮುಳುಗುವ ಮುಂಚೆ ವಿಸರ್ಜನೆ

ಗಣಪತಿ ವಿಸರ್ಜನೆಯನ್ನು ಬಾವಿ, ಕೆರೆ, ನದಿಯಲ್ಲಿ ಮಾಡದೆ ಸಿಂಟೆಕ್ಸ್‌, ಬಕೇಟ್‌ನಲ್ಲಿ ವಿಸರ್ಜಿಸಿ ಗಣಪತಿ ಪೂರ್ಣವಾಗಿ ಕರಗಿದ ನಂತರ ಗಿಡಗಳಿಗೆ ಕರಗಿದ ನೀರನ್ನು ಹಾಕುವುದು ಅಥವಾ ಪಾಲಿಕೆಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ವಿಸರ್ಜನೆ ಮಾಡುವುದು. ಪಶ್ಚಿಮ ವಾಹಿನಿ ಮತ್ತು ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡುವವರು ಸುರಕ್ಷತೆಯ ದೃಷ್ಟಿಯಿಂದ ಸೂರ್ಯ ಮುಳುಗುವ ಮುಂಚಿತವಾಗಿ ವಿಸರ್ಜನೆ ಮಾಡುವುದು.

ಮನರಂಜನಾ ಕಾರ್ಯಕ್ರಮ ಮತ್ತು ಮೆರವಣಿಗೆ ಸಮಯದಲ್ಲಿ ಡಿ.ಜೆ. ಮತ್ತು ಇನ್ನಿತರೆ ಹೆಚ್ಚು ಶಬ್ದದ ಸ್ಪೀಕರ್‌ ಬಳಸಬಾರದು. ಬಾಕ್ಸ್‌ ಮಾದರಿಯ ಧ್ವನಿ ವರ್ಧಕವನ್ನು ಕಡಿಮೆ ಧ್ವನಿಯಲ್ಲಿ ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ವ್ಯಾಪ್ತಿಯ ಪೊಲೀಸ್‌ ಠಾಣೆಯ ಪೂರ್ವಾನುಮತಿಯೊಂದಿಗೆ ಉಪಯೋಗಿಸಬೇಕು.

ಲಾಟರಿ, ಪ್ರವೇಶ ಶುಲ್ಕ ನಿಷೇಧ

ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾವುದೇ ಲಾಟರಿ, ಪ್ರವೇಶ ಶುಲ್ಕ ಅಥವಾ ಇನ್ನಿತರೆ ಯಾವುದೇ ಬಹುಮಾನದ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ವ್ಯವಸ್ಥಾಪಕರು ಸ್ವಯಂ ಸೇವಕರನ್ನು ನೇಮಿಸಿಕೊಂಡು, ಅವರಿಗೆ ಗುರುತಿನ ಚೀಟಿ ನೀಡಿ, ಪ್ರತಿಷ್ಠಾಪನ ಸ್ಥಳ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನೆ ಸ್ಥಳದ ಸೂಕ್ತ ಉಸ್ತುವಾರಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡುವುದು.

ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ನುರಿತ ಈಜುಗಾರರು ಇರುವಂತೆ ವ್ಯವಸ್ಥೆ ಮಾಡಿಕೊಂಡು ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಳ್ಳುವುದು. ಪ್ರತಿಷ್ಠಾಪನೆ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವುದೇ ರೀತಿಯ ಬೆಂಕಿ ಆಕಸ್ಮಿಕಗಳು ನಡೆಯದಂತೆ ನೋಡಿಕೊಳ್ಳುವುದು ಹಾಗೂ ಬೆಂಕಿ ನಂದಿಸುವ ಉಪಕರಣಗಳಾದ ನೀರು, ಮರಳು ಮತ್ತು ಇತರೆ ಬೆಂಕಿ ನಂದಿಸುವ ಉಪಕರಣಗಳನ್ನು ಇಟ್ಟುಕೊಳ್ಳುವುದು.

ಪೊಲೀಸರಿಗೆ ಮಾಹಿತಿ ನೀಡಿ

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ, ಪೇಪರ್‌ ಮೌಲ್ಡ್‌ ಮತ್ತು ಸೀಸದಿಂದ ತಯಾರಿಸಿದ ಗಣಪತಿ ಮಾರಾಟ ಮತ್ತು ಪ್ರತಿಷ್ಠಾಪನೆ ಮಾಡುವುದು ಕಂಡು ಬಂದಲ್ಲಿ ನಗರ ಪಾಲಿಕೆ ಅಧಿಕಾರಿಗಳಿಗೆ ಕೂಡಲೆ ಮಾಹಿತಿ ನೀಡಿ. ಈ ನಿಬಂಧನೆ ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟಪೊಲೀಸ್‌ ಠಾಣೆಗಳಿಗೆ ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ 100, 2418139, 2418339 ಮಾಹಿತಿ ನೀಡುವಂತೆ ಪೊಲೀಸ್‌ ಆಯುಕ್ತರು ಕೋರಿದ್ದಾರೆ.

click me!