Modi in Bandipur: ಪ್ರತಿ ಪ್ರಾಣಿ ಕಂಡಾಗ ಪ್ರಧಾನಿ ಮೋದಿ ಫೋಟೋ ತೆಗೆಯುತ್ತಿದ್ರು: ಸಫಾರಿ ಜೀಪು ಚಾಲಕ

By Kannadaprabha News  |  First Published Apr 11, 2023, 3:34 AM IST

‘ದೇಶದ ಪ್ರಧಾನಿಗೆ ಸ್ವಲ್ಪ ಹೊತ್ತಿಗಾದರೂ ನಾನು ಸಾರಥಿ ಆಗುತ್ತೇನೆಂಬ ವಿಷಯ ತಿಳಿಯುತ್ತಿದ್ದಂತೆ ಖುಷಿಪಟ್ಟೆ. ಅವರು ಬರುವ ದಿನ ಹತ್ತಿರಾಗುತ್ತಿದ್ದಂತೆ ಭಯ ಶುರುವಾಯಿತು. ಆದರೂ ಅದನ್ನೆಲ್ಲ ತೋರ್ಪಡಿಸದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಡೀಪುರ ಅರಣ್ಯದಲ್ಲಿ ಪ್ರಾಣಿಗಳನ್ನು ತೋರಿಸಿದೆ..


ಗಿರೀಶ್‌ ಗರಗ

ಬೆಂಗಳೂರು (ಏ.11) : ‘ದೇಶದ ಪ್ರಧಾನಿಗೆ ಸ್ವಲ್ಪ ಹೊತ್ತಿಗಾದರೂ ನಾನು ಸಾರಥಿ ಆಗುತ್ತೇನೆಂಬ ವಿಷಯ ತಿಳಿಯುತ್ತಿದ್ದಂತೆ ಖುಷಿಪಟ್ಟೆ. ಅವರು ಬರುವ ದಿನ ಹತ್ತಿರಾಗುತ್ತಿದ್ದಂತೆ ಭಯ ಶುರುವಾಯಿತು. ಆದರೂ ಅದನ್ನೆಲ್ಲ ತೋರ್ಪಡಿಸದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಡೀಪುರ ಅರಣ್ಯದಲ್ಲಿ ಪ್ರಾಣಿಗಳನ್ನು ತೋರಿಸಿದೆ...’

Latest Videos

undefined

ಇದು, ವಿಶ್ವ ಹುಲಿ ದಿನ(World Tiger Day)ದ ಅಂಗವಾಗಿ ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಬಂಡೀಪುರ ಅರಣ್ಯ(Bandipur Forest)ದಲ್ಲಿ ಸಫಾರಿಗೆಂದು ಬಂದಾಗ ಅವರ ವಾಹನದ ಚಾಲಕನಾಗಿದ್ದ ಅರಣ್ಯ ಇಲಾಖೆ ಗುತ್ತಿಗೆ ಸಿಬ್ಬಂದಿ ಮಧುಸೂದನ್‌(Madhusudan) ಅವರ ಮಾತು. ಬಂಡೀಪುರ ಕಾನನದಲ್ಲಿ ಪ್ರಧಾನಿ ಅವರನ್ನು 22 ಕಿ.ಮೀ. ದೂರ ಕರೆದುಕೊಂಡು ಹೋದ ಅವರ ಅನುಭವವನ್ನು ಅವರು ‘ಕನ್ನಡಪ್ರಭ’ ಜತೆಗೆ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ನಮ್ಮನ್ನು ಮಾತಾಡಿಸಿದ್ದು ಖುಷಿ ನೀಡಿತು: ಬೊಮ್ಮನ್ ಸಂತಸ...

‘ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಿಗೆ ಮೋದಿ ಅವರು ಸಫಾರಿಗೆ ತೆರಳುವಾಗ ಬಳಸುವ ವಾಹನ ನೀನೇ ಚಾಲನೆ ಮಾಡಬೇಕು ಎಂದು ಹೇಳಿದಾಗ ರೋಮಾಂಚನವಾಯಿತು. ಸಫಾರಿಯ ದಿನ ಪ್ರಧಾನಿ ನನ್ನ ಪಕ್ಕದಲ್ಲಿ ಬಂದು ಕುಳಿತಾಗ ಭಯವಾಯಿತು. ಅದನ್ನು ತೋರ್ಪಡಿಸದೆ ಮಾಮೂಲಿಗಿಂತ ಕಡಿಮೆ ವೇಗದಲ್ಲಿ ವಾಹನ ಓಡಿಸಿದೆ. ಅರಣ್ಯದ ಬಗೆಗಿನ ಪ್ರತಿಯೊಂದು ಸಣ್ಣ ವಿಷಯವನ್ನೂ ಪ್ರಧಾನಿ ಅವರು ಹಿರಿಯ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು’ ಎಂದು ಮಧುಸೂದನ್‌ ಮಾಹಿತಿ ನೀಡಿದರು.

ಹುಲಿ ಕಾಣಿಸಲಿಲ್ಲ, ಬೇಸರಿಸಿಕೊಳ್ಳಲಿಲ್ಲ:

‘ಬಂಡೀಪುರ ಸಫಾರಿ ಹುಲಿ ಸಫಾರಿ ಎಂದೇ ಖ್ಯಾತಿ ಪಡೆದಿದೆ. ಹುಲಿಯನ್ನು ನೋಡಲೆಂದೇ ಇಲ್ಲಿಗೆ ಜನ ಬರುತ್ತಾರೆ. ಆದರೆ, ಪ್ರಧಾನಿ ಬಂದಾಗ ಹುಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಆನೆ, ಕಾಡೆಮ್ಮೆ, ಜಿಂಕೆ, ಚಿರತೆ ಹೀಗೆ ಹಲವು ಪ್ರಾಣಿಗಳು ಕಾಣಿಸಿದವು. ಪ್ರತಿಯೊಂದು ಪ್ರಾಣಿ ಕಂಡಾಗಲೂ ಒಂದು ಕ್ಷಣ ನಿಲ್ಲಿಸಲು ಹೇಳುತ್ತಿದ್ದ ಅವರು ಫೋಟೋ ತೆಗೆಯುತ್ತಿದ್ದರು. ಒಟ್ಟು 22 ಕಿ.ಮೀ. ಸಫಾರಿಯನ್ನು 1 ತಾಸಿನಲ್ಲಿ ಕ್ರಮಿಸಿದೆವು. ಹುಲಿ ಕಾಣಿಸದಿದ್ದುದಕ್ಕೆ ಪ್ರಧಾನಿ ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ. ಬದಲಿಗೆ ಸಫಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದರು.

ಎಸ್‌ಪಿಜಿ ನಿಗಾದಲ್ಲಿ ಸಫಾರಿ:

‘ಮೋದಿ ಅವರು ಬಂಡೀಪುರಕ್ಕೆ ಬರುವುದು ನಿಗದಿಯಾದ ದಿನದಿಂದಲೂ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಸುರಕ್ಷತೆ ಬಗ್ಗೆ ನಿಗಾವಹಿಸಿತ್ತು. ಅದರಲ್ಲೂ ಶನಿವಾರ ಇಡೀ ದಿನ ಬಂಡೀಪುರದಲ್ಲಿಯೇ ಎಸ್‌ಪಿಜಿ ಯೋಧರು ಬೀಡುಬಿಟ್ಟಿದ್ದರು. ಪ್ರಧಾನಿ ಸಾಗುವ ಮಾರ್ಗದಲ್ಲಿ ಸಾರ್ವನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಫಾರಿ ಸಂದರ್ಭದಲ್ಲೂ ಎಸ್‌ಪಿಜಿ ಪಡೆ ನಮ್ಮೊಂದಿಗೆ ಸಂಚರಿಸಿತ್ತು’ ಎಂದು ತಿಳಿಸಿದರು.

ಅಧಿಕಾರಿಗಳಿಂದ ಪ್ರಶಂಸೆ

‘ಬಂಡೀಪುರ ಸಫಾರಿ ವಾಹನಗಳ ಚಾಲಕರ ಪೈಕಿ ನನ್ನನ್ನು ಆಯ್ಕೆ ಮಾಡಿದ ಅಧಿಕಾರಿಗಳು ಪ್ರಧಾನಿ ಹೋದ ನಂತರ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಲೋಪವಾಗದಂತೆ ವಾಹನ ಚಾಲನೆ ಮಾಡಿದ ಬಗ್ಗೆ ಶ್ಲಾಘಿಸಿದರು. ಅಲ್ಲದೆ, ನನ್ನ ಕುಟುಂಬದವರು, ಸ್ನೇಹಿತರು ಕೂಡ ಸಂತಸಪಟ್ಟರು. ಕಳೆದ 6 ವರ್ಷಗಳಿಂದ ಬಂಡೀಪುರದಲ್ಲಿ ಸಫಾರಿ ವಾಹನ ಓಡಿಸುತ್ತಿದ್ದೇನೆ. ಹೆಚ್ಚಿನ ಸಮಯದಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ಹೋಗುತ್ತೇನೆ. ಒಂದು ದಿನ ದೇಶದ ಪ್ರಧಾನಿಗಾಗಿ ವಾಹನ ಚಾಲನೆ ಮಾಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಈಗ ನಾನು ಕೆಲಸಕ್ಕೆ ಸೇರಿದ್ದು ಸಾರ್ಥಕವಾಯಿತು ಎಂದೆನಿಸುತ್ತಿದೆ’ ಎಂದು ಮಧುಸೂದನ್‌ ಹೇಳಿದರು.

ಹುಲಿಯೂರಿನ ಸರಹದ್ದಿನಲ್ಲಿ ಪ್ರಧಾನಿ..ಹೇಗಿತ್ತು 2 ಗಂಟೆಗಳ ಮೋದಿ ಸಫಾರಿ..?

 

ಗುತ್ತಿಗೆ ಕೆಲಸ ಇನ್ನೂ ಕಾಯಂ ಆಗಿಲ್ಲ

ಮಧುಸೂದನ್‌ ಅವರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿಯವರು. ಬಿ.ಎ. ಪದವಿಧರರಾಗಿರುವ ಅವರು ಕಳೆದ 6 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹಾಗೂ ಅವರಂತೆ ಬಂಡೀಪುರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅನೇಕರು ಸರ್ಕಾರ ತಮ್ಮ ನೌಕರಿ ಕಾಯಂ ಮಾಡುತ್ತದೆ ಎಂದು ಕಾಯುತ್ತಿದ್ದಾರೆ.

click me!