Bengaluru: ಬಿಬಿಎಂಪಿ ಬಜೆಟ್‌ಗೆ ಸಿದ್ಧತೆ ಆರಂಭ: ಇನ್ನೊಂದು ವಾರದಲ್ಲಿ ಸಭೆ

By Govindaraj SFirst Published Dec 10, 2022, 8:58 AM IST
Highlights

ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯ ಸಿದ್ಧತೆ ಕುರಿತು ಪೂರ್ವ ತಯಾರಿ ಪ್ರಕ್ರಿಯೆಗೆ ಹಣಕಾಸು ವಿಭಾಗದ ಚಾಲನೆ ನೀಡಿದ್ದು, ಡಿಸೆಂಬರ್‌ ಅಂತ್ಯಕ್ಕೆ ವಿಭಾಗವಾರು ಬೇಡಿಕೆ ಸಲ್ಲಿಸುವಂತೆ ಪತ್ರ ಬರೆಯಲು ತೀರ್ಮಾನಿಸಿದೆ.

ಬೆಂಗಳೂರು (ಡಿ.10): ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯ ಸಿದ್ಧತೆ ಕುರಿತು ಪೂರ್ವ ತಯಾರಿ ಪ್ರಕ್ರಿಯೆಗೆ ಹಣಕಾಸು ವಿಭಾಗದ ಚಾಲನೆ ನೀಡಿದ್ದು, ಡಿಸೆಂಬರ್‌ ಅಂತ್ಯಕ್ಕೆ ವಿಭಾಗವಾರು ಬೇಡಿಕೆ ಸಲ್ಲಿಸುವಂತೆ ಪತ್ರ ಬರೆಯಲು ತೀರ್ಮಾನಿಸಿದೆ.

2022-23ನೇ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನು ಮೂರೂವರೆ ತಿಂಗಳು ಮಾತ್ರ ಬಾಕಿ ಉಳಿದಿದೆ. 2023ರ ಮಾರ್ಚ್‌ 31ರೊಳಗೆ 2023-24ನೇ ಸಾಲಿನ ಬಜೆಟ್‌ ಸಿದ್ಧಪಡಿಸಿ ಮಂಡಿಸಬೇಕಿದೆ. ಹೀಗಾಗಿ ಈಗಿನಿಂದಲೇ ಬಜೆಟ್‌ ಸಿದ್ಧತೆ ಪಡಿಸಲು ಬಿಬಿಎಂಪಿ ಪೂರ್ವ ತಯಾರಿ ಆರಂಭಿಸಿದೆ. ಬಿಬಿಎಂಪಿಯಲ್ಲಿ ವಿವಿಧ ವಿಭಾಗಗಳಲ್ಲಿ 2023-24ನೇ ಸಾಲಿನಲ್ಲಿ ಕೈಗೊಳ್ಳಲಿರುವ ಯೋಜನೆಗಳು, ನಿರ್ವಹಣೆಗೆ ಮಾಡಬೇಕಾದ ವೆಚ್ಚಗಳ ಮಾಹಿತಿ ನೀಡುವಂತೆ ಸೂಚಿಸಿ ಪತ್ರ ಬರೆಯುವುದಕ್ಕೆ ಬಿಬಿಎಂಪಿ ಹಣಕಾಸು ವಿಭಾಗ ಮುಂದಾಗಿದೆ.

Bengaluru : ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಆರಂಭಿಸಿದ ಬಿಬಿಎಂಪಿ

ಹಣಕಾಸು ವಿಭಾಗದ ಅಧಿಕಾರಿಗಳು ಈಗಾಗಲೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಬಜೆಟ್‌ ಸಿದ್ಧತೆಯ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಈ ವೇಳೆ ಬಜೆಟ್‌ ಗಾತ್ರ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ. ಜನವರಿ ಅಂತ್ಯದೊಳಗೆ ಎಲ್ಲ ವಿಭಾಗಗಳಿಂದ 2023-24ನೇ ಸಾಲಿನಲ್ಲಿ ಬೇಕಾಗುವ ಅನುದಾನ ಮತ್ತು ಯೋಜನೆಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ. ಅದರ ಜತೆಗೆ ಹಂತಹಂತವಾಗಿ ವಿಭಾಗವಾರು ಸಭೆಯನ್ನೂ ನಡೆಸಲಿದ್ದಾರೆ.

ಬಜೆಟ್‌ ಅನುಷ್ಠಾನ ಎಷ್ಟು?: 2022-23ನೇ ಸಾಲಿನ ಬಜೆಟ್‌ನಲ್ಲಿ ವಿಭಾಗಕ್ಕೆ ನೀಡಲಾದ ಅನುದಾನ, ಅದರಲ್ಲಿ ಮಾಡಲಾದ ಖರ್ಚಿನ ವಿವರವನ್ನೂ ಪಡೆಯಲಾಗುತ್ತದೆ. ಅದಕ್ಕಾಗಿ ಅನ್‌ಲೈನ್‌ ವ್ಯವಸ್ಥೆ ಮಾಡಲಾಗುತ್ತಿದ್ದು, ವಿಭಾಗವಾರು ಅಧಿಕಾರಿಗಳು ಆನ್‌ಲೈನ್‌ ಮೂಲಕವೇ ಮಾಹಿತಿಯನ್ನು ಹಣಕಾಸು ವಿಭಾಗಕ್ಕೆ ನೀಡಬೇಕಿದೆ. ಆ ಮಾಹಿತಿ ಪ್ರಕಾರ ಅನುದಾನ ಉಳಿದಿದ್ದರೆ, ಅದನ್ನು 2023-24ನೇ ಸಾಲಿಗೆ ಬಳಕೆ ಮಾಡುವ ಕುರಿತಂತೆ ಹೊಸ ಬಜೆಟ್‌ನಲ್ಲಿ ಸೇರಿಸಲಾಗುತ್ತದೆ.

ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಲು ಅರ್ಜಿ

ಕೇಂದ್ರ, ರಾಜ್ಯ ಬಜೆಟ್‌ ನಂತರ ಆಯವ್ಯಯ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡುತ್ತವೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಬಜೆಟ್‌ ಮಂಡನೆಯಾದ ನಂತರ ಬಿಬಿಎಂಪಿ ಬಜೆಟ್‌ ಅಂತಿಮಗೊಳ್ಳಲಿದೆ. ಅದರ ಜತೆಗೆ 2022-23ನೇ ಸಾಲಿನಲ್ಲಿ ಸಂಗ್ರಹವಾದ ಆಸ್ತಿ ತೆರಿಗೆ ಸೇರಿ ಇನ್ನಿತರ ಆದಾಯಗಳನ್ನಾಧರಿಸಿ, 2023-24ನೇ ಸಾಲಿನ ಆದಾಯವನ್ನು ಅಂದಾಜಿಸಲಾಗುತ್ತದೆ. ಹೀಗೆ ಬಿಬಿಎಂಪಿ ಆದಾಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನಾಧರಿಸಿ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಬಜೆಟ್‌ ಸಿದ್ಧಪಡಿಸಲಿದ್ದಾರೆ.

click me!