ಗಂಡನ ಮನೆಯವರ ಕಿರುಕುಳ: ಗರ್ಭಿಣಿ ಆತ್ಮಹತ್ಯೆ

By Web Desk  |  First Published Nov 23, 2019, 11:24 AM IST

ಪತಿಯ ಮನೆಯವರು ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಮನನೊಂದು ಆತ್ಮಹತ್ಯಗೆ ಶರಣಾದ  ಗರ್ಭಿಣಿ| ಮೃತಳ ತಾಯಿ ನೀಡಿದ ದೂರಿನನ್ವಯ ನಂದಗಡ ಪೊಲೀಸರು ಶಿಲ್ಪಾ ಅವರ ಪತಿ, ನಾದಿನಿ ಮತ್ತು ನಾದಿನಿಯ ಗಂಡನ ವಿರುದ್ಧ ದೂರು ದಾಖಲು| 


ಖಾನಾಪುರ(ನ.23): ಪತಿಯ ಮನೆಯವರು ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಮನನೊಂದ ಗರ್ಭಿಣಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಶುಕ್ರವಾರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಆತ್ಮಹತ್ಯೆ ಮಾಡಿಕೊಂಡ ಗೋಲಿಹಳ್ಳಿ ಗ್ರಾಮದ ಶಿಲ್ಪಾ ಅನಿಲ ಚಲವಾದಿ (23) ಎಂದು ಗುರುತಿಸಾಗಿದೆ. ಮೃತಳ ತಾಯಿ ನೀಡಿದ ದೂರಿನನ್ವಯ ನಂದಗಡ ಪೊಲೀಸರು ಶಿಲ್ಪಾ ಅವರ ಪತಿ ಅನಿಲ ಅರ್ಜುನ ಚಲವಾದಿ, ನಾದಿನಿ ಸುನೀತಾ ಮತ್ತು ನಾದಿನಿಯ ಗಂಡ ರಾಜಶೇಖರ ಅವರ ವಿರುದ್ಧ ಐಪಿಸಿ ಕಲಂ 498 (ಎ) ಮತ್ತು 306, 316 ಅಡಿ (ವರದಕ್ಷಿಣೆ ವಿರೋಧಿ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ) ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹುಬ್ಬಳ್ಳಿ ಮೂಲದ ಶಿಲ್ಪಾ ಕಳೆದ ಮೇ ತಿಂಗಳಲ್ಲಿ ಗೋಲಿಹಳ್ಳಿಯ ಅನಿಲ ಚಲವಾದಿ ಅವರನ್ನು ವರಿಸಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ಅವರು ತಮ್ಮ ಪತಿ, ನಾದಿನಿ ಮತ್ತು ನಾದಿನಿಯ ಗಂಡ ಕ್ಷುಲ್ಲಕ ಕಾರಣಕ್ಕಾಗಿ ನಿಂದಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ಮನನೊಂದು ನ.18 ರಂದು ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದರು. ಅವರನ್ನು ಸ್ಥಳೀಯರ ನೆರವಿನಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನ.21ರಂದು ಮೃತಪಟ್ಟಿದ್ದರು. 

ಶಿಲ್ಪಾ ಆತ್ಮಹತ್ಯೆಗೆ ಯತ್ನಿಸಿ 3 ದಿನಗಳಾಗಿದ್ದರೂ ಅವರ ಸಾವಿನ ಸುದ್ದಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ವೈದ್ಯರು ಗುರುವಾರ ರಾತ್ರಿ ನಂದಗಡ ಪೊಲೀಸರಿಗೆ ತಿಳಿಸಿದ ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಈ ಪ್ರಕರಣವನ್ನು ತಡವಾಗಿ ದಾಖಲಿಸಿಕೊಂಡಿರುವ ಕುರಿತು ನಂದಗಡ ಪೊಲೀಸರ ವಿರುದ್ಧ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಗೋಲಿಹಳ್ಳಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ್ದಾರೆ.  
 

click me!