ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಗೆ ಪ್ರಮೋದ್ ಮುತಾಲಿಕ್ ಸವಾಲು
ಧಾರವಾಡ(ಆ.09): ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದಿಲ್ಲ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ತಾಕತ್ತು ಇದ್ದರೆ ಗಣೇಶೋತ್ಸವ ನಿಲ್ಲಿಸಿ. ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿಯೂ ಅಲ್ಲ, ಹಿಂದೂ-ಮುಸ್ಲಿಂ ಆಸ್ತಿಯೂ ಅಲ್ಲ. ಅದು ಸರ್ಕಾರದ ಜಾಗ. ಈ ಸರ್ಕಾರಿ ಜಾಗದಲ್ಲಿ ನಮಾಜ್ ಮಾಡುತ್ತಿದ್ದು ಅಲ್ಲಿ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಏಕೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ: ಜಗದೀಶ್ ಶೆಟ್ಟರ್ ಹೇಳಿದ್ದಿಷ್ಟು
ನೀವು ಮುಸ್ಲಿಂ ಮತಗಳಿಂದ ಮಾತ್ರ ಗೆಲುವು ಸಾಧಿಸಿಲ್ಲ. ನಿಮಗೂ ಹಿಂದೂಗಳು ಮತ ಹಾಕಿದ್ದಾರೆ. ಇನ್ನೊಮ್ಮೆ ನಿಮ್ಮಿಂದ ಈ ರೀತಿಯ ಹೇಳಿಕೆ ಬರಬಾರದು. ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳು ಮುಂದಿನ ದಿನಗಳಲ್ಲಿ ಜಮೀರ್ ಅಹ್ಮದ್‌ಗೆ ಮತ ಹಾಕಿದರೆ ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ. ಅವರ ಸೊಕ್ಕನ್ನು ಈ ರೀತಿಯಾಗಿ ಮುರಿಯಬೇಕು. ಅವರನ್ನು ಬರುವ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಹಿಂದೂಗಳಿಗೆ ಕರೆ ನೀಡಿದರು.