ಬಡವರು ಮತ್ತು ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದ ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ರಾಜ್ಯ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜರ್
ರಾಮನಗರ(ಜ.04): 2047ರ ವೇಳೆಗೆ ಭಾರತವನ್ನು ಬಡತನ ಮುಕ್ತ ಮಾಡಲು ಉದ್ದೇಶಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ರಾಜ್ಯ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಮತ್ತು ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದರು.
ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್
ಮಂದಿರ ಉದ್ಘಾಟನೆಯ ದಿನಾಂಕ ಎಲ್ಲರಿಗೂ ಗೊತ್ತಾಗಿದೆ:
ನಾವು ಮಂದಿರ್ ವಹೀ ಬನಾಯೇಂಗೆ(ಮಂದಿರವನ್ನು ಅಲ್ಲೇ ಕಟ್ಟುತ್ತೇವೆ) ಎಂದು ಹೇಳುತ್ತಿದ್ದೆವು. ಅವರು ತಾರೀಕ್ ನಹೀ ಬತಾಯೇಂಗೆ (ದಿನಾಂಕವನ್ನು ಹೇಳುತ್ತಿಲ್ಲ) ಎಂದು ಹಂಗಿಸುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೊಟ್ಟ ಮಾತಿನಂತೆ ರಾಮಮಂದಿರ ನಿರ್ಮಾಣದ ಗ್ಯಾರಂಟಿಯನ್ನು ಈಡೇರಿಸಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬಹತ್ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ಯಾವಾಗ ಉದ್ಘಾಟನೆ ಆಗುತ್ತದೆ ಎಂಬ ಸಂಗತಿ ಇಡೀ ಜಗತ್ತಿಗೆ ಗೊತ್ತಿದೆ. ಮೋದಿ ಅವರು ಎಲ್ಲಾ ಗ್ಯಾರಂಟಿಯನ್ನು ಪೂರ್ಣಗೊಳಿಸಿದ್ದಾರೆ. ಮೋದಿ ಅವರು ಏನೇ ಗ್ಯಾರಂಟಿ ಕೊಟ್ಟರೂ ಪೂರ್ಣಗೊಳಿಸುತ್ತಾರೆ ಎಂಬುದಕ್ಕೆ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಾಕ್ಷಿ ಎಂದರು.
ರಾಮ ಎಲ್ಲರ ಆಸ್ತಿ:
ರಾಮಮಂದಿರ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಮ ಯಾರೋ ಒಬ್ಬರಿಗೆ ಸೇರಿಲ್ಲ, ಎಲ್ಲರಿಗೂ ರಾಮಮಂದಿರದ ಬಾಗಿಲು ತೆರೆದಿರುತ್ತದೆ. ರಾಮ ಎಲ್ಲರ ಆಸ್ತಿ, ಈ ದೇಶದ, ಮನುಕುಲದ ಆಸ್ತಿ. ಯಾರು ಬೇಕಾದರೂ ರಾಮಮಂದಿರಕ್ಕೆ ಬರಬಹುದು, ಎಲ್ಲರಿಗೂ ಮುಕ್ತ ಅವಕಾಶವಿದೆ. ಈ ಕಾರ್ಯಕ್ರಮಕ್ಕೆ ಯಾರಿಗೂ ಆಹ್ವಾನ ನೀಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.