ಕಲಬುರಗಿ: ವಸತಿ ಶಾಲೆ, ಅಂಗನವಾಡಿ ಹುಳುಕು ಬಹಿರಂಗ..!

By Kannadaprabha NewsFirst Published Jan 4, 2024, 8:45 PM IST
Highlights

ಶಾಲೆಗೆ ಕಲಬುರಗಿ ಲೋಕಾಯುಕ್ತ ತಂಡದ ಡಿವೈಎಸ್‌ಪಿ ಅಧಿಕಾರಿ ಗೀತಾ ಬೇನಾಳ ಭೇಟಿ ನೀಡಿದಾಗ ಕೋಳಕೂರು ವಸತಿ ಶಾಲೆ, ವಸತಿ ನಿಲಯದ ಹುಳುಕು, ಕೊಳಕುಗಳೆಲ್ಲವೂ ಬಯಲಿಗೆ ಬಂದವು. ಸಮಾಜ ಕಲ್ಯಣ ಇಲಾಖೆಯ ಜಂಟಿ ನಿರ್ದೇಶಕರ ಹಂತದಲ್ಲಿ ಉಸ್ತುವಾರಿ ಇರುವ ಈ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಲೋಕಾ ಅಧಿಕಾರಿಗಳೇ ದಂಗಾದರು.

ಕಲಬುರಗಿ(ಜ.04):  ಇಲ್ಲಿರೋದು 250 ಮಕ್ಕಳಾದರೂ ಕನಿಷ್ಠ ಮೂಲ ಸವಲತ್ತಿಗೂ ಬರ. ಮಕ್ಕಳಿಗೆ ಬಳಕೆಗೆ ನೀರಿಲ್ಲ, ಹೀಗಾಗಿ ಇಲ್ಲಿನ ಬಾಲಕ, ಬಾಲಕಿಯರು ಬಹಿರ್ದೆಸೆಗೆ ನಿತ್ಯ ತಂಬಿಗೆ ಹಿಡಿದುಕೊಂಡೇ ಹೊರಗಡೆ ಹೋಗಬೇಕಾದ ದುರವಸ್ಥೆ ಇದೆ. ಇನ್ನು ಕುಡಿವ ನೀರಿಗೂ ತತ್ವಾರ, ಮಕ್ಕಳು ಮಲಗೋ ಕೋಣೆಗಳ ಕಸ ಗುಡಿಸೋರು ಗತಿ ಇಲ್ಲ, ಶೌಚಗೃಹಗಳಿದ್ದರೂ ನೀರಿನ ಅಭಾವದಿಂದ ಯಾವುದೂ ಸ್ವಚ್ಛವಿಲ್ಲ, ಕೆಲವು ಶೌಚಾಲಯಗಳಿಗೆ ಬಾಗಿಲೇ ಇಲ್ಲ. ಇವೆಲ್ಲ ಮೇಲಿನ ಅಪಸವ್ಯಗಳು ಜೇವರ್ಗಿ ತಾಲೂಕಿನ ಕೋಳಕೂರ್‌ ಇಂದಿರಾ ಗಾಂಧಿ ವಸತಿ ಶಾಲೆ, ವಸತಿ ನಿಲಯವನ್ನು ತಿಕ್ಕಿ ಮುಕ್ಕುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾರೊಬ್ಬರೂ ಕೇಳೋರಿಲ್ಲ.

ಈ ಶಾಲೆಗೆ ಕಲಬುರಗಿ ಲೋಕಾಯುಕ್ತ ತಂಡದ ಡಿವೈಎಸ್‌ಪಿ ಅಧಿಕಾರಿ ಗೀತಾ ಬೇನಾಳ ಭೇಟಿ ನೀಡಿದಾಗ ಕೋಳಕೂರು ವಸತಿ ಶಾಲೆ, ವಸತಿ ನಿಲಯದ ಹುಳುಕು, ಕೊಳಕುಗಳೆಲ್ಲವೂ ಬಯಲಿಗೆ ಬಂದವು. ಸಮಾಜ ಕಲ್ಯಣ ಇಲಾಖೆಯ ಜಂಟಿ ನಿರ್ದೇಶಕರ ಹಂತದಲ್ಲಿ ಉಸ್ತುವಾರಿ ಇರುವ ಈ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಲೋಕಾ ಅಧಿಕಾರಿಗಳೇ ದಂಗಾದರು.

ಕಲಬುರಗಿ: ವರ್ಕ್ ಫ್ರಮ್ ಹೋಮ್ ಹೆಸರಲ್ಲಿ 89 ಲಕ್ಷ ವಂಚನೆ, ಕಂಗಾಲಾದ ಮಹಿಳೆ..!

ವಸತಿ ನಿಲಯದಲ್ಲಿ ನೀರಿನ ಅಭಾವ ಕಂಡುಬಂದಿರುತ್ತದೆ. ಪರಿಶೀಲನೆ ಸಮಯದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಮಲಗುವ ಕೋಣೆಗಳಲ್ಲಿ ಕಸ ಗುಡಿಸದೇ ಇರುವುದು, ಬೆಡ್‍ಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡು ಬಂದಿರುತ್ತದೆ. ವಸತಿ ನಿಲಯದ ಶೌಚಾಲಯಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಬಳಸಲು ಯೋಗ್ಯವಾಗಿರುವುದಿಲ್ಲ.

ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಶೌಚಕ್ಕೆ ಹೊರಗಡೇ ಹೋಗುತ್ತಿರುವುದು ಕಂಡು ಬಂದಿರುತ್ತದೆ. ಕೆಲವು ಶೌಚಾಲಯಗಳಿಗೆ ಬಾಗಿಲುಗಳು ಇರುವುದಿಲ್ಲ. ಸ್ಟಾಕ್ ರೆಜಿಸ್ಟರ್ ಪರಿಶೀಲಿಸಲಾಗಿ ಅದರ ಅನುಗುಣವಾಗಿ ದಿನಸಿಗಳು ಹಾಗೂ ಇತರೇ ಸಾಮಾನುಗಳು ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ಈ ಶಾಲೆಗೆ ಭೇಟಿ ನೀಡಿರುವ ಕಲಬುರಗಿ ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ್‌ ಹೇಳಿದ್ದಾರೆ.

ಅಂಗನವಾಡಿಯಲ್ಲೂ ಅಧೋಗತಿ:

ಕೋಳಕೂರ್‌ ಗ್ರಾಮದ ಅಂಗನವಾಡಿ-1 ಹಾಗೂ ಅಂಗನವಾಡಿ-4ಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ, ಹಾಜರಾತಿ ಪುಸ್ತಕದಲ್ಲಿ ಅನುಕ್ರಮವಾಗಿ ಸುಮಾರು 30 & 25 ಮಕ್ಕಳ ಹಾಜಾರಾತಿ ತೋರಿಸಿದ್ದು, ಯಾವುದೇ ವಿದ್ಯಾರ್ಥಿಗಳು ಅಂಗನವಾಡಿ ಕೇಂದ್ರದಲ್ಲಿ ಕಂಡು ಬರಲೇ ಇಲ್ಲವೆಂದು ಡಿವೈಎಸ್ಪಿ ಗೀತಾ ಬೇನಾಳ ಅವರು ಜಿಲ್ಲಾ ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ.

ಎರಡೂ ಅಂಗನವಾಡಿಗಳು ಆಸುಪಾಸಿನಲ್ಲಿದ್ದು ಎರಡೂ ಅಂಗನವಾಡಿ ಮಕ್ಕಳಿಗೆ ಒಂದು ಚಿಕ್ಕ ಪಾತ್ರೆಯಲ್ಲಿ ಅಡುಗೆ ಮಾಡಿ ಉಣಬಡಿಸಿದ್ದಷ್ಟೇ ಸರಿ, ಆದರೆ ಅಂಗನವಾಡಿಯಲ್ಲಿ ಅಡುಗೇ ಮಾಡಿದ ಯಾವುದೇ ಕುರುಹು ಕಂಡು ಬಂದಿರುವುದಿಲ್ಲ.

ಮಲ್ಲಿಕಾರ್ಜುನ್‌ ಖರ್ಗೆಯವರನ್ನು ನಿರ್ಲಕ್ಷಿಸಿದ ಸಿದ್ದು ದಲಿತ ವಿರೋಧಿ: ಛಲವಾದಿ ನಾರಾಯಣಸ್ವಾಮಿ

ಅಡುಗೆ ಅನಿಲ ಹಾಗೂ ಸ್ಟವ್‌ ಸುಮಾರು ದಿನಗಳಿಂದ ಬಳಸದೇ ಹಾಗೆಯೇ ಇಟ್ಟಿರುವುದು ಕಂಡು ಬಂದಿರುತ್ತದೆ. ಮೇಲ್ವಿಚಾರಕರು ಹಾಗೂ ಹಿರಿಯ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡದೇ ಇರುವುದರಿಂದ ಅಡುಗೆ ಸಹಾಯಕಿಯರು ದಿನಸಿಗಳನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಸಂಶಯ ಮೂಡುವಂತಿದೆ ಎಂದೂ ಡಿವೈಎಸ್ಪಿ ಗೀತಾ ಹೇಳಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ ಅವರು ಮೇಲ್ಕಂಡ ಶಾಲೆ, ಅಂಗನವಾಡಿಗೆ ಭೇಟಿ ನೀಡಿ ಹಲವು ನ್ಯೂನತೆಗಳ ಕುರಿತು ವರದಿ ನೀಡಿದ್ದಾರೆ. ಸೂಕ್ತ ಕ್ರಮ ಕೈಕೊಳ್ಳಲು ವರದಿಯನ್ನು ಸಂಬಂದಪಟ್ಟವರಿಗೆ ನೀಡಲಾಗುವುದು ಎಂದು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಆಂಟನಿ ಜಾನ್‌ ಹೇಳಿದ್ದಾರೆ.

click me!