ಕರ್ನಾಟಕ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಮುನ್ನ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ರೂಪಿಸಿ ಸರ್ಕಾರಕ್ಕೆ ಅದನ್ನು ಮಂಡಿಸಲು ನಿರ್ಧರಿಸಿದ್ದು ಅದರಂತೆ ಸಮಿತಿ ಕೆಲಸ ಮಾಡುತ್ತಿದೆ ಎಂದ ಕೃಷಿ ಮಾರುಕಟ್ಟೆ ಹಾಗೂ ವಿಧಾನ ಪರಿಷತ್ತಿನ ಪರಿಶೀಲನಾ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ್
ರಾಯಚೂರು(ಜ.04): ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ-ತಿದ್ದುಪಡಿ ಮತ್ತು ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2023 ಕುರಿತು ಸಾಧಕ-ಬಾಧಕಗಳನ್ನು ಅರಿಯಲು ವಿಧಾನ ಪರಿಷತ್ ಪರಿಶೀಲನಾ ಸಮಿತಿಯನ್ನು ರೂಪಿಸಿದ್ದು, ಸಮಿತಿ ಸದಸ್ಯರು ಎಲ್ಲೆಡೆ ಸಂಚರಿಸಿ ರೈತರ, ವರ್ತಕರ ಹಾಗೂ ಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದು, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಹಾಗೂ ವಿಧಾನ ಪರಿಷತ್ತಿನ ಪರಿಶೀಲನಾ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ್ ತಿಳಿಸಿದರು.
ರಾಯಚೂರು ಸ್ಥಳೀಯ ಎಪಿಎಂಸಿ ಆವರಣದಲ್ಲಿರುವ ರೈತ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಮುನ್ನ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ರೂಪಿಸಿ ಸರ್ಕಾರಕ್ಕೆ ಅದನ್ನು ಮಂಡಿಸಲು ನಿರ್ಧರಿಸಿದ್ದು ಅದರಂತೆ ಸಮಿತಿ ಕೆಲಸ ಮಾಡುತ್ತಿದೆ ಎಂದರು.
undefined
ಹಟ್ಟಿ ಚಿನ್ನದ ಗಣಿಯ ಮ್ಯಾನೇಜ್ಮೆಂಟ್ ಕಂ ಟ್ರೈನಿ ಹುದ್ದೆ ನೇಮಕಾತಿಯಲ್ಲಿ ಲೋಪ!
ಕೇಂದ್ರ ಸರ್ಕಾರವೇ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ಹಿಂಪಡೆದಿದೆ. ರಾಜ್ಯದಲ್ಲಿ ರದ್ದುಪಡಿಸುವ ಕುರಿತು ರೈತರ, ಹಮಾಲರು ಸೇರಿದಂತೆ ಅನೇಕರ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಹೇಳಿದರು.
ಈ ಪರಿಶೀಲನಾ ಸಮಿತಿಯಲ್ಲಿರುವ ಎಲ್ಲ ಪಕ್ಷಗಳ ಶಾಸಕರು ಕೂಲಂಕುಷವಾಗಿ ಸಭೆ ಮಾಡಿ ತಿದ್ದುಪಡಿ ಕಾಯಿದೆಯಿಂದ ಮಾರುಕಟ್ಟೆಗೆ ಶೇ.70ರಷ್ಟು ವಹಿವಾಟು ಕುಸಿದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಬಲೀಕರಣದ ಜೊತೆಗೆ ರೈತರ ಹಿತದೃಷ್ಠಿಗೆ ಪೂರಕವಾಗಿ ಸರ್ಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸಿಂಧನೂರು ತಾಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿಸಲು ಬದ್ಧ: ಸಿದ್ದರಾಮಯ್ಯ
ರಾಯಚೂರಿನಲ್ಲಿ ನಿರ್ಮಿಸಿದ ರೈತ ಭವನ ಉಪಯೋಗಕ್ಕೆ ಬರುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ಇದ್ದು ನಿರ್ವಹಣೆ ಟೆಂಡರ್ ದರ ಹೆಚ್ಚಳವಾಗಿದೆ ಎಂಬ ಕಾರಣದಿಂದ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಇದೆ. ದರ ಮರು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಮಳೆಗಾಲದಲ್ಲಿ ಎಪಿಎಂಸಿಯಲ್ಲಿ ಪ್ರಾಂಗಣದಲ್ಲಿ ರೈತರ ಮಾರಾಟಕ್ಕೆ ತಂದ ಬೆಳೆಗಳು ಚರಂಡಿ ಪಾಲಾಗುತ್ತಿದೆ ಎಂಬ ಸಮಸ್ಯೆ ಗಮನಕ್ಕೆ ಬಂದಿದೆ. ಇದರ ದುರಸ್ತಿಗಾಗಿ 1.50 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಮೆಣಸಿನಕಾಯಿ ಮಾರುಕಟ್ಟೆ ರಾಯಚೂರಿನಲ್ಲಿ ಆರಂಭಿಸುವ ಉದ್ದೇಶ ಸರ್ಕಾರ ಮಟ್ಟದಲ್ಲಿದೆ. ರೈತರ ಉತ್ಪನ್ನಗಳಿಗೆ ಭದ್ರತೆ ಇಲ್ಲದೆ ಕಳ್ಳತನವಾಗುವ ಬಗ್ಗೆ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹಾಗೂ ಇತರ ಅಧಿಕಾರಿಗಳು, ವರ್ತಕರು, ರೈತ ಮುಖಂಡರು ಇದ್ದರು.