ಕೊಡಗಿನಲ್ಲೇ ವಿಷವಾಗುತ್ತಿದೆ ಜೀವಜಲ ಕಾವೇರಿ, ಒಡಲು ಸೇರುತ್ತಿದೆ ಶುಂಠಿ ಶುದ್ಧೀಕರಣದ ತ್ಯಾಜ್ಯ, ಶೌಚಾಲಯದ ನೀರು

By Suvarna NewsFirst Published Jan 17, 2024, 6:10 PM IST
Highlights

ಕಾವೇರಿ ನೀರು ಕುಡಿಯುತ್ತಿದ್ದೀರಾ ಎಚ್ಚರ, ಎಚ್ಚರ. ಜೀವಜಲವೆಂದು ನೀವು ಕುಡಿಯುತ್ತಿರುವ ನೀರು ವಿಷವಾಗಿರಲೂಬಹುದು ಎಚ್ಚರ. ಇದು ನಾವು ಸುಮ್ಮನೆ ಹೇಳಿ ನಿಮ್ಮನ್ನು ಹೆದರಿಸುತ್ತಿಲ್ಲ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.17): ಕಾವೇರಿ ನೀರು ಕುಡಿಯುತ್ತಿದ್ದೀರಾ ಎಚ್ಚರ, ಎಚ್ಚರ. ಜೀವಜಲವೆಂದು ನೀವು ಕುಡಿಯುತ್ತಿರುವ ನೀರು ವಿಷವಾಗಿರಲೂಬಹುದು ಎಚ್ಚರ. ಇದು ನಾವು ಸುಮ್ಮನೆ ಹೇಳಿ ನಿಮ್ಮನ್ನು ಹೆದರಿಸುತ್ತಿಲ್ಲ. ಬದಲಾಗಿ ಸಾಕ್ಷಿ ಸಹಿತ ನಿಮ್ಮ ಮುಂದೆ ಇಡುತ್ತಿದ್ದೇವೆ. ಹೌದು ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುತ್ತಾ ಕೋಟ್ಯಂತರ ಜನ, ಜೀವಿಗಳಿಗೆ ಜೀವಜಲವಾಗಿರುವ ಕಾವೇರಿ ತವರು ಜಿಲ್ಲೆಯಲ್ಲೇ ವಿಷವಾಗುತ್ತಿದ್ದಾಳೆ. ಅತ್ಯಂತ ವಿಷಪೂರಿತವಾದ ಕಾಫಿ ಪಲ್ಪಿಂಗ್ ನೀರು, ದೊಡ್ಡ ದೊಡ್ಡ ಹೋಟೆಲ್, ಲಾಡ್ಜ್ಗಳ ಶೌಚಾಲಯದ ನೀರು ಅಯ್ಯಯ್ಯೋ ಒಂದೆರಡಲ್ಲ. ಇದನ್ನು ನೋಡಿದ್ರೆ ನೀವು ಕಾವೇರಿ ನೀರು ಕುಡಿಯುವುದನ್ನೇ ನಿಲ್ಲಿಸಿಬಿಡ್ತೀರಾ.

ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕನಿಂದ ಲೈಂಗಿಕ ಕಿರುಕುಳ, ಹುದ್ದೆಯಿಂದ ವಜಾ

ಅತೀ ಹೆಚ್ಚು ಕಾಫಿ ಬೆಳೆಯುವ ಕೊಡಗು ಜಿಲ್ಲೆಯಲ್ಲಿ ಈಗ ಕಾಫಿ ಹಣ್ಣಿನ ಕೊಯ್ಲು ನಡೆಯುತ್ತಿದ್ದು, ಜೊತೆಗೆ ಕಾಫಿ ಪಲ್ಪಿಂಗ್ ಮಾಡಲಾಗುತ್ತಿದೆ. ಕಾಫಿ ಹಣ್ಣನ್ನು ಹಲವು ದಿನಗಳ ಕಾಲ ನೆನೆಸಿ ಬಳಿಕ ಅದನ್ನು ಮಿಲ್ಲ್ ಮೂಲಕ ಬೇಳೆ ಮಾಡಲಾಗುತ್ತದೆ. ಹೀಗೆ ಮಾಡುವಾಗ ಉತ್ಪತ್ತಿಯಾಗುವ ತ್ಯಾಜ್ಯ ನೀರು ಅತ್ಯಂತ ಅಪಾಯಕಾರಿ. ಈ ನೀರನ್ನು ಸೇವಿಸಿದರೆ ದನಕರುಗಳು ಕೂಡ ಸಾವನ್ನಪ್ಪುತ್ತವೆ. ಇಂತಹ ಅಪಾಯಕಾರಿ ಕಾಫಿ ಪಲ್ಪಿಂಗ್ ನೀರನ್ನು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಗುಹ್ಯ ಕುಶಾಲನಗರ ತಾಲ್ಲೂಕಿ ನೆಲ್ಯಹುದಿಕೇರಿ, ಸುಂಟಿಕೊಪ್ಪ ಸೇರಿದಂತೆ ಹಲವೆಡೆ ನೇರ ಕಾವೇರಿ ನದಿಗೆ ಹರಿಯ ಬಿಡಲಾಗುತ್ತಿದೆ.

ಜೊತೆಗೆ ಕಾವೇರಿ ನದಿ ದಂಡೆಯಲ್ಲಿ ಬರುವ ನದಿಗಳ ಬಹುತೇಕ ಪಟ್ಟಣ ಮತ್ತು ಗ್ರಾಮಗಳಲ್ಲಿ ಇರುವ ಹೋಂಸ್ಟೇ, ಲಾಡ್ಜ್ ಮತ್ತು ಹೊಟೇಲ್ಗಳ ಶೌಚಾಲಯಗಳ ನೀರು ಸಹ ನೇರವಾಗಿ ಕಾವೇರಿ ಒಡಲನ್ನು ಸೇರುತ್ತಿದೆ. ಇಷ್ಟೇ ಏಕೆ ಇನ್ನೂ ಅಪಾಯಕಾರಿ ಎಂದರೆ ಕಾವೇರಿ ನದಿಯ ಒಡಲಿನಲ್ಲೇ ಹತ್ತಾರು ಶುಂಠಿ ಶುದ್ಧೀಕರಣ ಘಟಕಗಳಿದ್ದು, ಅವುಗಳು ನಿತ್ಯ ನೂರಾರು ಲೋಡ್ ಶುಂಠಿಯನ್ನು ಸ್ವಚ್ಛಗೊಳಿಸುತ್ತಿವೆ. ಶುಂಠಿಗೆ ಎಷ್ಟೊಂದು ಅಪಾಯಕಾರಿ ಕೀಟನಾಶಕಗಳನ್ನು ಬಳಸಿ ವ್ಯವಸಾಯ ಮಾಡಲಾಗುತ್ತದೆ ಎನ್ನುವುದು ನಿಮಗೂ ಗೊತ್ತೇ ಇದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು-200 ಅಪ್ರೆಂಟಿಸ್ ನೇಮಕಾತಿ

ಹೀಗೆ ಶುಂಠಿ ಶುದ್ಧೀಕರಣ ಮಾಡಿದ ಅಪಾಯಕಾರಿ ನೀರು ಸಹ ಕಾವೇರಿ ನದಿಗೆ ಹರಿದು ಸೇರುತ್ತಿದೆ. ಇದೇ ನೀರನ್ನು ಮೈಸೂರು, ಮಂಡ್ಯ ಮತ್ತು ಬೆಂಗಳೂರುಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತಿದೆ. ಈಗ ಒಮ್ಮೆ ನೀವು ಯೋಚಿಸಿ ನೀವು ಕುಡಿಯುತ್ತಿರುವುದು ಜೀವ ಜಲವೇ ಅಥವಾ ವಿಷವೆ ಅಂತ. ಕಾವೇರಿ ನದಿ ನೀರು ಕೊಡಗು ಜಿಲ್ಲೆಯಲ್ಲಿಯೇ ಸಿ’ ಕ್ಯಾಟಗೆರಿಯ ನೀರಾಗಿ ಪರಿವರ್ತನೆಯಾಗುತ್ತಿದೆ. ಇದನ್ನು ಪರಿಸರ ಮತ್ತು ಮಾಲಿನ್ಯ ನಿಯಂತ್ರ ಮಂಡಳಿಯ ಅಧಿಕಾರಿಗಳೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಸಿ ಕ್ಯಾಟಗೆರಿ ಎಂದರೆ ಈ ನೀರನ್ನು ಕೈಗಾರಿಕೆಗಳಿಗೆ ಮಾತ್ರ ಬಳಕೆ ಮಾಡಬಹುದು.

ಕಾಡಿನಲ್ಲಿರುವ ಪ್ರಾಣಿಗಳಿಗೂ ಈ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದರ್ಥ. ಇಂತಹ ನೀರನ್ನು ಈಗ ನೀವು ಕುಡಿಯುತ್ತಿರಬಹುದು. ಕಾವೇರಿ ನದಿ ತವರು ಜಿಲ್ಲೆಯಲ್ಲೇ ಇಷ್ಟೊಂದು ಕಲುಷಿತಗೊಳ್ಳುತ್ತಿದ್ದರೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿರುವುದು ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಹಲವು ಹೊಟೇಲ್, ಲಾಡ್ಜ್ಗಳು ಶೌಚಾಲಯದ ನೀರನ್ನು ನೇರವಾಗಿ ಕಾವೇರಿ ನದಿಗೆ ಹರಿಸುತ್ತಿಲಾಗುತ್ತಿದೆ.

ಈ ಬಗ್ಗೆ ಗಮನಕ್ಕೆ ಇದ್ದರೂ ಅಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಸಿದ್ದೇವೆ ಎನ್ನುತ್ತಿದ್ದಾರೆ ವಿನಃ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಪುರಸಭೆ ಹಾಗೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ನದಿ ಸಂರಕ್ಷಣಾ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ಜೀವಜಲ ಎಂದುಕೊಂಡಿರುವ ಕಾವೇರಿ ನದಿ ವಿಷವಾಗುತ್ತಿದ್ದಾಳೆ ಎನ್ನುವುದು ಸುಳ್ಳಲ್ಲ.

click me!