ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಂಡ್ಯ ಬಿಜೆಪಿಯಲ್ಲಿ ಮಹತ್ತರ ಬೆಳವಣಿಗೆ

By Kannadaprabha News  |  First Published Jan 17, 2024, 11:55 AM IST

ಭಾರತೀಯ ಜನತಾ ಪಕ್ಷದ ಜಿಲ್ಲಾ ನೂತನ ಸಾರಥಿಯಾಗಿ ಪಾಂಡವಪುರದ ಡಾ.ಎನ್.ಎಸ್.ಇಂದ್ರೇಶ್ ಆಯ್ಕೆಯಾಗಿದ್ದಾರೆ. ಪಕ್ಷವನ್ನು ಬಲವರ್ಧನೆಗೊಳಿಸುವ ಸಲುವಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಿದ್ದು, ಅದರಂತೆ ಡಾ.ಇಂದ್ರೇಶ್ ಅವರಿಗೆ ಮಂಡ್ಯ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದೆ.


ಮಂಡ್ಯ :  ಭಾರತೀಯ ಜನತಾ ಪಕ್ಷದ ಜಿಲ್ಲಾ ನೂತನ ಸಾರಥಿಯಾಗಿ ಪಾಂಡವಪುರದ ಡಾ.ಎನ್.ಎಸ್.ಇಂದ್ರೇಶ್ ಆಯ್ಕೆಯಾಗಿದ್ದಾರೆ. ಪಕ್ಷವನ್ನು ಬಲವರ್ಧನೆಗೊಳಿಸುವ ಸಲುವಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಿದ್ದು, ಅದರಂತೆ ಡಾ.ಇಂದ್ರೇಶ್ ಅವರಿಗೆ ಮಂಡ್ಯ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದೆ.

ಪಾಂಡವಪುರ ತಾಲೂಕಿನ ನೀಲನಹಳ್ಳಿ ಗ್ರಾಮದ ಡಾ.ಎನ್.ಎಸ್.ಇಂದ್ರೇಶ್ ಅವರು ವೃತ್ತಿಯಲ್ಲಿ ಆಯುರ್ವೇದ ರು. ಔಷಧೀಯ ಉದ್ಯಮದಲ್ಲಿ ತೊಡಗಿರುವ ಅವರು ಪರಿವರ್ತನಾ ಟ್ರಸ್ಟ್ ಮೂಲಕ ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇದೇ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮನಸೋತು ಕಳೆದ ಮೂರು ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Tap to resize

Latest Videos

undefined

ಅತಿ ಕಡಿಮೆ ಅವಧಿಯಲ್ಲಿ ಪಾಂಡವಪುರ ಕ್ಷೇತ್ರದೊಳಗೆ ಬಿಜೆಪಿಗೆ ಸುಭದ್ರ ನೆಲಗಟ್ಟು ದೊರಕಿಸುವುದಕ್ಕೆ ಶ್ರಮಿಸಿದ ಡಾ.ಇಂದ್ರೇಶ್, ಕ್ಷೇತ್ರದ ನಾಯಕತ್ವ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ರಾಜ್ಯ ಮಟ್ಟದ ನಾಯಕರನ್ನು ಕ್ಷೇತ್ರಕ್ಕೆ ಕರೆಸಿಕೊಂಡು ಸಂಚಲನ ಸೃಷ್ಟಿಸಿದ್ದರು. ಇವರ ಸಂಘಟನಾ ಚಾತುರ್ಯ, ಪಕ್ಷ ನಿಷ್ಠೆ, ಕಾರ್ಯವೈಖರಿಯನ್ನು ಪಕ್ಷದ ವರಿಷ್ಠರು ಬಹುವಾಗಿ ಮೆಚ್ಚಿದ್ದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ಸಂದರ್ಭದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿದ್ದರು. ರೈತಸಂಘ ಮತ್ತು ಜೆಡಿಎಸ್ ಜಿದ್ದಾಜಿದ್ದಿನ ಕದನದ ನಡುವೆ ಇಂದ್ರೇಶ್ ಗೆಲುವು ಸಾಧಿಸಲಾಗದೆ ಪರಾಭವಗೊಂಡಿದ್ದರು.

ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲಾದ್ಯಂತ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವ ಸಲುವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಕಳೆದೆರಡು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿದ್ದ ಸಿ.ಪಿ.ಉಮೇಶ್ ಅವರ ಬದಲಿಗೆ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಯುವಕರಾಗಿರುವ ಡಾ.ಇಂದ್ರೇಶ್‌ರವರಿಗೆ ಸಂಕ್ರಾಂತಿ ಉಡುಗೊರೆಯಾಗಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಹಿರಿಯ-ಕಿರಿಯ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೊಸ ಶಕ್ತಿ ತುಂಬುವಂತೆ ತಿಳಿಸಲಾಗಿದೆ.

ಜಿಲ್ಲಾ ಸಮಿತಿಗೆ ಬೆಲೆಯೇ ಇಲ್ಲ..!

ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆಯ್ಕೆ ಸಂಬಂಧ ಸಮಿತಿಯನ್ನು ರಚನೆ ಮಾಡಿ ವರದಿಯನ್ನು ಕೇಳಿತ್ತು. ಅದರಂತೆ ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಸಿ.ಪಿ.ಉಮೇಶ್ ಅವರನ್ನೇ ಮುಂದುವರೆಸುವಂತೆಯೂ ವರಿಷ್ಠರಿಗೆ ಸಮಿತಿ ಶಿಫಾರಸು ಮಾಡಿತ್ತು. ಆದರೆ, ವರಿಷ್ಠರೇ ತೀರ್ಮಾನಿಸುವುದಾಗಿದ್ದರೆ ಸಮಿತಿಯನ್ನು ಏಕೆ ರಚಿಸಬೇಕಿತ್ತು. ಅವರೇ ನಿರ್ಧಾರ ಮಾಡಬಹುದಾಗಿತ್ತು. ಹಾಗಾದರೆ ಜಿಲ್ಲಾ ಸಮಿತಿ ಶಿಫಾರಸಿಗೆ ಏನು ಬೆಲೆ ಸಿಕ್ಕಂತಾಯಿತು. ಒಮ್ಮೆ ಸಮಿತಿ ಸೂಚಿಸಿದ ಆಯ್ಕೆ ಸರಿಯಾಗಿಲ್ಲದಿದ್ದರೆ ಬೇರೆ ಹೆಸರನ್ನು ಕಳುಹಿಸುವಂತೆ ತಿಳಿಸಬಹುದಿತ್ತು. ನಮ್ಮನ್ನೇ ಕಡೆಗಣಿಸಿ ಡಾ.ಎನ್.ಎಸ್‌ಇಂದ್ರೇಶ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಹಲವರು ಬಿಜೆಪಿ ವರಿಷ್ಠರ ಆಯ್ಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸಂಘಟನೆಗೆ ಮೊದಲ ಆದ್ಯತೆ

ಬಿಜೆಪಿ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ನನ್ನ ಮೇಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುವೆ. ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಪಸ್ವರಗಳು ಎದುರಾಗದಂತೆ ಒಗ್ಗಟ್ಟಾಗಿ ಮುನ್ನಡೆಯುತ್ತೇನೆ. ಜಿಲ್ಲಾ ಸಮಿತಿಯಿಂದ ಸಿ.ಪಿ.ಉಮೇಶ್ ಅವರನ್ನೇ ಮುಂದುವರೆಸುವಂತೆ ಶಿಫಾರಸು ಮಾಡಲಾಗಿತ್ತು. ಬಹುತೇಕ ಜಿಲ್ಲೆಗಳ ಆಧ್ಯಕ್ಷರನ್ನು ಬದಲಾವಣೆ ಮಾಡಿದಂತೆ ಮಂಡ್ಯದಲ್ಲೂ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ಒಡಕೂ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಪಕ್ಷದ ಬೆಳವಣಿಗೆಗೆ ಒಟ್ಟಾಗಿ ಶ್ರಮಿಸುತ್ತೇವೆ.

- ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾಧ್ಯಕ್ಷರು, ಬಿಜೆಪಿ

click me!