ಕಾಂಗ್ರೆಸ್ ಬಿಜೆಪಿ ಮತ ಬ್ಯಾಂಕ್ ಲೆಕ್ಕಾಚಾರ, ಕಾಪುವಿನಲ್ಲಿ ಕಡಲು ಕೊರೆತ ನಿರಂತರ!

By Suvarna News  |  First Published Jul 2, 2022, 6:02 PM IST

ಉಡುಪಿಯ ಕಾಪುನಲ್ಲಿ ಕಡಲು ಕೊರೆತ ಮಿತಿಮೀರಿದೆ. ಸಮುದ್ರದ ಅಲೆಗಳು ತೀರ ಪ್ರದೇಶದ ಭೂಮಿಯನ್ನು ನುಂಗಿ ಹಾಕುತ್ತಿದ್ದರೂ, ಜನಪ್ರತಿನಿಧಿಗಳು ಮಾತ್ರ ಮತ ಬ್ಯಾಂಕಿನ ಲೆಕ್ಕಾಚಾರದಲ್ಲಿದ್ದಾರೆ!


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
 
ಉಡುಪಿ (ಜು.2): ಕಾಂಗ್ರೆಸ್ ಬಿಜೆಪಿ ರಗಳೆಯಲ್ಲಿ ಕಡಲ ತೀರದ ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿವೆ. ಉಡುಪಿಯ ಕಾಪು ತಾಲೂಕಿನ ಮೂಳೂರು ಪರಿಸರದಲ್ಲಿ ಕಡಲು ಕೊರೆತ ಮಿತಿಮೀರಿದೆ. ಸಮುದ್ರದ ಅಲೆಗಳು ತೀರ ಪ್ರದೇಶದ ಭೂಮಿಯನ್ನು ನುಂಗಿ ಹಾಕುತ್ತಿದ್ದರೂ, ಜನಪ್ರತಿನಿಧಿಗಳು ಮಾತ್ರ ಮತ ಬ್ಯಾಂಕಿನ ಲೆಕ್ಕಾಚಾರದಲ್ಲಿದ್ದಾರೆ!

ಉಡುಪಿಯಲ್ಲಿ ಮಳೆಯ ಪ್ರಮಾಣವೇನೋ ಕಡಿಮೆಯಾಗಿದೆ. ಆದರೆ ಸಮುದ್ರದ ಅಬ್ಬರ ಮಿತಿಮೀರಿದೆ. ಕಾಪು ತಾಲೂಕಿನ ಮುಳೂರು ಪ್ರತಿ ವರ್ಷ ಕಡಲು ಕೊರೆತಕ್ಕೆ ತುತ್ತಾಗುತ್ತೆ. ಈ ಬಾರಿಯೂ ಇಲ್ಲಿನ ತೊಟ್ಟಂ ಪರಿಸರದಲ್ಲಿ ರಕ್ಕಸ ಗಾತ್ರದ ಅಲೆಗಳು ತಮ್ಮ ಆರ್ಭಟ ತೋರಿಸುತ್ತಿದೆ. ಈಗಾಗಲೇ ಆರೇಳು ತೆಂಗಿನ ಮರಗಳು ಕುಸಿದು ಬಿದ್ದಿವೆ, ಇನ್ನಷ್ಟು ಮರಗಳು ಕುಸಿತದ ಭೀತಿಯಲ್ಲಿವೆ. ಸಮುದ್ರದ ಉಬ್ಬರ ಹೆಚ್ಚಿದಾಗ, ಆಸುಪಾಸಿನ ಮನೆಯ ಅಂಗಳದವರೆಗೂ ಕಡಲ ನೀರು ಬರುತ್ತೆ.

Tap to resize

Latest Videos

ಮಂಗಳೂರಿನಲ್ಲಿ ಮುಳುಗಿದ ಹಡಗಿನಿಂದ ತೈಲ ಸೋರಿಕೆ, ಸ್ಥಳೀಯರಿಗೆ ಆರೋಗ್ಯ ಸಮಸ್ಯೆ!

ಹಾಗಂತ ಇಲ್ಲಿ ತಡೆಗೋಡೆಗೆ ಕಲ್ಲು ತಂದು ಹಾಕಲಾಗಿದೆ. ನಾಲ್ಕೈದು ತಿಂಗಳ ಹಿಂದೆಯೇ ಲಕ್ಷಾಂತರ ಮೌಲ್ಯದ ಕಲ್ಲುಗಳ ಗುಡ್ಡೆ ಹಾಕಲಾಗಿದೆ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿದ ಕಾರಣ, ಬಹುತೇಕ ಬಂಡೆ ಕಲ್ಲುಗಳು ಸಮುದ್ರ ಪಾಲಾಗಿವೆ. ಈ ಅವೈಜ್ಞಾನಿಕ ನಿರ್ವಹಣೆಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ತಡೆ ಗೋಡೆ ನಿರ್ಮಿಸುವ ಗುತ್ತಿಗೆದಾರನಿಗೆ ಹಣ ಪ್ರಾವತಿಸಿಲ್ಲ. ಹಾಗಾಗಿ ಆತ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿದ್ದಾನೆ.

ರಿಸಾರ್ಟ್ ಗಳಿಗೆ ಒಂದು ನೀತಿ ಬಡವರಿಗೆ ಭೀತಿ
ಈ ಭಾಗದಲ್ಲಿ ಅನೇಕ ರೆಸಾರ್ಟುಗಳು, ಹೋಂ ಸ್ಟೇ ಗಳು ಇವೆ. ಕಡಲ ತೀರದಲ್ಲಿರುವ ಈ ಕಟ್ಟಡಗಳಿಗೆ ಹಾನಿಯಾಗದಂತೆ ವೈಜ್ಞಾನಿಕ ತಡೆಗೋಡೆಗಳನ್ನು ಹಾಕಲಾಗಿದೆ. ಆದರೆ, ಬಡವರ ಮನೆಗಳಿರುವ ತೀರ ಪ್ರದೇಶಗಳಲ್ಲಿ ನಿರ್ಲಕ್ಷ ವಹಿಸಲಾಗಿದೆ. ತೊಟ್ಟಂ ಪರಿಸರದಲ್ಲಿ 200 ಕ್ಕೂ ಅಧಿಕ ಮನೆಗಳಿವೆ. ಇಲ್ಲಿನ ನಿವಾಸಿಗಳು ಭಯದಲ್ಲೇ ದಿನ ಕಳೆಯುವಂತಾಗಿದೆ.

Mangaluru; ಭೂ ಸ್ವಾಧೀನಕ್ಕೆ ಸರ್ವೇಗೆ ಬಂದವನ್ನು ತಡೆದು ವಾಪಸ್ ಕಳುಹಿಸಿದ ಗ್ರಾಮಸ್ಥರು!

ಕಾಂಗ್ರೆಸ್ ಬಿಜೆಪಿ ವೋಟ್ ಬ್ಯಾಂಕ್ ಲೆಕ್ಕಾಚಾರ
ಕಾಪು ಶಾಸಕ ಲಾಲಾಜಿ ಮೆಂಡನ್ ಅವರ ಕುಟುಂಬದ ಮನೆ ಇಲ್ಲೇ ಸಮೀಪದಲ್ಲಿದೆ. ಈ ಸಮಸ್ಯೆ ಅವರ ಗಮನಕ್ಕೆ ಬಂದಿಲ್ಲವೆಂದೇನಲ್ಲ. ಆದರೆ ಈ ಭಾಗದ ಜನರು ಕಾಂಗ್ರೆಸ್ ಮತದಾರರು; ಇದೇ ಕಾರಣಕ್ಕೆ ಶಾಸಕರು ಸೂಕ್ತ ತಡೆಗೋಡೆ ನಿರ್ಮಿಸಲು ಅಸಡ್ಡೆ ತರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕ ಕಾಮಗಾರಿಯ ವಿಚಾರದಲ್ಲೂ ಕಾಂಗ್ರೆಸ್-ಬಿಜೆಪಿ ಪಕ್ಷ ನೋಡುವುದು ಸರಿನಾ ಎಂದು ಪ್ರಶ್ನಿಸುತ್ತಿದ್ದಾರೆ?! ಅನೇಕ ಬಾರಿ ಶಾಸಕ ರನ್ನು ಭೇಟಿಯಾದರು ಪ್ರಯೋಜನವಾಗಿಲ್ಲ. ಕೇಳಿದರೆ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ. ಅನಾರೋಗ್ಯ ಪೀಡಿತರು, ಮಕ್ಕಳ ಜೊತೆ ಇಲ್ಲಿ ಬದುಕಲು ಭಯವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಶನಿವಾರ ಈ ಪರಿಸರದಲ್ಲಿ ಕಡಲು ಕೊರತ ಮಿತಿಮೀರಿತ್ತು. ಪದೇ ಪದೇ ತೀರ ಪ್ರದೇಶದ ಮಣ್ಣು ಕುಸಿಯುತ್ತಿತ್ತು. ಆತಂಕಗೊಂಡ ಜನರು ಕಡಲ ತೀರದಲ್ಲೇ ಬಂದು ನಿಂತಿದ್ದರು. ಆರಂಭದ ಮಳೆಗೆ ಪರಿಸ್ಥಿತಿ ಹೀಗಾಗಿದೆ; ಇದು ಮಳೆಗಾಲದ ಆರಂಭವಷ್ಟೇ, ಮುಂದೇನು ಆಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
 

click me!