* ದೂರಿನಲ್ಲಿ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಹೆಸರು ಉಲ್ಲೇಖ
* ಈಶ್ವರಪ್ಪ ಹೆಸರು ತೆಗೆದು ಹಾಕಿದರೆ ಮಾತ್ರ ದೂರು ಸ್ವೀಕರಿಸುತ್ತೇವೆ ಎನ್ನುತ್ತಿರುವ ಪೊಲೀಸರು
* 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆ ನಡೆಸಿದ್ದ ಸಚಿವರು
ಶಿವಮೊಗ್ಗ(ಫೆ.23): ನಗರದಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಇಡೀ ದಿನ ನಡೆದ ಗಲಭೆಯಲ್ಲಿ ಉಂಟಾದ ಹಾನಿಗೆ ಸಂಬಂಧಿಸಿದಂತೆ ನೀಡಿದ ದೂರನ್ನು ಪೊಲೀಸರು(Police) ಸ್ವೀಕರಿಸುತ್ತಿಲ್ಲ ಎಂದು ಮುಸ್ಲಿಂ ಮುಖಂಡರು(Muslim Leaders) ದೂರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾವು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆವು. ದೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಮತ್ತು ಸಂಸದ ರಾಘವೇಂದ್ರ(BY Raghavendra) ಅವರ ಹೆಸರನ್ನು ಉಲ್ಲೇಖಸಿದ್ದೇವೆ. ಪೊಲೀಸರು, ಈಶ್ವರಪ್ಪ ಅವರ ಹೆಸರನ್ನು ತೆಗೆದು ಹಾಕಿದರೆ ಮಾತ್ರ ದೂರು ಸ್ವೀಕರಿಸುತ್ತೇವೆ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.
Shivamogga: ಮುಸ್ಲಿಂ ಗೂಂಡಾಗಳೇ ಹರ್ಷನ ಕೊಲೆ ಮಾಡಿದ್ದು, ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಚಿವರು ಮೆರವಣಿಗೆ ನಡೆಸಿದ್ದಾರೆ. ಈ ವೇಳೆಯಲ್ಲಿ ಗಲಭೆ(Riot) ನಡೆದು ಬಡ ಮುಸ್ಲಿಂ ಜನರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಸಚಿವ ಈಶ್ವರಪ್ಪ ಅವರು ಭಾನುವಾರ ರಾತ್ರಿ ನಡೆದ ಘಟನೆಗೆ ‘ಮುಸ್ಲಿಂ ಗೂಂಡಾಗಳು ಕಾರಣ’ ಎಂದಿದ್ದೇ ಇದಕ್ಕೆ ಕಾರಣ. ಎಲ್ಲರನ್ನೂ ಮುಸ್ಲಿಂ ಗೂಂಡಾಗಳು(Muslim Goons) ಕೊಲೆಗೆ ಕಾರಣ ಎಂದು ಸಾಮಾನ್ಯೀಕರಣಗೊಳಿಸಿದ್ದೇ ಎಲ್ಲ ಘಟನೆಗೂ ಕಾರಣ ಎಂದು ದೂರಿದರು.
ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ
ಗದಗ: ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್(Congress) ಅಲ್ಪಸಂಖ್ಯಾತರ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಮರ ಫಾರೂಕ್ ಹುಬ್ಬಳ್ಳಿ ಮಾತನಾಡಿ, ಕೆಂಪು ಕೋಟೆಯಲ್ಲಿ ಭಾರತ ದೇಶದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದ ಕೆ.ಎಸ್. ಈಶ್ವರಪ್ಪ ಹೇಳಿಕೆಯು ಬೇಜವಾಬ್ದಾರಿ ಮತ್ತು ರಾಷ್ಟ್ರಧ್ವಜಕ್ಕೆ(National Flag) ಅವಮಾನ ಮಾಡಿದ್ದು, ಅಲ್ಲದೇ ಸಂವಿಧಾನದ ವಿರೋಧಿಯಾಗಿದೆ. ಇಂತಹ ದೇಶದ್ರೋಹಿ ಮನೋಭಾವ ಹೊಂದಿದ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಎಂ.ಎನ್. ಶಾಲಗಾರ, ನಿಸಾರಅಹ್ಮದ ಖಾಜಿ, ಎಂ.ಎ. ಡಂಬಳ, ಆರ್.ಎಲ್. ಪೆಂಡಾರ, ಅಶೋಕ ಮಂದಾಲಿ, ಶಾರೂಕ್ ಹುಯಿಲಗೋಳ, ಅಭಿಷೇಕ ಅಂಗಡಿ, ಸಮೀರ ದಂಡಿನ, ಮೆಹಬೂಬ ನದಾಫ, ರಫೀಕ ಧಾರವಾಡ, ರೆಹಾನ ಡಂಬಳ, ಮುಜಹೀದ್ ಪಟೇಲ್, ರಮೇಶ ವಾಲ್ಮೀಕಿ, ರಜಾ ಡಂಬಳ ಉಪಸ್ಥಿತರಿದ್ದರು.
ಈಶ್ವರಪ್ಪಗೆ ನಡ್ಡಾ ತರಾಟೆ
ನವದೆಹಲಿ: ಕೆಂಪುಕೋಟೆಯ ಮೇಲೆ ಮುಂದೊಂದು ದಿನ ಕೇಸರಿ ಧ್ವಜ ಹಾರಾಡಬಹುದು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಬೇಸರ ವ್ಯಕ್ತಪಡಿಸಿದ್ದು, ‘ಈ ಕುರಿತು ಈಶ್ವರಪ್ಪ ಅವರನ್ನು ತರಾಟೆ ತೆಗೆದುಕೊಂಡಿದ್ದೇನೆ’ ಎಂದಿದ್ದಾರೆ.
ರಾಷ್ಟ್ರಧ್ವಜದ ಕುರಿತು ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಹೋರಾಟ ನಡೆಸುತ್ತಿರುವುದರ ನಡುವೆಯೇ ಈ ಹೇಳಿಕೆ ಹೊರಬಿದ್ದಿರುವುದು ಮಹತ್ವ ಪಡೆದಿದೆ.
ಮಂಗಳವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಜೆ.ಪಿ.ನಡ್ಡಾ, ‘ಈಶ್ವರಪ್ಪ ಅವರಿಗೆ ಕರೆ ಮಾಡಿ ಕೇಸರಿ ಧ್ವಜದ(Saffron Falg) ಹೇಳಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದೇನೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ಹಿಜಾಬ್(Hijab) ವಿವಾದದಲ್ಲಿ ಕಾಂಗ್ರೆಸ್ ಪಕ್ಷವನ್ನೂ ತರಾಟೆ ತೆಗೆದುಕೊಂಡಿರುವ ಅವರು, ‘ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ಸಿಗರು ಈ ವಿವಾದ ಹುಟ್ಟು ಹಾಕಿದ್ದಾರೆ. ಅವರಿಗೆ ಹಿಜಾಬ್ ದಳ್ಳುರಿ ಜ್ವಲಿಸುತ್ತಲೇ ಇರಬೇಕು. ನಾವು ಅಭಿವೃದ್ಧಿಯ ವಿಷಯಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.