* ಸಿಲ್ಕ್ ಬೋರ್ಡ್-ಕೆ.ಆರ್.ಪುರ ಕಾಮಗಾರಿಯಿಂದ ಕಿರಿಕಿರಿ
* ಸ್ಥಳೀಯ ನಿವಾಸಿಗಳ ದೂರು
* ರಾತ್ರಿ 10ರ ನಂತರ ಸ್ಥಗಿತ
ಬೆಂಗಳೂರು(ಫೆ.23): ರಾತ್ರಿ ಕಾಮಗಾರಿ ನಡೆಸುವುದರಿಂದ ಉಂಟಾಗುವ ಶಬ್ದದಿಂದ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಮೆಟ್ರೋದ(Metro) ಸಿಲ್ಕ್ ಬೋರ್ಡ್- ಕೆ.ಆರ್.ಪುರ ಕಾಮಗಾರಿಯನ್ನು ರಾತ್ರಿ ವೇಳೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ.
ಮೆಟ್ರೋದ ಎರಡನೇ ಹಂತದ ಕಾಮಗಾರಿ ಹೊರ ವರ್ತುಲ ರಸ್ತೆಯಲ್ಲಿ ಸಾಗುತ್ತಿದೆ. ಒಟ್ಟು 18.23 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಯನ್ನು 2027ರ ಹೊತ್ತಿಗೆ ಮುಗಿಸಲು ಮೆಟ್ರೋ ನಿಗಮ(BMRCL) ಈ ಮೊದಲು ಉದ್ದೇಶಿಸಿತ್ತು. ಆದರೆ 2024ರ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಮುಖ್ಯಮಂತ್ರಿಗಳು ಮೆಟ್ರೋ ನಿಗಮಕ್ಕೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳಿಸಲು ರಾತ್ರಿ-ಹಗಲೆನ್ನದೆ ಕಾಮಗಾರಿ ನಡೆಸಲಾಗುತ್ತಿತ್ತು.
ಆದರೆ ರಾತ್ರಿ ಕಾಮಗಾರಿ ನಡೆಸುವುದರಿಂದ ನಿದ್ರೆಗೆ ಭಂಗ ಬರುತ್ತಿದೆ ಎಂದು ಎಚ್‌ಎಸ್‌ಆರ್ ಬಡಾವಣೆ, ಬೆಳ್ಳಂದೂರು ನಿವಾಸಿಗಳು ಮೆಟ್ರೋ ನಿಗಮಕ್ಕೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿ ರಾತ್ರಿ 10ರ ನಂತರ ಕಾಮಗಾರಿ ನಡೆಸದಿರಲು ನಿರ್ಧರಿಸಲಾಗಿದೆ.
BMTC, Namma Metro ವೀಕೆಂಡ್‌ನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಯಥಾಸ್ಥಿತಿ
ಪಿಲ್ಲರ್(Piller) ಅಳವಡಿಸಲು ಮಣ್ಣು ಕೊರೆಯುವ ಮತ್ತು ಪಿಲ್ಲರ್ ಅಳವಡಿಸುವ ಸಂದರ್ಭದಲ್ಲಿ ವಿಪರೀತ ಶಬ್ದ ಮಾಲಿನ್ಯವಾಗುತ್ತದೆ(Noise Pollution) ಎಂದು ಸ್ಥಳೀಯ ನಿವಾಸಿಗಳು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ರಾತ್ರಿಯ ಹೊತ್ತು ನಿರ್ಮಾಣ ಕಾಮಗಾರಿ ನಡೆಸುವುದನ್ನು ನಿಲ್ಲಿಸಲಾಗಿದೆ. ಆದರೆ ಹೆಚ್ಚು ಸದ್ದು ಮಾಡದ ಚಟುವಟಿಕೆಗಳಾದ ತ್ಯಾಜ್ಯ, ನಿರ್ಮಾಣ ಸಾಮಗ್ರಿಗಳ ಸಾಗಾಟದ ಚಟುವಟಿಕೆಯನ್ನು ಮುಂದುವರಿಸುತ್ತೇವೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದ ನಡುವಿನ ನೀಲಿ ಮಾರ್ಗದ ಮೆಟ್ರೋ ಕಾಮಗಾರಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭಗೊಂಡಿತ್ತು. ಕೆ.ಆರ್.ಪುರವನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹಂತ ಎರಡರ (2ಬಿ) ಕಾಮಗಾರಿ ಇತ್ತೀಚೆಗೆ ಪ್ರಾರಂಭಗೊಂಡಿದೆ.
ಜಪಾನ್ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!
ಬೆಂಗಳೂರು: ನಮ್ಮ ಮೆಟ್ರೋ(Namma Metro) ನಿಗಮ ತನಗೆ ಸೇರಿದ ಕಡಿಮೆ ಜಾಗದಲ್ಲೇ ಜಪಾನಿನ(Japan) ‘ಮಿಯವಾಕಿ’ ಮಾದರಿಯಲ್ಲಿ ದಟ್ಟಕಾಡು(Forest) ಬೆಳೆಸುವ ಮೂಲಕ ನಗರವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ತನ್ನ ಕೊಡುಗೆ ನೀಡಲು ಚಿಂತನೆ ನಡೆಸಿದೆ. ಅರ್ಧ, ಒಂದು ಎಕರೆ ಜಾಗದಲ್ಲಿ ನೂರಾರು ಗಿಡಗಳನ್ನು ನೆಟ್ಟು ಕಾಡನ್ನಾಗಿ ರೂಪಿಸುವುದು ನಿಗಮದ ಯೋಜನೆಯಾಗಿದ್ದು, ಇದಕ್ಕಾಗಿ ಜಪಾನಿನ ಮಿಯಾವಾಕಿ ಮಾದರಿಯನ್ನು ಅನುಸರಿಸಲು ನಿಗಮ ಮುಂದಾಗಿದೆ.
ಅತ್ಯಂತ ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಸ್ಥಳೀಯ ಪ್ರಬೇಧಕ್ಕೆ ಸೇರಿದ ಗಿಡಗಳನ್ನು ನೆಟ್ಟು ದಟ್ಟಕಾಡು ರೂಪಿಸುವ ತಂತ್ರವನ್ನು ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ರೂಪಿಸಿದ್ದ. ಇದನ್ನು ‘ಮಿಯಾವಾಕಿ ವಿಧಾನ’ ಎಂದೇ ಜನಪ್ರಿಯವಾಗಿದೆ. ಹೆಚ್ಚು ಕಡಿಮೆ ಇದೇ ವಿಧಾನ ಬಳಸಿಕೊಂಡು ಕಾಡು ಬೆಳೆಸುವ ಬಗ್ಗೆ ನಿಗಮ ಗಂಭೀರ ಚಿಂತನೆ ನಡೆಸಿದ್ದು, ಮುಂದಿನ ವಾರ ಈ ಬಗ್ಗೆಗಿನ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
Namma Bengaluru: ಮಾನ್ಯತಾ ಬಳಿ ತ್ರಿಪಥ ಮೇತುವೆ ಲೋಕಾರ್ಪಣೆ, ಹೇಗಿದೆ?
ಮಿಯಾವಾಕಿ ವಿಧಾನದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಗಿಡಗಳು ಬೆಳೆದು ಎರಡ್ಮೂರು ವರ್ಷದಲ್ಲಿ ಕಾಡಾಗಲಿದೆ. ಇದು ವಾತಾವರಣದಲ್ಲಿನ ಉಷ್ಣತೆ, ಶಬ್ದ ಮತ್ತು ವಾಯು ಮಾಲಿನ್ಯ ಕಡಿಮೆ ಮಾಡಲು ಅನುಕೂಲಕಾರಿ. ಅದರ ಜೊತೆ ಜೊತೆಗೆ ಹಕ್ಕಿಗಳು, ಚಿಟ್ಟೆಗಳನ್ನು ತಮ್ಮೆಡೆಗೆ ಸೆಳೆಯುತ್ತ ನಗರ ಜೀವ ವೈವಿಧ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈಗಾಗಲೇ ಬಿಡದಿ ಬಳಿ ಮಿಯಾವಾಕಿ ಅರಣ್ಯವಿದ್ದು ನಗರದಲ್ಲಿಯೂ ಇಂತಹ ಅರಣ್ಯ ಸೃಷ್ಟಿಸಬೇಕು ಎಂಬುದು ಮೆಟ್ರೋದ ಉದ್ದೇಶ.
ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇಸ್ಕಾನ್ ದೇವಾಲಯದ ಸಮೀಪ, ಪೀಣ್ಯ ಡಿಪೋ, ಏರೋಸ್ಪೇಸ್ ಪಾರ್ಕ್ನಲ್ಲಿ ಮೆಟ್ರೋಗೆ ಸೇರಿದ ಜಾಗದಲ್ಲಿ ಅರಣ್ಯೀಕರಣ ಮಾಡಲು ಗುರುತಿಸಲಾಗಿದೆ. ಈ ವಾರ ಜಾಗವನ್ನು ಅಂತಿಮಗೊಳಿಸುತ್ತೇವೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.