ಬಿಜೆಪಿ ಕಚೇರಿಗಳಾದ ಪೊಲೀಸ್‌ ಸ್ಟೇಷನ್‌: ಶಿವರಾಜ್‌ ತಂಗಡಗಿ

By Kannadaprabha News  |  First Published Jul 31, 2021, 11:41 AM IST

* ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಟ
* ಬಿಜೆಪಿ ಹೈಕಮಾಂಡ್‌ ಒತ್ತಡದಿಂದಲೇ ಯಡಿಯೂರಪ್ಪ ರಾಜೀನಾಮೆ
* ನೂತನ ಸಿಎಂ ಬೊಮ್ಮಾಯಿಗೆ ಬಿಜೆಪಿಯವರೇ ಅಡ್ಡಗಾಲು


ಕೊಪ್ಪಳ(ಜು.31): ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿಯೇ ಬಿಜೆಪಿಯವರು ತಮ್ಮೆಲ್ಲಾ ವ್ಯವಹಾರ ಮಾಡುತ್ತಿದ್ದಾರೆ. ಪೊಲೀಸ್‌ ಠಾಣೆಗಳೇ ಬಿಜೆಪಿ ಕಚೇರಿಗಳಾಗಿವೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಬಿಜೆಪಿ ಶಾಸಕರು, ನಾಯಕರೆಲ್ಲರೂ ಠಾಣೆಯಲ್ಲಿಯೇ ಡೀಲ್‌ ದಂಧೆ ಶುರು ಮಾಡಿದ್ದಾರೆ.

Tap to resize

Latest Videos

ಕನಕಗಿರಿ, ಕಾರಟಗಿಯಲ್ಲಿ ಮರಳು ದಂಧೆ ಮಿತಿ ಮೀರಿದೆ. ಮೂವರು ಅಧಿಕಾರಿಗಳ ಅಮಾನತಾದ ಬಳಿಕ ಅಲ್ಲಿ ದಾಳಿ ನಡೆದಿದೆ. ಇವರು ಅಮಾನತು ಆಗುವ ಮೊದಲು ಒಂದೂ ದಾಳಿ ನಡೆದಿಲ್ಲ. ಠಾಣೆಯಲ್ಲಿ ಸೀಜ್‌ ಆಗಿರುವ ಮರಳು ಮತ್ತೆ ಕಳ್ಳತನವಾಗುತ್ತದೆ ಎಂದರೆ ಏನರ್ಥ? ಇದಕ್ಕೆ ಬೆಂಬಲ ನೀಡಿದವರು ಯಾರು? ಠಾಣೆಯ ಬಗ್ಗೆ ಜನರು ಏನಂದುಕೊಳ್ಳಬೇಕು ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್‌ ತಂಗಡಗಿ

ಅಪೌಷ್ಟಿಕ ಮಕ್ಕಳು, ಮಹಿಳೆಯರಿಗೆ ಕೊಡಲಾಗುವ ಮೊಟ್ಟೆಯಲ್ಲಿ ಸ್ವತಃ ಶಾಸಕ ಪರಣ್ಣ ಮುನವಳ್ಳಿ ಅವರೇ ಡೀಲ್‌ ಕುದುರಿಸಿರುವುದು ನಾಚಿಕೆಗೇಡು. ಶಾಸಕರು ಡೀಲ್‌ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇಷ್ಟಾದರೂ ಅವರ ಮೇಲೆ ಬಿಜೆಪಿ ಕ್ರಮಕೈಗೊಳ್ಳುತ್ತಲೇ ಇಲ್ಲ. ಮೊದಲು ಅವರ ಶಾಸಕ ಸ್ಥಾನವನ್ನು ರದ್ದುಪಡಿಸಬೇಕು. ಈ ಕುರಿತು ಸಿ.ಎಂ.ಗೆ ಸಮಗ್ರ ವಿವರದೊಂದಿಗೆ ಪತ್ರ ಬರೆಯುವುದಾಗಿ ಹೇಳಿದರು.

ಆರೋಪಿಯೋರ್ವನ ಮದುವೆ ಸಮಾರಂಭದಲ್ಲಿ ಹಾಜರಾದ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿದ್ದರು. ಅನಂತರ ಪುನಃ ಅವರನ್ನು ಅದೇ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಹೀಗಾದರೆ ಕ್ರಮಕೈಗೊಂಡಂತೆ ಆಯಿತೇ? ಎಸ್ಪಿ ಅವರ ಮೇಲೆ ಯಾರು ಒತ್ತಡ ಹಾಕಿದರು? ಇದೆಲ್ಲವೂ ಬಯಲಾಗಬೇಕಾಗಿದೆ ಎಂದರು.

ಇವರನ್ನು ಮತ್ತೆ ಅದೇ ಕೆಲಸಕ್ಕೆ ನಿಯೋಜಿಸಿರುವುದನ್ನು ನೋಡಿದರೆ ಸಿಪಿಐಗೆ ಎಸ್ಪಿಯೇ ಬೆಂಡ್‌ ಆದಂತೆ ಕಾಣುತ್ತಿದೆ. ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ, ಇದಕ್ಕೆ ಅಧಿಕಾರಿಗಳು ಉತ್ತರ ನೀಡಬೇಕು ಎಂದರು.

ಶ್ರೀದೇವಿ ಮಟ್ಕಾ ಪ್ರಕರಣದಲ್ಲಿ ನಾನೇ ಪೊಲೀಸ್‌ ಅಧಿಕಾರಿ ಮೇಲೆ ದೂರು ನೀಡಿದ್ದೆ. ಅದೇ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಪೊಲೀಸರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ನಾನು ಅವರನ್ನು ಟಾರ್ಗೆಟ್‌ ಮಾಡುತ್ತಿದ್ದೇನೆ ಎಂದರಲ್ಲದೇ, ಇಡೀ ಜಿಲ್ಲೆಯಲ್ಲಿ ಅಕ್ರಮ ನಡೆದಿದ್ದು, ಕನಕಗಿರಿ ಹಾಗೂ ಗಂಗಾವತಿಯಲ್ಲಿಯೇ ಹೆಚ್ಚು ಅಕ್ರಮವಿದೆ ಎನ್ನುವುದು ಈಗ ಜಗಜ್ಜಾಹೀರು ಎಂದರು.

ಯೂರಿಯಾ ಕೊರತೆ:

ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಕಾಳಸಂತೆಯಲ್ಲಿ ಹೇರಳವಾಗಿ ದೊರೆಯುವ ಯೂರಿಯಾ ಗೊಬ್ಬರ ರೈತರಿಗೆ ಮಾತ್ರ ಅಂಗಡಿಯಲ್ಲಿ ಸಿಗುತ್ತಿಲ್ಲ. ಕೆಲ ಅಂಗಡಿಯಲ್ಲಿ ಯೂರಿಯಾ ಮಾರಾಟ ಮಾಡುತ್ತಾರೆಯಾದರೂ ನೂರಾರು ಷರತ್ತು ವಿಧಿಸಿದ್ದಾರೆ. ಇದರ ಜೊತೆಗೆ ಈಗ ಡಿಎಪಿ ರಸಗೊಬ್ಬರ ಅಭಾವವೂ ಎದುರಾಗಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದರು. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಾಟನ್‌ ಪಾಷಾ, ಕೃಷ್ಣಾ ಇಟ್ಟಂಗಿ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗವಿಸಿದ್ದನಗೌಡ ವಿ. ಪಾಟೀಲ್‌, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ ಉಪಸ್ಥಿತರಿದ್ದರು.

ನೂತನ ಸಿಎಂ ಬೊಮ್ಮಾಯಿಗೆ ಬಿಜೆಪಿಯವರೇ ಅಡ್ಡಗಾಲು

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಾವೇ ರಾಜೀನಾಮೆ ನೀಡಿದ್ದಾರೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತದೆಯಾದರೂ ಅವರ ರಾಜೀನಾಮೆಗೆ ಬಿಜೆಪಿ ಹೈಕಮಾಂಡ್‌ ಒತ್ತಡವೇ ಮುಖ್ಯ ಕಾರಣ. ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ನಡೆಸಲು ಬಿಜೆಪಿಯವರೇ ಅಡ್ಡಗಾಲು ಆಗಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಮುಖ್ಯಮಂತ್ರಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸುತ್ತೇನೆ. ಅವರು ಉತ್ತಮ ಆಡಳಿತಗಾರರು, ಸಂಭಾವಿತರು. ಆದರೆ, ಅವರಿಗೆ ಕೆಲಸ ಮಾಡಲು ಬಿಡುವುದಿಲ್ಲ. ಈಗಾಗಲೇ ಜಗದೀಶ ಶೆಟ್ಟರ್‌ ಅಸಮಾಧಾನ ಹೊರಹಾಕಿದ್ದಾರೆ, ಇನ್ನು ಹಾಕುವವರು ಇದ್ದಾರೆ. ಇದೆಲ್ಲವನ್ನು ನೋಡಿದರೂ ಆಡಳಿತ ಸುಸೂತ್ರವಾಗಿ ನಡೆಯಲು ಬಿಡುವುದಿಲ್ಲ ಎನ್ನುವುದು ಮಾತ್ರ ಪಕ್ಕಾ ಎಂದರು.
 

click me!