ಬಿಜೆಪಿಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಉಡುಪಿ ಸಾಕ್ಷಿ, ಗುಜರಾತ್‌ನ ರಾಷ್ಟ್ರೀಯ ಮೇಯರ್‌ಗಳ ಅಧಿವೇಶನದಲ್ಲಿ ಪ್ರಧಾನಿ ಮೋದಿ ಶ್ಲಾಘನೆ
ಉಡುಪಿ(ಸೆ.21): ಬಿಜೆಪಿ ಕೈಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಸಾಧ್ಯ ಎಂದು ಜನಸಂಘದ ಕಾಲದಿಂದಲೂ ಕರ್ನಾಟಕದ ಉಡುಪಿಯ ಜನರು ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ 2 ದಿನಗಳ ರಾಷ್ಟ್ರೀಯ ಮೇಯರ್‌ಗಳ ಅಧಿವೇಶನವನ್ನು ಅವರು ಮಂಗಳವಾರ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಉಡುಪಿಯನ್ನು ಉದಾಹರಿಸಿದರು. 60ರ ದಶಕದಿಂದಲೂ ಉಡುಪಿ ನಗರಪಾಲಿಕೆಯಲ್ಲಿ ಜನರು ಜನಸಂಘಕ್ಕೆ ಜನಸೇವೆ ಮಾಡುವ ಅವಕಾಶ ನೀಡಿದ್ದಾರೆ. ಜನಸಂಘ ಅಂದಿನಿಂದಲೂ ಜನಸಾಮಾನ್ಯರ ಮನಸ್ಸಿನಲ್ಲಿ ವಿಶ್ವಾಸ ಉಳಿಸಿಕೊಂಡಿದೆ. ಇಂದಿಗೂ ಉಡುಪಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದ್ದರಿಂದ ಬಿಜೆಪಿಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಉಡುಪಿಯ ಜನರು ತೋರಿಸಿಕೊಟ್ಟಿದ್ದಾರೆ ಎಂದವರು ತಮ್ಮ ಭಾಷಣದಲ್ಲಿ ಉಡುಪಿಯನ್ನು ಕೊಂಡಾಡಿದರು.
ದಕ್ಷಿಣ ಭಾರತದ ಹೆಬ್ಬಾಗಿಲು: 1968ರಲ್ಲಿ ಜನಸಂಘವು ಉಡುಪಿ ಪುರಸಭೆಯಲ್ಲಿ ಬಹುಮತದಿಂದ ಅಧಿಕಾರಕ್ಕೇರುವ ಮೂಲಕ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಚುನಾಯಿತ ಸಂಸ್ಥೆಯೊಂದರಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು. ಆದ್ದರಿಂದ ಉಡುಪಿಯನ್ನು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ ಎಂದರು.
ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ: ಮುತಾಲಿಕ್
5 ದಶಕ ಬಿಜೆಪಿ ಅಧಿಕಾರ: 1997-2002ರಲ್ಲಿ ಮಾತ್ರ ಉಡುಪಿ ನಗರಸಭೆಗೆ ಸುತ್ತಲಿನ 5 ಗ್ರಾಮ ಪಂಚಾಯ್ತಿಗಳಲ್ಲಿ ಅಧಿಸೂಚಿತ ಪ್ರದೇಶಗಳೆಂದು ಸೇರಿಸುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಚುನಾವಣೆ ಬಹಿಷ್ಕರಿಸಿದ್ದವು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ನಡೆಸಿದ್ದರು. ಉಳಿದಂತೆ 5 ದಶಕಗಳಿಂದ ಉಡುಪಿ ನಗರಸಭೆ ಬಿಜೆಪಿಯ ಕೈಯಲ್ಲಿದೆ.
ಚುನಾವಣಾ ಕೇಂದ್ರಿತ ಮಾರ್ಗ ನಗರಾಭಿವೃದ್ಧಿಗೆ ಪೂರಕವಲ್ಲ
ಗಾಂಧಿನಗರ: ಬಿಜೆಪಿ ಅಧಿಕಾರದಲ್ಲಿರುವ ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಮೇಯರ್‌ಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಕೇಂದ್ರಿತ ಮಾರ್ಗಗಳು ನಗರಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾರವು. ನಗರಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಮೇಯರ್‌ಗಳು ನಗರ ನಿರ್ಮಾಣದ ಯೋಜನೆಗಳ ಮೇಲೆ ಗಮನ ಹರಿಸಬೇಕು. ಬೃಹತ್ ನಗರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೈರ್-2 ಮತ್ತು ಟೈರ್-3 ಉಪನಗರಗಳನ್ನು ಸೃಷ್ಟಿಮಾಡುವತ್ತ ಗಮನ ಕೊಡಬೇಕು. ಮುಂದಿನ ಚುನಾವಣೆಯನ್ನು ಮಾತ್ರ ಗುರಿಯಾಗಿಸಿಕೊಂಡು ಕೆಲಸ ಮಾಡಬಾರದು ಎಂದರು. ಈ ಸಭೆಯಲ್ಲಿ 18 ರಾಜ್ಯಗಳ 118 ಮೇಯರ್‌ಗಳು ಮತ್ತು ಉಪ ಮೇಯರ್‌ಗಳು ಭಾಗಿಯಾಗಿದ್ದರು.
ನೀವು ಚುನಾವಣೆಯನ್ನು ಗುರಿಯಾಗಿಸಿಕೊಂಡರೆ ನಗರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಗರಗಳು ಅಭಿವೃದ್ಧಿಯಾಗದಿದ್ದರೆ ಚುನಾವಣೆಯಲ್ಲಿ ಸೋಲು ಉಂಟಾಗಬಹುದು ಎಂದು ಅವರು ಹೇಳಿದರು