26ರಿಂದ ಅ.5ರ ವರೆಗೆ ಪ್ಯಾಕೇಜ್ ಪ್ರವಾಸ, ಬೆಳಗ್ಗೆ 8ರಿಂದ ರಾತ್ರಿ 8.30ರ ವರೆಗೆ ಬಸ್‌ನಲ್ಲಿ ಸಂಚಾರ
ಮಂಗಳೂರು(ಸೆ.21): ಮೈಸೂರು ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ‘ಮಂಗಳೂರು ದಸರಾ ದರ್ಶನ’ ಹೆಸರಿನಲ್ಲಿ ಸೆ.26ರಿಂದ ಅ.5ರ ವರೆಗೆ ಪ್ಯಾಕೇಜ್ ಪ್ರವಾಸ ಆಯೋಜಿಸಲಾಗಿದೆ.
ದಸರಾ ವೇಳೆ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸ ಇದರ ಉದ್ದೇಶ. ಸುಮಾರು 10 ವಿವಿಧ ದೇವಸ್ಥಾನಗಳಿಗೆ ಈ ಪ್ಯಾಕೇಜ್ ಪ್ರವಾಸ ಇರಲಿದ್ದು, ಊಟ, ಉಪಹಾರ ಹೊರತುಪಡಿಸಿ ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ ನಿಗದಿಪಡಿಸಲಾಗಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್ ಆಗಬಹುದು.
ಹಸಿರು ಬಣ್ಣದ ನರ್ಮ್ ಬಸ್‌ನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಒಂದು ಬಸ್‌ನಲ್ಲಿ 40 ಮಂದಿಗೆ ಅವಕಾಶ ಇರುತ್ತದೆ. ಬೆಳಗ್ಗೆ 8 ಗಂಟೆಗೆ ಬಿಜೈ ಬಸ್ ನಿಲ್ದಾಣದಿಂದ ಹೊರಟರೆ, ರಾತ್ರಿ 8.30ಕ್ಕೆ ನಿಲ್ದಾಣಕ್ಕೆ ಮರಳಲಿದೆ. ಚಾಲಕನಲ್ಲದೆ, ಓರ್ವ ಸಹಾಯಕನೂ ಇರಲಿದ್ದಾರೆ. ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್(9663211553) ಆರಂಭಿಸಲಾಗಿದೆ. ಅಲ್ಲದೆ ಬಸ್ ಹೊರಡುವ ಮುನ್ನ ಸ್ಥಳದಲ್ಲೇ ಟಿಕೆಟ್ ಕೂಡ ನೀಡಲಾಗುತ್ತದೆ. ವಯಸ್ಕರಿಗೆ 300 ರು. ಹಾಗೂ 6 ವರ್ಷ ಮೇಲ್ಪಟ್ಟಮಕ್ಕಳಿಗೆ 250 ರು. ನಿಗದಿಪಡಿಸಲಾಗಿದೆ.
ಮಂಗಳೂರು ಶಾರದೆಗೆ ವಾರಣಾಸಿ ಮುಸ್ಲಿಂ ಕುಟುಂಬ ನೇಯ್ದ ಸೀರೆ!
ಎಲ್ಲೆಲ್ಲಿ ದಸರಾ ದರ್ಶನ?:
ಮಂಗಳೂರು ಬಿಜೈ ಬಸ್ ನಿಲ್ದಾಣದಿಂದ ಮಂಗಳಾದೇವಿ ದೇವಸ್ಥಾನ(ಬೆಳಗ್ಗೆ 8ರಿಂದ 9 ಗಂಟೆ), ಮಂಗಳಾದೇವಿಯಿಂದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ವಯಾ ನಂತೂರು, ಗುರುಪುರ ಮೂಲಕ(9.45-10.15), ಪೊಳಲಿಯಿಂದ ಸುಂಕದಕಟ್ಟೆಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ವಯಾ ಗುರುಪುರ, ಕೈಕಂಬ (10.45-11.15), ಸುಂಕದಕಟ್ಟೆ-ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವಯಾ ಎಕ್ಕಾರು(12.45-1 ಗಂಟೆ), ಕಟೀಲು-ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ವಯಾ ಕಿನ್ನಿಗೋಳಿ (12.45-2 ಗಂಟೆ, ಊಟ), ಬಪ್ಪನಾಡು-ಸಸಿಹಿತ್ಲು ಭಗವತಿ ದೇವಸ್ಥಾನ ವಯಾ ಹೆಜಮಾಡಿ(2.30ರಿಂದ 4 ಗಂಟೆ), ಸಸಿಹಿತ್ಲು ಬೀಚ್-ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ ವಯಾ ಸುರತ್ಕಲ್(4.15-4.45), ಚಿತ್ರಾಪುರ-ಉರ್ವ ಮಾರಿಯಮ್ಮ ದೇವಸ್ಥಾನ, ವಯಾ ಲೇಡಿಹಿಲ್(5.15-6.15 ಉಪಹಾರ), ಉರ್ವದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ(6.30-7.30), ಮಂಗಳೂರು ಬಸ್ ನಿಲ್ದಾಣ(8.30) ತಲುಪಲಿದೆ.
ಮೈಸೂರು ದಸರಾ ವೇಳೆ ಮೈಸೂರು ನಗರ ದರ್ಶನ ಪ್ಯಾಕೇಜ್ ಟೂರ್ ಮಾದರಿಯಲ್ಲಿ ಮಂಗಳೂರು ದಸರಾ ದರ್ಶನ ಸಂಚಾರ ರೂಪಿಸಲಾಗಿದೆ. ಸದ್ಯಕ್ಕೆ ಒಂದೇ ಬಸ್ ವ್ಯವಸ್ಥೆಗೊಳಿಸಿದ್ದು, ಬೇಡಿಕೆ ಹೆಚ್ಚಾದರೆ, ಬಸ್ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗುವುದು. ದೇಶ, ವಿದೇಶದಿಂದ ಮಂಗಳೂರು ದಸರಾ ಮಹೋತ್ಸವಗಳಿಗೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ಈ ಪ್ಯಾಕೇಜ್ ಟೂರ್ ಅನುಕೂಲವಾಗಲಿದೆ ಅಂತ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.