
ದಾವಣಗೆರೆ, (ಜುಲೈ 1): ಜಿಹಾದಿ ಮನಸ್ಥಿತಿ ಹೊಂದಿದ ಕೆಲ ಮೂಲಭೂತವಾದಿ ಸಂಘಟನೆಗಳ ಉಗ್ರರಿಂದ ಅಮಾಯಕ ಹಿಂದೂ ಯುವಕನ ಹತ್ಯೆಯಾಗಿದೆ. ಈ ಹಿನ್ನಲೆಯಲ್ಲಿ ಈ ಕೂಡಲೇ ಕೇಂದ್ರವು ರಾಜಸ್ತಾನ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ದಾವಣಗೆರೆ ಜಿಲ್ಲಾ ಬಿಜೆಪಿ ರಾಷ್ಟ್ರಪತಿಗಳನ್ನು ಆಗ್ರಹಿಸಿದೆ.
ಇಂದು(ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ದೇಶದಲ್ಲಿ ಬಹುಸಂಖ್ಯಾತ ಹಿಂದುಗಳು ಇದ್ದರೂ ಸಹ ಭಯಬೀತರಾಗಿ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಕಾರಣ ದೇಶದ ಯಾವುದೇ ಕಡೆಗಳಲ್ಲಿ ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಪ್ರಧಾನಮಂತ್ರಿಗಳು ಕೇಂದ್ರದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ದೇಶದ ಎಲ್ಲ ರಾಜ್ಯಗಳಲ್ಲೂ ಶಾಂತಿ ನೆಲೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕನ್ಹಯ್ಯ ಕೊಲೆ ವಿರೋಧಿಸಿ ಮೂಡಿಗೆರೆ ಬಂದ್, ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಕರೆ
ಕೇವಲ ಒಬ್ಬ ಕಲ್ಲಂಗಡಿ ಮಾರುತ್ತಿದ್ದ ವ್ಯಕ್ತಿಗೆ ತೊಂದರೆಯಾದಾಗ ಬೊಬ್ಬೆಯಿಡುವ ಕಾಂಗ್ರೆಸ್ ಸರ್ಕಾರ ಇಂತಹ ಉಗ್ರ ಕೃತ್ಯ ನಡೆದರೂ ಸಹ ಯಾವುದೇ ಚಕಾರ ಎತ್ತಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಆದರೂ ಸಹ ಹೇಳಿಕೆ ನೀಡಿಲ್ಲ ಕೇವಲ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವಲ್ಲಿ ಸಿದ್ದರಾಮಯ್ಯ ಡಿಕೆಶಿವಕುಮಾರ್ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಸುಮ್ಮನಿದ್ದಾರೆ ಇದು ಖಂಡನೀಯ ಎಂದರು. ಅಲ್ಪಸಂಖ್ಯಾತರಿಗೆ ತೊಂದರೆಯಾದಾಗ ಮಾತ್ರ ಜಾತ್ಯತೀತದ ಮಾತನಾಡುವ ಕಾಂಗ್ರೆಸ್ ಈಗ ಎಲ್ಲಿದೆ. ಅಲ್ಲದೇ ಹಿಂದುಗಳ ಬಗ್ಗೆ ಹಿಂದು ದೇವರುಗಳ ಬಗ್ಗೆ ಅಸಹ್ಯವಾಗಿ ಹೇಳಿಕೆ ನೀಡಿದರೂ ಸುಮ್ಮನಿದ್ದಾರೆ ಯಾವುದೇ ಸಮಸ್ಯೆಗಳನ್ನು ಕಾನೂನು ಮೂಲಕ, ವಾಕ್ ಸಮರದ ಮೂಲಕ, ಖಂಡನೆ ಮೂಲಕ, ಹೋರಾಟದ ಮೂಲಕ ನ್ಯಾಯ ಪಡೆಯಬಹುದು.ಎಲ್ಲದಕ್ಕು ಹತ್ಯೆಯೇ ಪರಿಹಾರ ಅಲ್ಲ. ರಾಜಸ್ಥಾನದಲ್ಲಿ ನಡೆದ ಹೀನ ಕೃತ್ಯ ಖಂಡನೀಯ ಎಂದರು.
ಅಮಾಯಕ ಕನ್ನಯ್ಯಲಾಲ್ ಮೇಲೆ ನಡೆದಿರುವ ಹತ್ಯೆ ನಿಜಕ್ಕೂ ಯಾವುದೇ ದೇಶವೂ ಸಹಿಸದು. ಜಿಹಾದಿ ಮಾನಸಿಕತೆಯ ಕ್ರೂರಿಗಳ ಕ್ರೌರ್ಯಕ್ಕೆ ಕೆಲ ಮುಸ್ಲಿಂ ದೇಶಗಳು ಕುಮ್ಮಕ್ಕು ನೀಡುತ್ತಿವೆ. ಭಾರತದಲ್ಲಿ ಇಂತಹ ಜಿಹಾದಿಗಳು ತಲೆ ಎತ್ತದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾರಣ ಈ ಕೂಡಲೇ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಆಗ್ರಹಿಸಿದರು. ಇಂತಹ ಘಟನೆ ನಡೆದಿದ್ದರೂ ಸಹ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರ ಹಗುರ ಹೇಳಿಕೆ ನೀಡಿರುವುದು ಖಂಡನೀಯ. ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಇದೆಯೋ ಅಲ್ಲೆಲ್ಲಾ ಹಿಂದು ಕಾರ್ಯಕರ್ತರ ಹತ್ಯೆ ನಡೆದಿವೆ. ಅಲ್ಪ ಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಗಳನ್ನಾಗಿ ಮಾಡಲಾಗುತ್ತಿದೆ. ಅವರ ಮತ ಮತಗಳನ್ನು ಪಡೆಯುವ ಸಲುವಾಗಿ ಕಾಂಗ್ರೆಸ್ ಪಕ್ಷ ಜಾತ್ಯತೀತ ಮಂತ್ರ ಪಠನ ಮಾಡುತ್ತದೆ ಜೊತೆಗೆ ಮೂಲಭೂತವಾದಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಡಿಎಸ್ ಶಿವಶಂಕರ್ ಶ್ರೀನಿವಾಸ್ ದಾಸಕರಿಯಪ್ಪ ಬಿಎಸ್ ಜಗದೀಶ್, ವಿಶ್ವಾಸ್ ರಾಕೇಶ್ ಇತರರು ಇದ್ದರು.