
ಗದಗ: ವಿಪವಿಭಾಗದ ಡಿವೈಎಸ್ ಪಿ ಮುರ್ತುಜಾ ಖಾದ್ರಿ ಸೇರಿದಂತೆ 9 ಜನ ಡಿವೈಎಸ್ ಪಿ ಹಂತದ ಅಧಿಕಾರಿಗಳು ಕೆಪಿಎಸ್ ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜೊತೆ ಫೋಟೋಗೆ ಪೋಸ್ ನೀಡಿದ್ದು, ಸದ್ಯ ಈ ಫೋಟೋ ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರಿನ ಪೊಲೀಸ್ ಅಕಾಡಮಿಯಲ್ಲಿ ಈ ಫೋಟೋ ಸೆರೆಹಿಡಿಯಲಾಗಿತ್ತು ಎನ್ನಲಾಗ್ತಿದೆ. 2023/24 ಪಾಸಿಂಗ್ ಔಟ್ ಪರೇಡ್ ನಲ್ಲಿ ಪ್ರತ್ಯಕ್ಷವಾಗಿದ್ದ ಬಸವರಾಜ್ ಕನ್ನಾಳೆ ಸಮವಸ್ತ್ರಧಾರಿ ಅಧಿಕಾರಿಗಳ ಮಧ್ಯೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ.
ಫೋಟೋದಲ್ಲಿ (ಎಡದಿಂದ ಬಲಕ್ಕೆ) ಡೆಪ್ಯೂಟಿ ಸುಪ್ರಿಡೆಂಟ್ ಆಫ್ ಎಕ್ಸೈಸ್ ಹರ್ಷ, ಡಿವೈಎಸ್ ಪಿ ಗೀತಾ ಪಾಟೀಲ, ಡಿವೈಎಸ್ ಪಿ ಮುರ್ತುಜಾ ಖಾದ್ರಿ, ಡಿವೈಎಸ್ ಸಿ ಗಾಯತ್ರಿ, ಡಿವೂಎಸ್ ಪಿ ವಿಶ್ವನಾಥ್, ಮುಡೋಳಪ್ಪ, ಸಂತೋಷ್, ವಿಜಯ ಕ್ರಾಂತಿ, ಮತ್ತೋರ್ವ ಡಿವೈಎಸ್ ಸಿ ಅಧಿಕಾರಿ ಇದ್ದಾರೆ. ಅಧಿಕಾರಿಗಳ ಫೋಟೋ ವಿಷಯವಾಗಿ ಇಲಾಖೆಯ ವಲಯದಲ್ಲೇ ದೊಡ್ಡಮಟ್ಟದ ಚರ್ಚೆ ನಡೆದಿದೆ. ಕನ್ನಾಳೆಗೆ ಪೊಲೀಸ್ ಇಲಾಖೆಯಲ್ಲಾದ ಪರಿಕ್ಷೆಯಲ್ಲೂ ಕೈವಾಡಿ ಇದ್ದಿರಬಹುದು ಎಂಬ ಚರ್ಚೆಯೂ ಹುಟ್ಟುಹಾಕಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಸಂಬಂಧಿಸಿದಂತೆ CID ಅಧಿಕಾರಿಗಳು 5 ದಿನದ ಹಿಂದೆಯಷ್ಟೇ ಬಸವರಾಜ್ ಕನ್ನಾಳೆಯನ್ನ ವಶಕ್ಕೆ ಪಡೆದಿದ್ದಾರೆ. ಬೀದರ್ ಜಿಲ್ಲೆ ಬಾಲ್ಕಿ ಮೂಲದ ಬಸವರಾಜ್ ಕನ್ನಾಳೆ, ತುಮಕೂರು ವಿಶ್ವವಿದ್ಯಾಲಯ ಸಿಡಿಕೆಟ್ ಸದಸ್ಯನೂ ಆಗಿದ್ದ. ರಾಜಕೀಯ ನಾಯಕರ ಜೊತೆಗೂ ಕನ್ನಾಳೆ ಸಂಪರ್ಕಹೊಂದಿದ್ದ. ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕ ಐಎಸ್ ಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಅವರೊಂದಿಗೂ ಕನ್ನಾಳೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಸವರಾಜ್ ಕನ್ನಾಳೆ ಅಕ್ರಮದ ಮಧ್ಯವರ್ತಿಯಾಗಿದ್ದ ಅಂತಾ ತನಿಖೆಯಿಂದ ಹೊರಬಿದ್ದಿದೆ.
ಆರೋಪ ಇರೋ ವ್ಯಕ್ತಿಯ ಜೊತೆ ಅಧಿಕಾರಿಗಳ ನಂಟೇನು? ಫೋಟೋ ತೆಗೆಸಿಕೊಂಡ ಸಂದರ್ಭ ಏನು? ಪೊಲೀಸ್ ಇಲಾಖೆಯಲ್ಲೂ ಕನ್ನಾಳೆ ಪ್ರಭಾವಿ ಇದೆಯಾ ಎನ್ನುವ ಪ್ರಶ್ನೆ ಮೂಡಿಸಿದೆ.