ಬಡ ಬೈಕರ್‌ನ ಬಿಟ್ಟು ಸರ್ಕಾರಿ ಕಾರ್‌ಗಳನ್ನ ಟ್ರಾಫಿಕ್‌ ಪೊಲೀಸರು ಹಿಡಿಯೋದು ಯಾವಾಗ? 3 ವರ್ಷದಲ್ಲಿ 82 ಸಾವಿರ ಕೇಸ್‌, 19 ಕೋಟಿ ಪೆಂಡಿಂಗ್‌!

Published : Sep 05, 2026, 11:24 AM IST
Bengaluru Traffic Police

ಸಾರಾಂಶ

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಮತ್ತು ಪೊಲೀಸ್ ವಾಹನಗಳು 82,000ಕ್ಕೂ ಹೆಚ್ಚು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಬರೋಬ್ಬರಿ 19.56 ಕೋಟಿ ರೂ. ದಂಡ ಬಾಕಿ ಉಳಿಸಿಕೊಂಡಿವೆ. ಒಟ್ಟು ದಂಡದಲ್ಲಿ ಕೇವಲ ₹47.72 ಲಕ್ಷ ಮಾತ್ರ ವಸೂಲಾಗಿದೆ.

ಬೆಂಗಳೂರು (ಸೆ.5): ಸಾಮಾನ್ಯ ನಾಗರಿಕರಿಗೆ ಮಾದರಿಯಾಗಬೇಕಾದ ಸರ್ಕಾರಿ ಹಾಗೂ ಪೊಲೀಸ್ ಇಲಾಖೆಯ ವಾಹನಗಳೇ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿವೆಯೇ? ಇಂತಹದೊಂದು ಗಂಭೀರ ಪ್ರಶ್ನೆಗೆ ಹೌದೆನ್ನುತ್ತಿವೆ ಆಡಳಿತಾತ್ಮಕ ಅಂಕಿ-ಅಂಶಗಳು. ಕಳೆದ ಮೂರು ವರ್ಷಗಳಲ್ಲಿ (2023ರಿಂದ 2026ರ ಜುಲೈವರೆಗೆ) ಕರ್ನಾಟಕದ ಸರ್ಕಾರಿ ಹಾಗೂ ಪೊಲೀಸ್ ಇಲಾಖೆಯ ವಾಹನಗಳು ಬರೋಬ್ಬರಿ 82,000ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ (Traffic Violations) ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಬಾಕಿ ದಂಡದ ಮೊತ್ತ 19.56 ಕೋಟಿಗೆ ತಲುಪಿದೆ!

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾದ ಅಧಿಕೃತ ಮಾಹಿತಿಯ ಪ್ರಕಾರ, ಸರ್ಕಾರಿ ಇಲಾಖೆ ಹಾಗೂ ಪೊಲೀಸ್ ಪಡೆಗೆ ಸೇರಿದ ವಾಹನಗಳ ಮೇಲಿರುವ ಕೋಟ್ಯಂತರ ರೂಪಾಯಿ ದಂಡದಲ್ಲಿ ಅಧಿಕಾರಿಗಳು ಇದುವರೆಗೆ ವಸೂಲಿ ಮಾಡಲು ಸಾಧ್ಯವಾಗಿದ್ದು ಕೇವಲ ₹47.72 ಲಕ್ಷ ಮಾತ್ರ. ಅಂದರೆ ಒಟ್ಟು ದಂಡದ ಶೇ. 97ಕ್ಕಿಂತಲೂ ಹೆಚ್ಚಿನ ಮೊತ್ತ ಇನ್ನೂ ಬಾಕಿಯೇ ಉಳಿದಿದೆ.

ಪೊಲೀಸ್ ಮತ್ತು ಇತರೆ ಇಲಾಖೆಗಳ ಲೆಕ್ಕಾಚಾರ

ಸಲ್ಲಿಕೆಯಾಗಿರುವ ದತ್ತಾಂಶದ ಪ್ರಕಾರ, ಪರಿಶೀಲನಾ ಅವಧಿಯಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧ 3,366 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಆದರೆ, ಇತರೆ ಸರ್ಕಾರಿ ಇಲಾಖೆಗಳಿಗೆ ಸೇರಿದ ವಾಹನಗಳು ಬರೋಬ್ಬರಿ 82,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿವೆ. ಜಿಲ್ಲಾವಾರು ಅಂಕಿ-ಅಂಶಗಳನ್ನು ಗಮನಿಸಿದಾಗ, ಪೊಲೀಸ್ ಅಲ್ಲದ ಇತರೆ ಸರ್ಕಾರಿ ಇಲಾಖೆಯ ವಾಹನಗಳ ಉಲ್ಲಂಘನೆಯಲ್ಲಿ ಮೈಸೂರು ನಗರವು ಪ್ರಮುಖ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಮೈಸೂರಿನಲ್ಲಿ 2024ರಲ್ಲಿ 28,708 ಪ್ರಕರಣಗಳು ಹಾಗೂ 2025ರಲ್ಲಿ 35,870 ಪ್ರಕರಣಗಳು ದಾಖಲಾಗಿವೆ.

ಸಾಮಾನ್ಯರಿಗೊಂದು ನಿಯಮ, ಸರ್ಕಾರಿ ಗಾಡಿಗಳಿಗಿನ್ನೊಂದೇ?

ಸಾಮಾನ್ಯ ಸಾರ್ವಜನಿಕರು ಅಥವಾ ವಾಣಿಜ್ಯ ವಾಹನಗಳ ಮಾಲೀಕರು ಟ್ರಾಫಿಕ್ ದಂಡ ಪಾವತಿಸದಿದ್ದರೆ ವಾಹನಗಳನ್ನು ಬ್ಲಾಕ್‌ಲಿಸ್ಟ್ ಮಾಡಲಾಗುತ್ತದೆ. ಜೊತೆಗೆ ಇನ್ಶೂರೆನ್ಸ್ ನವೀಕರಣ, ಫಿಟ್‌ನೆಸ್ ಸರ್ಟಿಫಿಕೇಟ್ (FC) ಹಾಗೂ ಇತರ ಕಡ್ಡಾಯ ದಾಖಲೆಗಳನ್ನು ಪಡೆಯಲು ಕಷ್ಟವಾಗುತ್ತದೆ. ಆದರೆ, ಸರ್ಕಾರಿ ವಾಹನಗಳ ವಿರುದ್ಧ ಇಂತಹ ಯಾವುದೇ ಕಠಿಣ ಕ್ರಮಗಳು ಜಾರಿಯಾಗದಿರುವುದು ತಾರತಮ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಸರ್ಕಾರದ ಬೊಕ್ಕಸದಿಂದ ದಂಡ ಕಟ್ಟಲ್ಲ, ಚಾಲಕರೇ ಜವಾಬ್ದಾರರು': ಪ್ರಿಯಾಂಕ್ ಖರ್ಗೆ

ಈ ದಂಡದ ಮೊತ್ತವನ್ನು ಸಾರ್ವಜನಿಕರ ತೆರಿಗೆ ಹಣದಿಂದ ಪಾವತಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಕಾರಣಕ್ಕೂ ಸರ್ಕಾರಿ ಅನುದಾನ ಅಥವಾ ಬೊಕ್ಕಸದ ಹಣದಿಂದ ಈ ದಂಡಗಳನ್ನು ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೋಟಾರು ವಾಹನ ಕಾಯ್ದೆಯ (Motor Vehicles Act) ನಿಯಮಾವಳಿಗಳ ಪ್ರಕಾರ, ಸಂಚಾರ ನಿಯಮ ಉಲ್ಲಂಘಿಸಿದ ಆಯಾ ವಾಹನಗಳ ಚಾಲಕರೇ ಕಾನೂನಾತ್ಮಕವಾಗಿ ದಂಡ ಪಾವತಿಸಲು ಹೊಣೆಗಾರರಾಗಿರುತ್ತಾರೆ. ಆದರೆ, ಸರ್ಕಾರಿ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲು ಅಥವಾ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರ ಇದುವರೆಗೆ ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಅಥವಾ ಸರಕಾರಿ ಆದೇಶವನ್ನು ಹೊರಡಿಸಿಲ್ಲ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ದಂಡದ ಹೊಣೆ ನೇರವಾಗಿ ಚಾಲಕನ ಮೇಲಿರುವುದರಿಂದ, ಕೇವಲ ಟ್ರಾಫಿಕ್ ದಂಡದ ಕಾರಣಕ್ಕಾಗಿ ಇಲಾಖಾಮಟ್ಟದ ಶಿಸ್ತು ಕ್ರಮಗಳನ್ನು ಜರುಗಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.

ಸಂಚಾರ ನಿಯಮಗಳು ಸಾರ್ವಜನಿಕರಿಗೂ ಮತ್ತು ಸರ್ಕಾರಿ ನೌಕರರಿಗೂ ಸಮಾನವಾಗಿ ಅನ್ವಯಿಸುತ್ತವೆ ಎಂದು ಸರ್ಕಾರ ಭರವಸೆ ನೀಡಿದೆ. ರಸ್ತೆಗಳಲ್ಲಿ ಅನಗತ್ಯವಾಗಿ ವಾಹನಗಳನ್ನು ತಡೆಯುವ ಬದಲು, ವಿಶೇಷ ತಪಾಸಣಾ ಅಭಿಯಾನಗಳ (Targeted Enforcement Drives) ಮೂಲಕ ಬಾಕಿ ದಂಡವನ್ನು ಪರಿಶೀಲಿಸಿ ವಸೂಲಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಈ ಕೋಟ್ಯಂತರ ರೂಪಾಯಿ ಬಾಕಿ ದಂಡವನ್ನು ಸಂಪೂರ್ಣವಾಗಿ ವಸೂಲಿ ಮಾಡಲು ಇಲಾಖೆಯು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ.

ವರ್ಷವಾರು ಉಲ್ಲಂಘನೆಗಳ ವಿವರ

ವರ್ಷಪೊಲೀಸ್ ವಾಹನಗಳ ಉಲ್ಲಂಘನೆಇತರೆ ಸರ್ಕಾರಿ ವಾಹನಗಳ ಉಲ್ಲಂಘನೆ
202321 ಪ್ರಕರಣಗಳು1,055 ಪ್ರಕರಣಗಳು
20241,494 ಪ್ರಕರಣಗಳು35,832 ಪ್ರಕರಣಗಳು
20251,251 ಪ್ರಕರಣಗಳು38,822 ಪ್ರಕರಣಗಳು
2026 (ಜುಲೈವರೆಗೆ)600 ಪ್ರಕರಣಗಳು7,309 ಪ್ರಕರಣಗಳು

PREV
Read more Articles on
click me!

Recommended Stories

Dharwad: ಕೋನರೆಡ್ಡಿ ಎಸ್ಕಾರ್ಟ್ ವಿವಾದ; ಗೃಹ ಇಲಾಖೆ ಸೈಲೆಂಟ್, ಕಾರ್ಯಕರ್ತ ವೈಲೆಂಟ್! ಪೈಸೆ ಪೈಸೆಯೂ ವಸೂಲಿ ಮಾಡಿ ಎಂದು ಲೋಕಾಯುಕ್ತಕ್ಕೆ ದೂರು!
Second Bengaluru: ಮುಂಬೈ-ಪುಣೆ ಮಾದರಿಯಲ್ಲಿ ತಲೆ ಎತ್ತಲಿದೆ 2ನೇ ಬೆಂಗಳೂರು; ರೇಸ್‌ನಲ್ಲಿ ನಿಮ್ಮೂರು ಇದೆಯಾ ನೋಡಿ!