
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳವು ದಿಢೀರ್ ದಾಳಿ ನಡೆಸಿ 21 ಕೆ.ಜಿ. ಜಿಂಕೆ ಮಾಂಸ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಹೌದು, ಕಾಡುಪ್ರಾಣಿ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ, ಆರೋಪಿಗಳಾದ ಇಲ್ಲಿನ ಬರುವೆ ಗ್ರಾಮದ ಗುರುರಾಜ ಹಾಗೂ ಕರಡಿಗ ಗ್ರಾಮದ ಗಣೇಶ್ ಎರ್ಟಿಗಾ ಕಾರಿನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ. ವಿನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬರುವೆ ಮುಖ್ಯರಸ್ತೆಯಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಎರ್ಟಿಗಾ ಕಾರು ಹಾಗೂ 21 ಕೆ.ಜಿ. ಜಿಂಕೆ ಮಾಂಸವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಚಾರಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳಾದ ಗುರುರಾಜ್ ಹಾಗೂ ಹೊಸನಗರ ತಾಲೂಕು ಮಾನವ ಹಕ್ಕು ಆಯೋಗದ ಅಧ್ಯಕ್ಷ ಎನ್ನಲಾದ ಕರಡಿಗ ನಿವಾಸಿ ಗಣೇಶ್ ಕೆ.ಜಿ. ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನ್ವಯ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಇದೀಗ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಅರಣ್ಯ ಸಂಚಾರಿ ದಳ ವ್ಯಾಪಕ ಬಲೆ ಬೀಸಿದೆ.
ಈ ಕಾರ್ಯಚರಣೆ ವೇಳೆಯಲ್ಲಿ ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ. ವಿನಾಯಕ ಜತೆಗೆ ಸಿಬ್ಬಂದಿಗಳಾದ ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ. ಚಂದ್ರಕಾಂತ್, ಆಂಜನೇಯ ಪಾಟೀಲ್, ಸುರೇಶ್, ಪ್ರಮೋದಿನಿ ಮತ್ತು ಎಚ್.ಬಿ. ದೊಡ್ಡಮನಿ ಭಾಗವಹಿಸಿದ್ದರು.