ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ ನೀಡುವ ಭರವಸೆಯನ್ನು ಸಿಎಂ ಪೂರ್ಣಗೊಳಿಸಿದ್ದಾರೆ , ಆದರೆ ಆಕೆಗೆ ಪುತ್ತೂರಿನಲ್ಲಿ ಉದ್ಯೋಗ ಕೊಟ್ಟರೆ ಹೆಚ್ಚು ಅನುಕೂಲ ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.1): ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ ನೀಡುವ ಭರವಸೆಯನ್ನು ಸಿಎಂ ಪೂರ್ಣಗೊಳಿಸಿದ್ದಾರೆ , ಆದರೆ ಆಕೆಗೆ ಪುತ್ತೂರಿನಲ್ಲಿ ಉದ್ಯೋಗ ಕೊಟ್ಟರೆ ಹೆಚ್ಚು ಅನುಕೂಲ ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯ ಕುಂದಾಪುರದಲ್ಲಿ ಮಾತನಾಡಿದ ಅವರು ಗುತ್ತಿಗೆ ಆಧಾರದ ಮೇರೆಗೆ ಆಕೆಗೆ ಕೆಲಸ ನೀಡುವ ಹೇಳಿಕೆಯನ್ನ ಸಿಎಂ ದೃಢಪಡಿಸಿದ್ದಾರೆ. ಈ ಬಗ್ಗೆ ಪ್ರವೀಣ್ ನೆಟ್ಟಾರು ಧರ್ಮಪತ್ನಿಯವರಿಗೆ ಪತ್ರ ಮುಖೇನ ಮಾಹಿತಿಯನ್ನು ನೀಡಿದ್ದಾರೆ. ಈ ನಡೆಯನ್ನು ನಾನು ಸ್ವಾಗತಿಸುತ್ತೇನೆ, ಸರಕಾರಕ್ಕೆ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಆದರೆ ನೆಟ್ಟಾರು ಅವರ ಧರ್ಮಪತ್ನಿಗೆ ಸಮೀಪದಲ್ಲಿಯೇ ಪುತ್ತೂರಿನಲ್ಲಿ ಕೆಲಸ ನೀಡಿದರೆ ಉತ್ತಮ. ಈ ಉದ್ಯೋಗ ಗುತ್ತಿಗೆ ಆಧಾರದ ಮೇಲೆ ಇದೆ, ಇಲ್ಲಿ ಉದ್ಯೋಗ ಭದ್ರತೆ ಇಲ್ಲ. ಅಸುರಕ್ಷತೆ ಅಭದ್ರತೆ ಕಾಡದ ಹಾಗೆ ಖಾಯಂ ನೌಕರಿ ನೀಡುವ ಕೆಲಸವಾಗಬೇಕಿದೆ. ಈ ವಿಚಾರವಾಗಿ ನಾನು ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಹಾಗೂ ಆಗ್ರಹಿಸುತ್ತೇನೆ ಎಂದಿದ್ದಾರೆ. ಪರೇಶ್ ಮೇಸ್ತ ಪ್ರಕರಣ ಹಳ್ಳ ಹಿಡಿದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್, ಪರೇಶ್ ಮೇಸ್ತನಿಗೂ ಅಕ್ಕ ಇದ್ದು, ಅವರ ಮನೆಯ ಪರಿಸ್ಥಿತಿಯೂ ಬಹಳ ಗಂಭೀರವಾಗಿದೆ. ಬೆಂಗಳೂರಿನ ಹಿಂದೂ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿದ್ದು, ಅವರ ಪತ್ನಿ ಮತ್ತು ಮಕ್ಕಳು ಕಷ್ಟದಲ್ಲಿದ್ದಾರೆ. ಕೊಲೆಯಾದ ಹಿಂದೂ ಕಾರ್ಯಕರ್ತರ ಮನೆಗಳ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಪರೇಶ್ ಮೇಸ್ತ ಪ್ರಕರಣವನ್ನು ಎನ್ ಐ ಎ ಕೈಗೆತ್ತಿಕೊಂಡಿದೆ. ಆದರೆ ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ನಾನು ಇತ್ತೀಚಿಗೆ ಪರೇಶ್ ಮೇಸ್ತ ಮನೆಗೆ ತೆರಳಿದ್ದೇನೆ, ಎನ್ಐಎ ಸೌಜನ್ಯಕ್ಕೂ ಕೂಡ ತನಿಖೆ ಮಾಡಿಲ್ಲ. ಇದು ಎನ್ ಐ ಎ ನಿರ್ಲಕ್ಷವೋ, ಇಲ್ಲಾ ಸರಕಾರದ ಸೂಚನೆಯ ಮೇರೆಗೆ ಈ ರೀತಿ ನಡೆದುಕೊಳ್ಳುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಎನ್ ಐ ಎ ಎಂದಾಕ್ಷಣ ಏನೋ ಒಂದು ಗಂಭೀರ ಆಗುತ್ತದೆ ಎಂದು ತಿಳಿದಿದ್ದೆವು.ಇದು ಸುಳ್ಳು ಎನ್ನುವುದು ಪರೇಶ್‌ಮೇಸ್ತ ಪ್ರಕರಣದಲ್ಲಿ ಗೊತ್ತಾಗಿದೆ. ಕೊಲೆಯಾದ ಹಿಂದೂ ಕಾರ್ಯಕರ್ತರ ಮನೆಯವರಿಗೆ ಆರ್ಥಿಕ ಸದೃಢತೆ ನೀಡಬೇಕು. ಇದು ಸಂಪೂರ್ಣವಾಗಿ ಸರಕಾರದ ಹೊಣೆ ಜವಾಬ್ದಾರಿ ಎಂದು ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ವಿಚಾರದಲ್ಲಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ನೀವು ಪ್ರತಿಕ್ರಿಯಿಸಿದ್ದೀರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮುತಾಲಿಕ್ ಪರೇಶ್ ಮೇಸ್ತ ಪ್ರಕರಣದ ಸಮಯದಲ್ಲಿ ರಾಜ್ಯದಾದ್ಯಂತ ದೊಡ್ಡ ಹೋರಾಟ ನಡೆಯಿತು. ಅದರೆ ಈಗ ಪ್ತಕರಣ ನಿರ್ಲಕ್ಷಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಸದೃಢತೆಯನ್ನು ನೀಡುವ ಕೆಲಸ ಸರ್ಕಾರದಿಂದ ಆಗಬೇಕು .ಅವರ ಮನೆಯವರಿಗೂ ನೌಕರಿಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಸರಕಾರ ಆದೇಶ
ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ವಿಚಾರ
ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಪಾಲನೆ ಮಾಡುವುದು ನನ್ನ ದೃಷ್ಟಿಯಲ್ಲಿ ಸರಿ ಇದೆ. ಧಾರ್ಮಿಕ ವಿಧಿ ವಿಧಾನಗಳಂತೆ ಇರುವ ನೀತಿ ನಿಯಮವನ್ನು ಪಾಲಿಸಬೇಕು. ಪವಿತ್ರ ಸ್ಥಳಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ. ನಿಯಮ, ನೀತಿ, ಭಕ್ತಿ ಭಾವನೆ ಗಳನ್ನು ಬೆಳೆಸುವ ಮತ್ತು ಸಂಸ್ಕಾರ ಮುಖ್ಯ. ಅಯ್ಯಪ್ಪನ ದೇವಸ್ಥಾನಕ್ಕೆ ಹೋಗಬೇಕಾದರೆ ಬರಿಗಾಲಿನಲ್ಲಿ ಕಾಡಿನಲ್ಲಿ 40 ಕಿ.ಮಿ ನಡೆದು ಹೋಗುತ್ತಾರೆ. ದೇವಾಲಯಗಳಿಗೆ ಹೋಗಲು ಅದರದೆ ಆದ ನಿಯಮಗಳಿವೆ. ಪವಿತ್ರ ಕ್ಷೇತ್ರದ ನಿಯಮ ಪಾಲಿಸಿಯೇ ದರ್ಶನ ಮಾಡಬೇಕು. ದೇವಸ್ಥಾನಗಳಲ್ಲಿ ಏನು ನಿಯಮ ಇದೆ ಅದರ ಪಾಲನೆ ಆಗಬೇಕು, ಇದು ಸರಿಯಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ವಸ್ತ್ರ ಸಂಹಿತೆ ಅಗತ್ಯ: ಪ್ರಮೋದ್ ಮುತಾಲಿಕ್
ಆಹಾರ ಪದ್ಧತಿ ಕುರಿತು ಭಾಗವತ ಹೇಳಿಕೆಗೆ ಪ್ರತಿಕ್ರಿಯೆ
ಮಾಂಸಹಾರದ ಕುರಿತ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಧ್ಯಾತ್ಮದ ದೃಷ್ಟಿಯಿಂದ ಸಾತ್ವಿಕತೆಯ ದೃಷ್ಟಿಯಿಂದ ಈ ರೀತಿ ಹೇಳಿರಬಹುದು. ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಬಹುದು. ಆದರೆ ನಮ್ಮ ದೇಶದಲ್ಲಿ ಹಿಂದುಗಳು ಮೆಜಾರಿಟಿ ಮಾಂಸಾಹಾರಿಗಳಿದ್ದಾರೆ. ಆಹಾರದ ದೃಷ್ಟಿಯಿಂದ ಆ ಹೇಳಿಕೆ ಸರಿಯಲ್ಲ. ಮೋಹನ್ ಭಾಗವತ್ ಅವರ ಆ ಹೇಳಿಕೆಯನ್ನು ಒಪ್ಪಲಾರದು ಅಂತಲೂ ಮುತಾಲಿಕ್ ಹೇಳಿದರು.