ಮಾನವೀಯತೆ ಮರೆತ ಬೆಳಗಾವಿ ಸಬ್​ ರಿಜಿಸ್ಟ್ರಾರ್ ಸಿಬ್ಬಂದಿ: ಸ್ಟ್ರೆಚರ್ ಮೇಲೆ ಕಚೇರಿಗೆ ಬಂದ ಅನಾರೋಗ್ಯ ಪೀಡಿತ ವೃದ್ಧೆ!

By Manjunath Nayak  |  First Published Oct 1, 2022, 6:59 PM IST

Belagavi News: ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ಬೆಡ್ ಮೇಲೆಯೇ ಕಚೇರಿಗೆ ಕರೆಸಿ ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಅ. 01): ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ವೃದ್ಧೆಯೋರ್ವಳನ್ನು ಉಪನೋಂದಣಾಧಿಕಾರಿ  ಕಚೇರಿಗೆ ಕರೆಸಿ ಹೆಬ್ಬಟ್ಟು ಒತ್ತಿಸಿಕೊಂಡ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ಬೆಡ್ ಮೇಲೆಯೇ ಕಚೇರಿಗೆ ಕರೆಸಿ ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 80 ವರ್ಷದ ವೃದ್ಧೆಯೋರ್ವಳನ್ನು ಸ್ಟ್ರೆಚರ್ ಮೇಲೆ ಉಪನೋಂದಣಾಧಿಕಾರಿ ಕಚೇರಿಗೆ ಬಂದು ಹಕ್ಕು ಬಿಟ್ಟ ಪತ್ರಕ್ಕೆ ಹೆಬ್ಬಟ್ಟು ಒತ್ತಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Tap to resize

Latest Videos

ಮೂಲತಃ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ಮಹಾದೇವಿ ಅಗಸಿಮನಿ ವಯೋಸಹಜ ಕಾಯಿಲೆಗಳಿಂದ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ ಕಳೆದ ವಾರ ದಾಖಲಾಗಿದ್ದರು. ದಿನದಿಂದ ದಿನಕ್ಕೆ ಆರೋಗ್ಯ ಸ್ಥೀತಿ ಹದಗೆಟ್ಟಿದ್ದರಿಂದ ತನ್ನ ಆಸ್ತಿಯ ಹಕ್ಕುಗಳನ್ನು ಮಗಳು ಮತ್ತು ಮಗನಿಗೆ ಬಿಟ್ಟುಕೊಡುವ ನಿರ್ಧಾರವನ್ನು ವೃದ್ಧೆ ವ್ಯಕ್ತಪಡಿಸಿದ್ದರಂತೆ.‌ 

ಆಗ ವೃದ್ಧೆಯ ಮಗ ರವೀಂದ್ರ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ವಿಚಾರಿಸಿದ್ದರಂತೆ. ಆದ್ರೆ ವೃದ್ಧೆ ದಾಖಲಾಗಿರುವ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರಲ್ಲ ಬೆಳಗಾವಿ ಉತ್ತರ ವಲಯ ವ್ಯಾಪ್ತಿಗೆ ಬರುತ್ತೆ, ನೀವೇ ಕರೆದುಕೊಂಡು ಬನ್ನಿ ನಾವು ಬರಕ್ಕಾಗಲ್ಲ ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರಂತೆ. 

ರಸ್ತೆ ಅವ್ಯವಸ್ಥೆ: ಅಸ್ವಸ್ಥ ವೃದ್ಧೆಯನ್ನು ಹೊತ್ತು ಆಸ್ಪತ್ರೆಗೆ ಸಾಗಿಸಿದ ಸಂಬಂಧಿಕರು!

ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ವೃದ್ಧೆಯನ್ನು ವಿಧಿಯಿಲ್ಲದೇ ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದು ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ‌. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ವೃದ್ಧೆ ಮಹಾದೇವಿ ಅಗಸಿಮನಿ ಕುಟುಂಬಸ್ಥರು ನಿರಾಕರಿಸಿದ್ದಾರೆ. 

ನನಗೇನೂ ಗೊತ್ತಿಲ್ಲ ಅಂದ್ರು ಸಹಾಯಕ ಉಪನೋಂದಣಾಧಿಕಾರಿ: ಇತ್ತ ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ತೆರಳಿದಾಗ ಉಪನೋಂದಣಾಧಿಕಾರಿ ಪದ್ಮನಾಭ ಗುಡಿ ರಜೆ ಮೇಲಿದ್ದಾರೆ ಎಂದು ಸಹಾಯಕ ಉಪನೋಂದಣಾಧಿಕಾರಿ ಸಚೀನ್ ಮಂಡೇದ್ ತಿಳಿಸಿದರು. 

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಉಪನೋಂದಣಾಧಿಕಾರಿ ಸಚಿನ್ ಮಂಡೇದ್, 'ನಾನು ನಿನ್ನೆ ಇದ್ದಿರಲಿಲ್ಲ ಸಬ್ ರಿಜಿಸ್ಟ್ರಾರ್ ಇದ್ದರು, ಅವರಿಂದು ರಜೆ ಮೇಲೆ ತೆರಳಿದ್ದಾರೆ. ಕಂಪ್ಯೂಟರ್ ಆಪರೇಟರ್ ಹತ್ತಿರ ಕೇಳಿದಾಗ ನನಗೆ ಈ ಬಗ್ಗೆ ಗೊತ್ತಾಗಿದೆ. ಹಕ್ಕು ಬಿಟ್ಟ ಪತ್ರ ಮಾಡಿಸಲು ಅಜ್ಜಿಯನ್ನು ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದಿದ್ದರು. ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸಿದ ಬಗ್ಗೆ ನನಗೆ ಗೊತ್ತಿಲ್ಲ. ಅರ್ಜಿ ಕೊಟ್ರೆ ನಾವು ಪ್ರೈವೆಟ್ ಅಟೆಂಡೆನ್ಸ್ ಮಾಡ್ತೀವಿ. ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸುವ ವೇಳ 1000 ರೂ‌. ಶುಲ್ಕ ಪಾವತಿಸಬೇಕಿರುತ್ತೆ. ಆಗ ನಾವು ಓರ್ವ ಸಿಬ್ಬಂದಿ ನೇಮಿಸಿ ಕಳಿಸಿರುತ್ತೇವೆ' ಎಂದು ತಿಳಿಸಿದ್ದಾರೆ‌. ಇನ್ನು ಹಣ ನೀಡದ ಹಿನ್ನೆಲೆ ಕಚೇರಿಗೆ ಕರೆದುಕೊಂಡು ಬರುವಂತಾಯ್ತು ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿನ್ ಮಂಡೇದ್, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ‌.

ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರಲ್ಲ ಎಂದ್ರು ದಕ್ಷಿಣ ವಿಭಾಗದ ಸಬ್‌ರಿಜಿಸ್ಟ್ರಾರ್:  ಇನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಪದ್ಮನಾಭ ಗುಡಿ, 'ಕುಟುಂಬಸ್ಥರಿಗೆ ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಹಾಕಿ ಕೊಡಬೇಕು ಅಂತಾ ಹೇಳಿದ್ದೆವು. ನಮಗೆ ಇವತ್ತೇ ಡಾಕ್ಯುಮೆಂಟ್ ಬೇಕು ಅಂತಾ ಹೇಳಿದರು. ವೃದ್ಧೆ ದಾಖಲಾಗಿರುವ ಆಸ್ಪತ್ರೆ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರಲ್ಲ. ಉತ್ತರ ವಿಭಾಗದ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುತ್ತೆ. 

ಇಂತಹ ಸಂದರ್ಭದಲ್ಲಿ ನಾವು ಬೇರೆ ಕಚೇರಿಗೆ ರೆಫರ್ ಮಾಡಬೇಕು‌. ನಮಗೆ ಅವರು ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಬಂದು ಮೌಖಿಕವಾಗಿ ರೆಫರ್ ಮಾಡೋಕೆ ಹೇಳಿದ್ರು. ಒಂದು ಗಂಟೆ ಆಗುತ್ತದೆ ಅಂತಾ ಹೇಳಿದ್ವಿ. ಆ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬಂದಿದ್ದರೆ ನಾವು ಹೋಗುತ್ತಿದ್ದೆವು. ಅದ್ರೆ ಅವರು ದಾಖಲಾಗಿದ್ದ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರಲ್ಲ, ಆ ವ್ಯಾಪ್ತಿಗೆ ಸಂಬಂಧ ಪಟ್ಟ ಉಪನೋಂದಣಾಧಿಕಾರಿ ಕಚೇರಿಗೆ ಅವರು ಸಂಪರ್ಕಿಸಬೇಕು' ಎಂದು ತಿಳಿಸಿದ್ದಾರೆ.

Belagavi; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಥಣಿ ಯುವಕ

ಇನ್ನೂ ಉತ್ತರ ವಲಯ ಉಪನೋಂದಣಾಧಿಕಾರಿ ರವೀಂದ್ರ ಹಂಚಿನಾಳರನ್ನು ಕೇಳಿದರೆ, 'ಈ ಪ್ರಕರಣದ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಈ ರೀತಿಯ ಪ್ರಕರಣಗಳು ಇದ್ರೆ ಆಯಾ ಕಚೇರಿಯಲ್ಲಿ ರಜಿಸ್ಟ್ರೇಶನ್ ಮಾಡಿ ಜಿಲ್ಲಾ ನೋಂದಣಾಧಿಕಾರಿಗೆ ಪತ್ರ ಕೊಡಬೇಕು. ಜಿಲ್ಲಾ ನೋಂದಣಾಧಿಕಾರಿ  ತಿಳಿಸಿದ ಬಳಿಕ ಬೇರೆ ಕಚೇರಿಯ ಸಿಬ್ಬಂದಿ ಹೋಗಿ ಅಲ್ಲಿ ಸಹಿ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿದಿದ್ದಾರೆ.

ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮೂಲಸೌಕರ್ಯ ಕೊರತೆ: ಇನ್ನು ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮೂಲ ಸೌಕರ್ಯವಿಲ್ಲ ಹಾಗೂ ಅಧಿಕಾರಿಗಳ ದರ್ಪ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬೆಳಗಾವಿ ದಕ್ಷಿಣ ವಲಯಕ್ಕೆ ಪ್ರತ್ಯೇಕವಾಗಿ ಉಪನೋಂದಣಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. 

ಹಳೆಯ ಬಿಎಸ್‌ಎ‌ನ್‌ಎಲ್ ಕಸ್ಟಮರ್ ಕೇರ್ ಸೆಂಟರ್‌ ಇದ್ದ ಕಟ್ಟಡದಲ್ಲಿ ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿ ನಡೆಸಲಾಗುತ್ತಿದೆ. ಈ ಕಚೇರಿಗೆ ಬಂದ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯಕ್ಕೆ ತೆರಳಲು ಸಹ ಯಾವುದೇ ವ್ಯವಸ್ಥೆ ಇಲ್ಲ ಎಂದು ಕಚೇರಿಗೆ ಕೆಲಸ ನಿಮಿತ್ತ ಬಂದಂತಹ ವಕೀಲ ಸದಾಶಿವ ಹಿರೇಮಠ ಆರೋಪಿಸಿದ್ದಾರೆ. ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆಯ ಆಗರವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ತಾಯಿಯ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವದರಿಂದ ಮಗಳು ವಿದ್ಯಾ ಹಾಗೂ ಮಗ ರವೀಂದ್ರನಾಥ ಅಗಸಿಮನಿ ಹಕ್ಕು ಬಿಟ್ಟ ಪತ್ರ ಸಹಿ ಮಾಡಿಸಲು ಮುಂದಾಗಿದ್ದರು‌. ಇಂತಹ ಸಂದರ್ಭಗಳಲ್ಲಿ ಖಾಸಗಿ ಹಾಜರಾತಿ ನಿಯಮ ಅನ್ವಯ ಶುಲ್ಕ ಪಾವತಿಸಿಕೊಂಡು ಸಂಬಂಧ ಪಟ್ಟ ಸಿಬ್ಬಂದಿಯನ್ನು ಆಸ್ಪತ್ರೆಗೆ ಕಳುಹಿಸಿ ಸಹಿ ಮಾಡಿಸಿಕೊಳ್ಳಬೇಕಿತ್ತು. ಆದರೆ ಮಾನವೀಯತೆ ಮರೆತು ಸ್ಟ್ರೆಚರ್ ಮೇಲೆ ವೃದ್ಧೆಯನ್ನು ಕಚೇರಿಗೆ ಕರೆಯಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ‌.

click me!