ಕೋಣ ಬಲಿಗೆ ಅಧಿಕಾರಿಗಳ ತಡೆ: ಭಕ್ತರ ಹಟ, ದೇಗುಲಕ್ಕೆ ಬೀಗ

By Kannadaprabha NewsFirst Published Mar 12, 2020, 1:11 PM IST
Highlights

ಮಧುಗಿರಿಯ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವರ ಜಾತ್ರೆಯಲ್ಲಿ ಮೊದಲ ದಿನವೇ ವಿಘ್ನವಾಗಿದ್ದು, ಕೋಣ ಬಲಿಗೆ ಒತ್ತಾಯಿಸಿ ಭಕ್ತರು ದೇಗುಲಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ.

ತುಮಕೂರು(ಮಾ.12: ಮಧುಗಿರಿಯ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವರ ಜಾತ್ರೆಯಲ್ಲಿ ಮೊದಲ ದಿನವೇ ವಿಘ್ನವಾಗಿದ್ದು, ಕೋಣ ಬಲಿಗೆ ಒತ್ತಾಯಿಸಿ ಭಕ್ತರು ದೇಗುಲಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ.

ಕಳೆದ 3 ವರ್ಷದಿಂದ ಕೋಣ ಬಲಿಗೆ ಸರ್ಕಾರ ನಿರ್ಭಂದ ಹೇರಿದ್ದ ಪರಿಣಾಮ ಉಪವಿಭಾಗದಲ್ಲೇ ಮಳೆ ಬೆಳೆಯಿಲ್ಲದೆ ಸಾಂಕ್ರಾಮಿಕ ರೋಗಗಳು ತಲೆಎತ್ತಿವೆ. ಇದು ಕೋಣ ಬಲಿ ನೀಡದ ಕಾರಣದಿಂದ ನಡೆದಿದೆ ಎಂದು ಕೆಲ​ವ​ರು ಕೋಣ ಬಲಿಗೆ ಅವಕಾಶ ನೀಡುವಂತೆ ಕಳೆದ ಸಭೆಯಲ್ಲಿ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದರು.

ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ್ ಹಾಗೂ ದರದ ಬೋರ್ಡ್ ಕಡ್ಡಾಯ

ಆಗ ಸುಮ್ಮನಿದ್ದ ಅಧಿಕಾರಿಗಳು ಬುಧವಾರ ಮುಂಜಾನೆ ಕೋಣ ಬಲಿಗೆ ತಡೆಯೊಡ್ಡಿದ್ದರು. ಇದರಿಂದ ರೋಸಿ ಹೋದ ಮಹಿಳಾ ಭಕ್ತರೇ ದೇಗುಲದ ಜಾತ್ರಾ ಕಾರ್ಯವನ್ನು ನಡೆಸಲು ಬಿಡಲ್ಲ.ನಾವೂ ಇಲ್ಲೇ ಕೂರುವುದಾಗಿ ದೇಗುಲಕ್ಕೆ ಬೀಗ ಜಡಿದು ಕೂತರು.

ಇತಿಹಾಸದಲ್ಲಿ ಎಂದೂ ಭಕ್ತರ ಈ ರೀತಿಯ ವರ್ತನೆಯನ್ನು ಕಾಣದ ಅಧಿಕಾರಿಗಳು ತಬ್ಬಿಬ್ಬಾದರು. ಕೋಣವನ್ನು ಹಿಡಿದು ಬಲಿಗೆ ಸಿದ್ಧಗೊಳಿಸಲು ಮುಂದಾದ ಭಕ್ತರನ್ನು ಚದುರಿಸಲು ಹರಸಾಹಸ ಪಟ್ಟರು. ಒಮ್ಮೆ ಲಾಠಿ ಬೀಸುವ ಪ್ರಸಂಗವು ಎದುರಾಗಿದ್ದು, ಮಹಿಳಾ ಭಕ್ತರು ರೊಚ್ಚಿಗೆದ್ದು, ದೇಗುಲಕ್ಕೆ ಬೀಗ ಜಡಿದರು.

ದೇವಾಲಯದಲ್ಲಿ ಡಿಸಿ, ಎಸ್ ಪಿ ಕಾವಲು : ಅಜ್ಞಾತ ಸ್ಥಳದಲ್ಲಿ ಕೋಣ ಬಲಿ

ಮುಂಜಾನೆ 4ಕ್ಕೆ ನಡೆಯಬೇಕಿದ್ದ ಬಲಿಯ ಧಾರ್ಮಿಕ ಕಾರ್ಯವು ಬೆಳಗ್ಗೆ 9 ಗಂಟೆಯಾದರೂ ನಡೆದಿರಲಿಲ್ಲ. ಮಹಿಳಾ ಭಕ್ತರು ದೇಗುಲಕ್ಕೆ ಅಡ್ಡಲಾಗಿದ್ದು ಬಲಿಗೆ ಅವಕಾಶ ನೀಡುವಂತೆ ಘೋಷಣೆ ಕೂಗುತ್ತಿದ್ದರು. ಸ್ಥಳಕ್ಕೆ ಬಂದ ತಹಸೀಲ್ದಾರ್‌ ಡಾ. ವಿಶ್ವನಾಥ್‌ ಹಾಗೂ ಡಿವೈಎಸ್ಪಿ ಸೂರ್ಯನಾರಾಯಣ್‌ ರಾವ್‌, ಭಕ್ತರನ್ನು ಮನವೊಲಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾಯ್ತು. ಬಲಿಗೆ ಅವಕಾಶ ನೀಡದ ಮೇಲೆ ನಿತ್ಯ ನಡೆಯುವ ಖಸಾಯಿ ಖಾನೆಯ ಕೃತ್ಯವನ್ನು ಹೇಗೆ ನೋಡುತ್ತಿದ್ದೀರಿ. ಎಲ್ಲರಿಗೂ ಒಂದೇ ನ್ಯಾಯ ಪಾಲಿಸಬೇಕು ಎಂದು ಘೋಷಣೆ ಕೂಗಿದರು.

ಬಲಿಗೆ ಅವಕಾಶ ನೀಡದಂತೆ ಪಟ್ಟಣದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ವೈ.ಶಿವಕುಮಾರ್‌ ದೂರು ನೀಡಿದ್ದರ ಪರಿಣಾಮ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಯ್ತು, ಮಹಿಳಾ ಭಕ್ತರು ಈತನ ಮೇಲೆ ಹಿಡಿಶಾಪ ಹಾಕುತ್ತಿದ್ದದ್ದು ಕಂಡುಬಂತು.

ರಸ್ತೆಗಿಳಿದ ಶಕ್ತಿದೇವಿಯ ಉತ್ಸವ ಮೂರ್ತಿ:

ಅಧಿಕಾರಿಗಳು ಬಲಿಗೆ ಅವಕಾಶ ನೀಡದಕ್ಕೆ ಆಕ್ರೋಶ ಭರಿತರಾದ ಭಕ್ತರು, ದೇವಿಯ ಉತ್ಸವ ಮೂರ್ತಿಯನ್ನೇ ರಸ್ತೆಯಲ್ಲಿಟ್ಟು ರಸ್ತೆ ತಡೆ ನಡೆಸಲು ಮುಂದಾಗಿ ವಿಗ್ರಹವನ್ನು ರಸ್ತೆಗೆ ತಂದರು. ಭಕ್ತರ ಈ ಪ್ರಯತ್ನವನ್ನು ವಿಫಲಗೊಳಿಸಿದ ಪೊಲೀಸರು ಮನವೊಲಿಸಿ ವಾಪಸ್‌ ಕರೆತಂದರು.

ಭರವಸೆ ನೀಡಿದ ಉಪವಿಭಾಗಾಧಿಕಾರಿ:

ಭಕ್ತರ ವರ್ತನೆಯಿಂದ ಕೊಂಚ ವಿಚಲಿತರಾದ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಬೆ.10.30ಕ್ಕೆ ಸ್ಥಳಕ್ಕೆ ಆಗಮಿಸಿ ಭಕ್ತರು ಹಾಗೂ ದೇಗುಲದ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚಿಸಿದರು. ಕಾನೂನಾತ್ಮಕವಾಗಿ ಬಲಿಗೆ ಅವಕಾಶವಿಲ್ಲ. ಇದರಿಂದ ನಮಗೂ ಧರ್ಮಸಂಕಟವಾಗಿದೆ. ನೀವುಗಳೇ ಭಕ್ತರನ್ನು ಮನವೊಲಿಸಿ ಎಂದರು. ಇದನ್ನು ನಿರಾಕರಿಸಿದ ಭಕ್ತರನ್ನು ಕೊನೆಯಲ್ಲಿ ಮುಂದೆ ಈ ರೀತಿಯಾಗದಂತೆ ಕ್ರಮವಹಿಸುತ್ತೇನೆ. ಈ ಬಾರಿ ಜಾತ್ರಾ ಮಹೋತ್ಸವ ನಡೆಯಲು ಅವಕಾಶ ನೀಡುವಂತೆ ಭಕ್ತರಲ್ಲಿ ಮನವಿ ಮಾಡಿದರು. ನಂತರ ಭಕ್ತರು ದೇಗಲದ ಬೀಗ ತಗೆದು ಆರತಿ ಸೇವೆಗೆ ಮುಂದಾದರು. ಘಟನೆಯನ್ನು ಪೊಲೀಸರು ಸಮರ್ಪಕವಾಗಿ ನಿಭಾಯಿಸಿದ್ದು, ಸಿಪಿಐ ನದಾಫ್‌, ಪಿಎಸೈ ಕಾಂತರಾಜು, ಪಾಲಾಕ್ಷಫ್ರಭು, ಹನುಮಂತರಾಯಪ್ಪ, ನೇತೃತ್ವದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

click me!