ಸಾಂಗ್ಲಿ ಸಂಸ್ಥಾನದ ಗಿಡಗಳಿಗೆ ಕೊಡಲಿ ಪೆಟ್ಟು| ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಮರಗಳ ಹನನ| ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದಕ್ಕೆ ಪರಿಸರ ಪ್ರೇಮಿಗಳ ಬೇಸರ|
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಮಾ.12): ಜಾಗತಿಕ ತಾಪಮಾನ ಕಡಿತಕ್ಕೆ ನಾನಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಒಂದೆಡೆ ಮುಂದಾದರೆ, ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತ ಮರಗಳನ್ನೇ ಕಡಿಯುವ ಮೂಲಕ ತಾಪಮಾನ ಏರಿಕೆಗೆ ಸರ್ಕಾರವೇ ಕಾರಣವಾಗುತ್ತಿದೆ.
ರಬಕವಿ ಬನಹಟ್ಟಿ ನಗರದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಸಾಂಗ್ಲಿ ಸಂಸ್ಥಾನದಲ್ಲಿ ನೆಟ್ಟ ನೂರಾರು ವರ್ಷಗಳ ಮರಗಳನನ್ನೇ ಕಡಿಯುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಗ್ಲಿ ಸಂಸ್ಥಾನದಲ್ಲಿ ರಸ್ತೆ ಬದಿಗೆ ನೆಟ್ಟ ನೂರಾರು ಆಲ, ಹುಣಸೆ ಸೇರಿದಂತೆ ಇನ್ನಿತರ ಔಷಧ ಜಾತಿಯ ಬೃಹತ್ ಮರಗಳಿಗೆ ಕಳೆದ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಕಡಿಯಲು ಆರಂಭಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಭಿವೃದ್ಧಿ ಹಿತದೃಷ್ಟಿಯಿಂದ ಒಪ್ಪಿಕೊಳ್ಳುವ ಕೆಲವರು ಹತ್ತಾರು ವರ್ಷಗಳಿಂದ ನೆರಳು ನೀಡಿದ ಗಿಡಗಳು ಕಣ್ಮುಂದೆ ನೆಲಕ್ಕುರುಳುಸುತ್ತಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಅಭಿವೃದ್ಧಿ ನೆಪದಲ್ಲಿ ನೂರು ವರ್ಷಗಳ ಇತಿಹಾಸವಿರುವ ಮರಗಳನ್ನು ಕಡಿದು ಸಸ್ಯಗಳ ಮಾರಣ ಹೋಮ ಮಾಡುವ ಬದಲು ಪರ್ಯಾಯ ವ್ಯವಸ್ಥೆಯ ಮಾರ್ಗಗಳನ್ನು ಹುಡಕಬೇಕಾದ ಅನಿವಾರ್ಯತೆ ಇದೆ. ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳ ಕಡಿಯದೇ ಇನ್ನಷ್ಟು ಮರಗಳ ಬೆಳೆಸುವ ಕಾರ್ಯವಾಗಲಿ ಎಂಬುವುದು ಆಶಯ.
ಖಾಲಿ ರಸ್ತೆಯಲ್ಲಿಯೇ ವಿಹಾರ!
ಕಳೆದ ವರ್ಷ 25 ಗಿಡಗಳ ಹನನ ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಪ್ರತಿ ನಿತ್ಯ ಸಾವಿರಾರು ಜನರು ವಾಯು ವಿಹಾರಿಗಳು ಇಲ್ಲಿಯೇ ವಿಹರಿಸುತ್ತಿದ್ದರು. ಆದರೆ, ರಸ್ತೆ ಬದಿಗೆ ಇದ್ದ ಹಲವಾರು ಮರಗಳನ್ನು ಕಡೆಯುವುದರಿಂದ ಈಗ ಅಲ್ಲಿ ಖಾಲಿ ಖಾಲಿ ಅನಿಸುತ್ತಿದೆ. ಪರಿ ಸರ ಇದ್ದರೆ ನಾವು ಆರೋಗ್ಯದಿಂದ ಬದುಕಲು ಸಾಧ್ಯ. ಹೀಗಾಗಿ ಅಭಿವೃದ್ಧಿ ನೆಪದಲ್ಲಿ ನೂರಾರು ವರ್ಷಗಳ ಮರಗಳನ್ನು ಕಡಿಯುವುದರಿಂದ ಆರೋಗ್ಯಯುತ ಪರಿಸರಕ್ಕೆ ದೂರ ತಳ್ಳಿದಂತೆ. ಹೀಗಾಗಿ ಇನ್ನಾದರೂ ಮರಗಳ ಮಾರಣಹೋ ಮ ನಿಲ್ಲಬೇಕು. ಗಿಡಮರಗಳನ್ನು ಬೆಳೆಸಬೇಕು ಎಂಬುವುದು ಪರಿಸರ ಪ್ರೇಮಿಗಳ ಆಗ್ರಹ.
ಪ್ರತಿಯೊಂದು ಮರದ ಬದಲಾಗಿ 10 ಮರಗಳನ್ನು ನೆಡಲು ಪ್ರತಿ ಗಿಡಕ್ಕೆ 78 ರಂತೆ ಸಂದಾಯ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹೇಳುತ್ತಿದ್ದರೂ ನೆಟ್ಟ ಸಸಿಗಳು ಮರಗಳಾಗಿ ಬೆಳೆದು ನಿಲ್ಲಲು ಹಲವಾರು ವರ್ಷಗಳೇ ಕಳೆಯುತ್ತದೆ. ಕೇವಲ ಮರ ನೆಡಲು ಹಣ ಸಂದಾಯ ಮಾಡಿ ಕೈತೊಳೆದುಕೊಳ್ಳದೇ ವ್ಯವಸ್ಥಿತ ಸಸಿ ನೆಡುವ ಕಾರ್ಯಗಳ ಜವಾಬ್ದಾರಿಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸುವುದರೊಂದಿಗೆ ಶೀಘ್ರ ಕಾರ್ಯಗತವಾಗಬೇಕಾಗಿದೆ.
ಕಳೆದ ವರ್ಷ 25 ಗಿಡಗಳ ಹನನ
ಕಳೆದ ವರ್ಷವೇ ರಬಕವಿ-ಕುಡಚಿ ಹೆದ್ದಾರಿಯಲ್ಲಿರುವ 70 ವರ್ಷಗಳ ಇತಿಹಾಸದ 25ಕ್ಕೂ ಸುಮಾರು ಅಧಿಕ ಹುಣಸೆ ಮರಗಳಿಗೆ ಕೊಡಲಿ ಹಾಕಲಾಗಿತ್ತು. ಅವಳಿ ನಗರದ ಮೂರು ಭಾಗಗಳಲ್ಲಿ ಅಂದರೆ ರಬಕವಿ ನಾಕಾದಿಂದ ಮಹಾಲಿಂಗಪುರ ರಸ್ತೆಯ ನಗರಸಭೆ ಸ್ವಾಗತ ಕಮಾನ್‌ದವರೆಗೆ, ರಬಕವಿ ಹೊಸ ಬಸ್ ನಿಲ್ದಾಣದಿಂದ ಕಂಠಿ ಬಸವೇಶ್ವರ ದೇವಸ್ಥಾನದವರೆಗೆ, ಬನಹಟ್ಟಿ ಬಸ್ ನಿಲ್ದಾಣದಿಂದ ಬಸವೇಶ್ವರ ಸಮುದಾಯದ ಭವನದವರೆಗೆ ದ್ವಿ ಪತ ರಸ್ತೆ ಕಾಮಗಾರಿಗೆ ಮರಗಳನ್ನು ಕಡೆಯಲಾಗಿದೆ.
ಎಲ್ಲೆಲ್ಲಿ ಮರಗಳ ಮಾರಣ ಹೋಮ
ರಬಕವಿಯಿಂದ ತೇರದಾಳದವರೆಗೆ ಸುಮಾರು 7 ಕಿಮೀ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಮಾರ್ಗ ಮಧ್ಯದಲ್ಲಿ ನೂರು ವರ್ಷಗಳ ಇತಿಹಾಸವಿರುವ 71 ಹುಣಸೆ, 10 ಆಲದ ಮರಗಳು ಸೇರಿ ಹಲವಾರು ಮರಗಳನ್ನು ಕಡೆಯಲು ಈಗಾಗಲೇ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ. ಹಾಗೆಯೇ ಬನಹಟ್ಟಿ ಪೊಲೀಸ್ ಠಾಣೆಯಿಂದ ರಬಕವಿ ನಗರದ ವೈಭವ ಚಿತ್ರಮಂದಿರವರೆಗೆ ಸುಮಾರು 5 ಕಿಮೀ ರಸ್ತೆ ಅಗಲೀಕರಣ ಕಾಮಗಾರಿಗೆ 37 ಹಣಸೆ ಮರಗಳಿಗೆ ಕೊಡಲಿ ಪೆಟ್ಟು ಬಿಳುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ತಲ್ಲಣವನ್ನುಂಟು ಮಾಡಿದೆ.
ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಈಗಿರುವ ಕಿರಿದಾದ ರಸ್ತೆ ತುಂಬಾ ಟ್ರಾಫಿಕ್ ಆಗುತ್ತಿದ್ದು, ಅಭಿವೃದ್ಧಿ ಹಿತದೃಷ್ಟಿಯಿಂದ ಸರ್ಕಾರದ ಆದೇಶದ ಮೇರೆಗೆ ರಸ್ತೆ ಅಗಲೀಕರಣ ಕಾರ್ಯ ನಡೆದಿದೆ. ಸಾರ್ವಜನಿಕರು ಸಹ ತುಂಬಾ ಸಹಕರಿಸುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗುವಷ್ಟರಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸಂಪೂರ್ಣ ಮುಗಿಯುತ್ತದೆ. ಮರಗಳ ಕಡಿದ ಸ್ಥಳಗಳಲ್ಲಿ ಅಷ್ಟೆ ಅಲ್ಲದೆ ರಸ್ತೆ ಅಕ್ಕಪಕ್ಕ ಸಾವಿರಾರು ಮರಗಳನ್ನು ನೆಡಲು ಅರಣ್ಯ ಇಲಾಖೆಗೆ ಈಗಾಗಲೇ ಇಲಾಖೆಯಿಂದ ತುಂಬಬೇಕಾದ ಹಣ ತುಂಬಿ ಆದೇಶ ಕೂಡಾ ನೀಡಲಾಗಿದೆ ಎಂದು ಜಮಖಂಡಿ ಲೋಕೋಪಯೋಗಿ ಇಲಾಖೆ ಅಭಿಯಂತರ ಜಯವಂತ ಹಿರೇಮಠ ಹೇಳಿದ್ದಾರೆ.
ಪ್ರತಿಯೊಂದು ಮರದ ಬದಲಾಗಿ 10 ಮರಗಳನ್ನು ನೆಡಲು ಲೋಕೋಪಯೋಗಿ ಇಲಾಖೆಯವರು ಅರಣ್ಯ ಇಲಾಖೆಗೆ ಹಣ ಸಂದಾಯ ಮಾಡಿರುತ್ತದೆ. ಆ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮುಗಿದ ಬಳಿಕ ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ರಸ್ತೆ ಬದಿಗೆ ಉತ್ತಮ ಜಾತಿಯ ಗಿಡಗಳನ್ನು ನೆಡಲು ಇಲಾಖೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎಂದು ತೇರದಾಳ ಅರಣ್ಯ ರಕ್ಷಕ ಎಂ.ಎಸ್.ನಾವಿ ತಿಳಿಸಿದ್ದಾರೆ.
ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದಕ್ಕೆ ನೋವಾಗುತ್ತಿದೆ. ಮರಗಳು ಪಟ್ಟಣದ ಅಂದವನ್ನು ಹೆಚ್ಚು ಮಾಡುತ್ತವೆ. ಹೀಗಾಗಿ ಮರಗಳನ್ನು ಕಡೆಯಬಾರದು ಎಂದು ಪರಿಸರ ಪ್ರೇಮಿ ಡಾ. ರವಿ ಜಮಖಂಡಿ ಹೇಳಿದ್ದಾರೆ.