ಕಲಬುರಗಿಯಲ್ಲಿ ಭಾರೀ ಮಳೆ: ಸೂತಕದ ಮನೆಗೆ ಹೋಗೋರಿಲ್ಲ, ಸಮಸ್ಯೆ ಕೇಳೋರಿಲ್ಲ..!

By Kannadaprabha News  |  First Published Jul 16, 2022, 11:34 AM IST

ಮಳೆಯಿಂದ ಮನೆ ಕುಸಿದು, ಸಿಡಿಲಿಗೆ ಬಲಿಯಾದ ಎರಡೂ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ
 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.16):  ಧಾರಾಕಾರ ಮಳೆ ಕಲಬುರಗಿಯಲ್ಲಿ ಕಣ್ಣೀರ ಹೊಳೆಯನ್ನೇ ಹುಟ್ಟುಹಾಕಿದೆ. ಈಗಾಗಲೇ ಮಳೆಗೆ ಚಿತ್ತಾಪುರ ಹಾಗೂ ಕಮಲಾಪುರದಲ್ಲಿ 2 ಮಾನವ ಜೀವ ಹಾನಿಯಾಗಿವೆ. 402ಕ್ಕೂ ಹೆಚ್ಚು ಮನೆಗಳು ಧರಾಶಾಯಿಯಾಗಿ, 20ಕ್ಕೂ ಹೆಚ್ಚು ಜಾನುವಾರು ಜೀವಹಾನಿಯಾಗಿದೆ. ಬರೋಬ್ಬರಿ 9 ದಿನ ಬಿಟ್ಟು ಬಿಡದಂತೆ ಸುರಿದ ಮಳೆ ಇಷ್ಟೆಲ್ಲ ಅನಾಹುತಗಳ ಸರಣಿಯನ್ನೇ ಬಿಟ್ಟು ಹೋದರೂ ವರುಣಾರ್ಭಟದಿಂದ ತೊಂದರೆಗೊಳಗಾಗಿರುವ ಸಂತ್ರಸ್ತರ ಕಣ್ಣೀರ ಒರೆಸುವ ಕೆಲಸ ಜಿಲ್ಲಾದ್ಯಂತ ನೆನೆಗುದಿಗೆ ಬಿದ್ದಿದೆ.

Tap to resize

Latest Videos

ಮಳೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜಿಲ್ಲೆಗೇನೋ ಬಂದರಾರೂ ಮನೆ ಕುಸಿದು ಸಾವನ್ನಪ್ಪಿರುವ ಚಿತ್ತಾಪುರದ ವಿಧವೆಯ ಸಂತ್ರಸ್ತ ಮಕ್ಕಳಿಗೆ ಭೇಟಿ ಮಾಡಿ ಪರಿಹಾರ ಚೆಕ್‌ ನೀಡಬೇಕಿತ್ತು, ಆದರೆ ಸಚಿವರು ಚಿತ್ತಾಪುರದತ್ತ ಚಿತ್ತ ಸಹ ಹರಿಸದೆ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳಂತೆಯೇ ಮಳೆಗೆ ಕಮ್ಮಿ ಹಾನಿಯಾಗಿರುವ ಅಫಜಲ್ಪುರ ತಾಲೂಕಿನತ್ತ ಹೆಜ್ಜೆ ಹಾಕಿ ಕಾಟಾಚಾರಕ್ಕೆ ಅಲ್ಲಿ ಒಂದೆರಡು ಮನೆಗಳಿಗೆ ಭೇಟಿ ನೀಡಿ ಚೆಕ್‌ ವಿತರಿಸಿದಂತೆ ಮಾಡಿ ತಾವು ಮುಖ್ಯ ಆಹ್ವಾನಿತರಾಗಿರುವ ಸಮಾರಂಭಕ್ಕೇ ಹೆಚ್ಚಿನ ಸಮಯ, ಮಹತ್ವ ನೀಡಿದರೆ ಹೊರತು ನೊಂದವರ ಕಣ್ಣೀರು ಒರೆಸುವ ದಿಶೆಯಲ್ಲಿ ಕಾರ್ಯತತ್ಪರರಾಗಲೇ ಇಲ್ಲ!

ಬೆಳಗಾವಿ; ಕೊಯ್ನಾ ಸೇರಿ ಇತರೆ ಡ್ಯಾಂಗಳ ಮೇಲೆ ನಿಗಾ ಇಡಿ, ಅಣ್ಣಾಸಾಹೇಬ ಜೊಲ್ಲೆ

ಪರಿಹಾರದ ಚೆಕ್‌ ಕೈ ಸೇರಿಲ್ಲ:

ಮಾನವ ಜೀವ ಹಾನಿಯಾಗಿರುವ ಚಿತ್ತಾಪುರದಲ್ಲಿ ಘಟನೆ ಸಂಭವಿಸಿದ 24 ಗಂಟೆಲ್ಲೇ 5 ಲಕ್ಷ ರುಪಾಯಿ ಪರಿಹಾರ ಚೆಕ್‌ ನೀಡಲಾಗಿದೆ ಎಂಬ ಸಭೆಯಲ್ಲಿನ ಅಧಿಕಾರಿಗಳ ಪುರಾಣ ಆಲಿಸಿದರೆ ಹೋರತು ವಾಸ್ತವ ಅರಿಯುವ ಗೋಜಿಗೂ ಸಚಿವರು ಹೋಗಲಿಲ್ಲ. ಹೀಗಾಗಿ ಚಿತ್ತಾಪುರದಲ್ಲಿ ವಯೋವೃದ್ಧೆ ಸಾವನ್ನಪ್ಪಿ ವಾರ ಉರುಳಿದರೂ ಇಂದಿಗೂ ಪರಿಹಾರದ 5 ಲಕ್ಷ ರು ಚೆಕ್‌ ಆಕೆಯ ಕುಟುಂಬದ ಸದಸ್ಯರ ಕೈ ಸೇರಿಲ್ಲ!

’ಕನ್ನಡಪ್ರಭ’ ಈ ಕುರಿತಂತೆ ಚಿತಾಪುರದಲ್ಲಿ ಸಂತ್ರಸ್ತ ಕುಟುಂಬದವರೊಂದಿಗೆ ಮಾತನಾಡಿದಾಗ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಎಂಬುವವರು ಬಂದು ವೈಯಕ್ತಿಕವಾಗಿ 10 ಸಾವಿರ ರು ಹಣ ನೀಡಿದ್ದು ಹೊರತು ಪಡಿಸಿದರೆ ಪರಿಹಾರ ರೂಪದಲ್ಲಿ ಯಾವುದೇ ಹಣ ತಮ್ಮ ಕೈ ಸೇರಿಲ್ಲ ಎಂದರು, ಕ್ಷೇತ್ರ ಶಾಸಕರು, ಉಸ್ತುವಾರಿ ಸಚಿವರು ಯಾರೂ ಭೇಟಿ ಕೊಟ್ಟಿಲ್ಲವೆಂಬುದು ಸ್ಪಷ್ಟಪಡಿಸಿದರು. ಈಕೆ ವಿಧವೆ, ಇಬ್ಬರು ಮಕ್ಕಳಲ್ಲಿ ಒಬ್ಬಾಕೆ ಮಾನಸಿಕ ಅಸ್ವಸ್ಥೆ, ಗಾಯಗೊಂಡಿರುವ ಮಕ್ಕಳೂ ಆಸ್ಪತ್ರೆ ಸೇರಿದ್ದಾರೆ. ಬಂಧುಗಳು ಆರೈಕೆ ಮಾಡುತ್ತಿದ್ದಾರೆ, ಪರಿಹಾರ ವಿತರಿಣೆಯಲ್ಲಿ , ಸಾಂತ್ವನ ಹೇಳುವಲ್ಲಿನ ವಿಳಂಬ ನೋವು ಹೆಚ್ಚಿಸಿದೆ.

ಮಳೆಯಿಂದ ಸಿಡಿಲು ಬಡಿದು ಕಮಲಾಪುರ ತಾಲೂಕಿನ ಸೋಂತ ಊರಲ್ಲಿ ಸಾವನ್ನಪ್ಪಿರುವ ಚಿಂಚೋಳಿಯ ಚಿಮ್ಮಾ ಇದಲಾಯಿ ಮೂಲದ ಚಿತ್ರಶೇಖರ ಎಂಬ ರೈತನಿಗೂ ಇನ್ನೂ ಪರಿಹಾರ ಧನದ ಚೆಕ್‌ 5 ಲಕ್ಷ ರು ತಲುಪಿಲ್ಲ ಎಂಬಂಶ ಬೆಳಕಿಗೆ ಬಂದಿದೆ.

ಈತನ ಮೂಲ ಊರು ಚಿಮ್ಮಾ ಇದಲಾಯಿ, ತನ್ನ ಬಂಧುಗಳ ಊರಾದ ಸೋಂತ ಗ್ರಾಮಕ್ಕೆ ಬಂದು ಅಲ್ಲಿ ಹೊಲಗದ್ದೆಯಲ್ಲಿ ಹಸನು ಕೆಲಸಕ್ಕೆ ಮುಂದಾಗಿದ್ದಾಗ ಮಳೆ ಸುರಿದು ಸಿಡಿಲಿಗೆ ಈತ ಬಲಿಯಾಗಿದ್ದ. ಈ ಘಟನೆ ಸಂಭವಿಸಿ 1 ತಿಂಗಳಾಗಿದೆ. ಇಂದಿಗೂ ಈತನಿಗೆ ಪರಿಹಾರ ದೊರಕಿಲ್ಲ ಎಂಬುದು ಗೊತ್ತಾಗಿದೆ. ಕಮಲಾಪುರ ತಹಸೀಲ್ದಾರ್‌ ಕಚೇರಿ ಮೂಲಗಳು ಈ ಸಂಗತಿ ಸ್ಪಷ್ಟಪಡಿಸಿವೆ.

ಮನೆ ಕುಸಿದವರಿಗೂ ಪರಿಹಾರ ನೀಡಿಕೆ ವಿಳಂಬ

ಮಳೆಯಿಂದಾಗಿ ಗೋಡೆ ಕುಸಿದೋ, ಛಾವಣಿ ಕುಸಿದೋ ಬೀದಿಗೆ ಬಂದ ಕುಟುಂಬಗಳು 402. ಈ ಪೈಕಿ ಶೇ. 70 ರಷ್ಟುಕುಟುಂಬಗಳಿಗೆ ಇನ್ನೂ ಪರಿಹಾರ ಕೈ ಸೇರಿಲ್ಲ. ತಕ್ಷಣಕ್ಕೆ 10 ಸಾವಿರ ರು ಪರಿಹಾರ ಚೆಕ್‌ ವಿತರಿಸುವುದು ಆಗಿಲ್ಲ. ಇನ್ನೂ ಹೆಚ್ಚಿನ ಪರಿಹಾರ ಅದ್ಯಾವಾಗ ನೀಡುತ್ತಾರೋ ಎಂದು ಮನೆ ಕಳೆದುಕೊಂಡ ಸಂತ್ರಸ್ತರು ಗೋಳಾಡುತ್ತಿದ್ದಾರೆ. ಪಿಡಿಓ ಊರಿಗೆ ಬಂದು ಇವರ ಹೆಸರು ನೋಂದಣಿ ಮಾಡಿ ತಹಶೀಲ್ದಾರ್‌ಗೆ ರವಾನಿಸಬೇಕು. ಅದಾದ ನಂತ ಪರಿಹಾರದ ಚೆಕ್‌ ಸಿದ್ಧಗೊಂಡು ಸಂತ್ರಸ್ತರಿಗೆ ತಲುಪಬೇಕು.

ಸಂಡೂರು: ಭಾರೀ ಮಳೆಗೆ ಕೆಸರಲ್ಲಿ ಬಿದ್ದು ಎದ್ದು ಬಂದ ಎಮ್ಮೆಗಳಂತಾದ ಸರ್ಕಾರಿ ಬಸ್‌ಗಳು..!

ಇತ್ತ ಜಿಲ್ಲಾಧಿಕಾರಿಗಳೋ 24 ಗಂಟೆಯಲ್ಲೇ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡೋದು ಗಮನಿಸಿದರೆ ಹೇಳೋದರಲ್ಲಿ, ಅನುಷ್ಠಾನದಲ್ಲಿ ಒಂದಕ್ಕೊಂದು ತಾಳಮೇಳ ಇಲ್ಲ ಎಂಬಂಶ ಸ್ಪಷ್ಟವಾಗಿದೆ. ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿಗಳೆಲ್ಲರೂ ಜಿಲ್ಲಾ ಅಧಿಕಾರಿಗಳ ಸಭೆ ನಡೆಸಿ ಹೋಗುತ್ತಿದ್ದಾರೆಯೇ ಹೊರತು ವಾಸ್ತವದಲ್ಲಿ ಕ್ಷೇತ್ರ ಭೇಟಿ, ಸಂತ್ರಸ್ತರ ಭೇಟಿಯ ಗೋಜಿಗೂ ಹೋಗುತ್ತಿಲ್ಲ. ಜನನಾಯಕರ ಈ ನಿಲುವು ಸಂತಸ್ತರನ್ನು ಕಂಗಾಲಾಗಿಸಿದೆ.

ಜಿಲ್ಲೆಯಲ್ಲಿ ಕಳೆದ 12 ದಿನದಲ್ಲಿ ವಾಡಿಕೆ ಪ್ರಕಾರ 2.5 ಸೆಂ.ಮೀ ಮಳೆ ಬೀಳಬೇಕಿತ್ತು, ಮಳೆಯಾಗಿದ್ದು 9.2 ಸೆಂ.ಮೀ. ಜಿಟಿಜಿಟಿ ಮಳೆಯಾಗಿದೆ. ಚಿತ್ತಾಪೂರ ಮತ್ತು ಕಮಲಾಪುರದಲ್ಲಿ 2 ಮಾನವ ಜೀವ ಹಾನಿಯಾಗಿದ್ದು, 24 ಗಂಟೆಯಲ್ಲಿಯೆ 5 ಲಕ್ಷ ರು ನಂತೆ 10 ಲಕ್ಷ ರು ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಯಾದ ಮನೆಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ ಅಂತ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ತಿಳಿಸಿದ್ದಾರೆ. 

click me!