ಬಾಗಲಕೋಟೆ: ಬಸ್‌ ಚಾಲಕನಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಟ್ರ್ಯಾಕ್ಟರ್‌ ಡ್ರೈವರ್‌

By Kannadaprabha News  |  First Published Jul 16, 2022, 11:21 AM IST

ಇಷ್ಟೆಲ್ಲ ಮಾಡಿದರೂ ತನ್ನ ಹೆಸರು ಯಾರಿಗೂ ಹೇಳದೆ ಅಲ್ಲಿಂದ ಹೊರಟು ಮಾನವೀಯತೆ ಮೆರೆದ ಟ್ರ್ಯಾಕ್ಟರ್‌ ಚಾಲಕ 


ತೇರದಾಳ(ಜು.16): ಲಘು ಹೃದಯಾಘಾತಕ್ಕೆ ಒಳಗಾದ ಬಸ್‌ ಚಾಲಕ ಚಲಿಸುತ್ತಿದ್ದ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಸಂದಿಗ್ಧ ಪರಿಸ್ಥಿತಿಯಲ್ಲೂ ಅದರಲ್ಲಿದ್ದ ಪ್ರಯಾಣಿಕರ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅದೇ ಚಾಲಕನನ್ನು ಬಸ್‌ ಸಮೇತ ಆಸ್ಪತ್ರೆಗೆ ಸಾಗಿಸುವ ಮೂಲಕ ಚಾಲಕನ ಪ್ರಾಣ ಉಳಿಸುವ ಮೂಲಕ ಸ್ಥಳೀಯ ಚಾಲಕ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ಶುಕ್ರವಾರ ಜರುಗಿದೆ.

ನೆರೆಯ ಮಹಾರಾಷ್ಟ್ರದ ಸಾಂಗಲಿ ಡಿಪೋಗೆ ಸೇರಿದ ಬಸ್‌ ತೇರದಾಳ ಮಾರ್ಗವಾಗಿ ಜಮಖಂಡಿಯತ್ತ ಪ್ರಯಾಣಿಸುತ್ತಿತ್ತು. ಹಾರೂಗೇರಿ ಕ್ರಾಸ್‌ನಲ್ಲಿ ಆ ಬಸ್‌ ಚಾಲಕನಿಗೆ ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿದೆ. ಅದನ್ನು ಹಗುರವಾಗಿ ತೆಗೆದುಕೊಂಡ ಚಾಲಕ ವಿಜಯಕುಮಾರ ಯಮ್ಮಿ ಬಸ್‌ ಚಾಲಾನೆ ಮಾಡಿಕೊಂಡು ನಾಲ್ಕೈದು ಕಿ.ಮೀ. ಸಾಗಿದ್ದಾನೆ. ಅಲ್ಲಿ ನೋವು ಹೆಚ್ಚಾಗಿದ್ದು ಮನವರಿಕೆಯಾದೊಡನೆ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ತನ್ನ ಸೀಟ್‌ನಿಂದ ಕೆಳಗೆ ಬಿದ್ದು ಒದ್ದಾಡತೊಡಗಿದ್ದಾನೆ. ಅದನ್ನು ಕಂಡ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಲು ಬಸ್‌ ನಿಲ್ಲಿಸುವಷ್ಟರ ಮಟ್ಟಿಗೆ ಮಾನವೀಯತೆ ಹಾಗೂ ಕರ್ತವ್ಯಪ್ರಜ್ಞೆ ಮೆರೆದ ಚಾಲಕನ ಸ್ಥಿತಿ ಕಂಡು ದಾರಿಹೋಕರು ಚಾಲಕನನ್ನು ಆಸ್ಪತ್ರೆಗೆ ಸಾಗಿಸಲು ವಿನಂತಿಸಿಕೊಳ್ಳಲಾರಂಭಿಸಿದ್ದಾರೆ. ಅಷ್ಟರಲ್ಲಿ ರೈತರೊಬ್ಬರು ತಮ್ಮ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬರುತ್ತಿದ್ದು, ಜನರ ಕೂಗಾಟ ಕೇಳಿ ಅವರಿಂದ ವಿಷಯ ತಿಳಿದು ತನ್ನ ವಾಹನ ಪಕ್ಕಕ್ಕೆ ನಿಲ್ಲಿಸಿ ಚಾಲಕನಿದ್ದ ಬಸ್ಸನ್ನು ಪಟ್ಟಣದ ಖಾಸಗಿ ಆಸ್ಪತ್ರೆವರೆಗೆ ತೆಗೆದುಕೊಂಡು ಬಂದು ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಚಾಲಕನ ಜೀವ ಉಳಿಸಿದ್ದಾನೆ. ಇಷ್ಟೆಲ್ಲ ಮಾಡಿದರೂ ತನ್ನ ಹೆಸರನ್ನು ಯಾರಿಗೂ ಹೇಳದೆ ಅಲ್ಲಿಂದ ಹೊರಟು ಮಾನವೀಯತೆ ಮೆರೆದಿದ್ದಾನೆ.

Tap to resize

Latest Videos

undefined

ಕಾರವಾರ: ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು

ಇತ್ತ ಚಾಲಕ ಪ್ರಥಮ ಚಿಕಿತ್ಸೆ ಪಡೆದು ಗುಣಮುಖನಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಸ್‌ ನಿರ್ವಾಹಕರು ಸಾಂಗಲಿಗೆ ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.

click me!