ಉಡುಪಿ: ಶತಕೋಟಿಯೆಡೆಗೆ ರಾಮಜಪ, ಪೇಜಾವರ ಶ್ರೀ ಸಂತಸ

By Girish Goudar  |  First Published Aug 9, 2023, 9:05 PM IST

ಮೈಸೂರಿನಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ್ಯವ್ರತದಲ್ಲಿರುವುದರಿಂದ ಸೆ . 24 ರಂದು ಋತ್ವಿಜರ ನೇತೃತ್ವದಲ್ಲಿ ಶ್ರೀ ರಾಮ‌ತಾರಕ ಯಜ್ಞ ನಡೆಸಿ ಈ ದಶಕೋಟಿ ರಾಮಜಪಯಜ್ಞದ ಪರಿಸಮಾಪ್ತಿಗೈದು ಶ್ರೀರಾಮದೇವರಿಗೆ ಅರ್ಪಿಸಿ ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಶ್ರೇಯಸ್ಸನ್ನು ಕರುಣಿಸುವಂತೆ  ಗುರುಗಳ ಮೂಲಕ  ರಾಮದೇವರಲ್ಲಿ ಪ್ರಾರ್ಥಿಸಲಾಗುವುದು.  


ಉಡುಪಿ(ಆ.09): ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಗಳನ್ನು ವಿಶೇಷ ಒತ್ತಡಗಳಿಲ್ಲದೆ ಮತ್ತಷ್ಟು ದೃಢಗೊಳಿಸುವ ಸಣ್ಣ ಪ್ರಯತ್ನವೊಂದು ಭರ್ಜರಿ ಯಶಸ್ಸಿನೆಡೆಗೆ ಸಾಗುತ್ತಿದೆ .ಈ ವರ್ಷ ಅಧಿಕ ಶ್ರಾವಣ ಮಾಸವಿರುವುದರಿಂದ ಆ ತಿಂಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ವಿಶೇಷ ಸತ್ಫಲಗಳನ್ನು ಶಾಸ್ತ್ರಗಳು ಉಲ್ಲೇಖಿಸಿವೆ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. 

ಇನ್ನೊಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಶತಮಾನಗಳ ಕನಸು ನನಸಾಗುತ್ತಿದೆ .ಆದ್ದರಿಂದ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ವರೆಗೆ ದೇಶದಲ್ಲಿ ಎಲ್ಲ ವಯೋಮಾನದ, ಎಲ್ಲ ಜಾತಿ ಸಮುದಾಯಗಳ, ವಿವಿಧ ವೃತ್ತಿ ಕ್ಷೇತ್ರಗಳ ಹಿಂದುಗಳಿಂದ ರಾಮನ ವಿಶೇಷ ಸ್ಮರಣೆ, ಸೇವಾಕಾರ್ಯಗಳು ಮುಂತಾದವು ನಿರಂತರ ನಡೆಯುವಂತಾಗಬೇಕೆಂದು ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎಲ್ಲೆಡೆ ಉಲ್ಲೇಖಿಸಿದ್ದಾರೆ.

Latest Videos

undefined

ಕಲ್ಪವೃಕ್ಷ ನೀಡಿದ ಕಲ್ಪರಸ, ಇದು ಕರಾವಳಿಯ ಕಾಮಧೇನು!

ಅದರಂತೆ ಈ ಅಧಿಕ ಮಾಸದಲ್ಲಿ ದಶಕೋಟಿ ಸಾಮೂಹಿಕ ರಾಮಜಪ ಯಜ್ಞ ನಡೆಸುವಂತೆಯೂ ಕರೆ ನೀಡಿದ್ದರು. ಯಾವುದೇ ಖರ್ಚಿಲ್ಲದೇ ಅತ್ಯಂತ ಸರಳವಾಗಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಒಂದು ತಿಂಗಳ ಕಾಲ ನಿತ್ಯ 108 ಬಾರಿ ಶ್ರೀರಾಮ‌ಜಯ ರಾಮ ಜಯ ಜಯ ರಾಮ ಎಂಬ ಮಂತ್ರವನ್ನು ಜಪಿಸಿ ಕೊನೆಗೆ ಲೋಕದ ಒಳಿತಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುವ ಈ ಸರಳ ವಿಧಿಗೆ ಕೇವಲ ಹತ್ತರಿಂದ ಹದಿನೈದು ನಿಮಿಷಗಳು ಸಾಕು ಅನ್ನೋದು ಸ್ವಾಮೀಜಿಯ ಸಂಕಲ್ಪವಾಗಿದೆ.

ತಮ್ಮ ಸಂಸ್ಥೆಗಳಲ್ಲಿ ಈ ಸಾಮೂಹಿಕ ಜಪಯಜ್ಞವನ್ನು ನಡೆಸುವಂತೆ ರಾಜ್ಯದ ಅನೇಕ ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು , ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಗೆ ಪತ್ರ ಮುಖೇನ ಪೇಜಾವರ ಶ್ರೀಗಳು ಸೂಚಿಸಿದ್ದರು. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ನೀತಿ ನಿಯಮಾವಳಿಗಳ ಕಾರಣದಿಂದ ತೊಂದರೆಯಾದೀತೆಂಬ ಕಾರಣಕ್ಕೆ ಆ ಕಡೆ ಯೋಚನೆಯನ್ನೂ ಮಾಡಿಲ್ಲ .ಆದರೆ ಅಂಥಹ ಮಕ್ಕಳು ತಮ ಮನೆಗಳಲ್ಲೇ ಪೋಷಕರೊಂದಿಗೆ ಮಾಡುವಂತೆ ವಿನಂತಿಸಲಾಗಿತ್ತು .ಶ್ರೀಗಳ ಮನವಿಗೆ ಭರಪೂರ ಸ್ಪಂದನೆ ದೊರಕಿತ್ತು . ಎಲ್ಲ ರೂ ಅತ್ಯಂತ ಸಂತೋಷದಿಂದಲೇ ಇದಕ್ಕೆ ಸಮ್ಮತಿಸಿದ್ದರು ಎಂದು ಮಠದ ಪ್ರಕಟಣೆ ತಿಳಿಸಿದೆ.

ಪರಿಣಾಮವಾಗಿ ರಾಜ್ಯದ 30 ಕ್ಕೂ ಅಧಿಕ ಜಿಲ್ಲೆಗಳ 880 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಸುಮಾರು 6 ಲಕ್ಷಕ್ಕೂ ಅಧಿಕ ಮಕ್ಕಳ ಬಾಯಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ  ಸಾಮೂಹಿಕ ರಾಮಜಪದ ಕಲರವ ಅನುರಣಿಸಿರುವುದು ಉಲ್ಲೇಖನೀಯ ‌. 

ಕೆಲವು ಶಾಲೆಗಳಲ್ಲಿ ಪೂರ್ತಿ ಒಂದು ತಿಂಗಳು ಈ ಜಪಯಜ್ಞ ನಡೆದರೆ ಕೆಲವರು ಒಂದು ವಾರ,  ಹತ್ತು ದಿನ ಹೀಗೆ ನಡೆಸಿ ಈ ಮಹತ್ಕಾರ್ಯದ ಯಶಸ್ಸಿಗೆ ಕೈಜೋಡಿಸಿರುವುದು ಸಣ್ಣಸಂಗತಿಯಲ್ಲ .
ಶಾಲೆ, ಕಾಲೇಜುಗಳಲ್ಲದೆ, ಅನೇಕ ಕಡೆಗಳಲ್ಲಿ ಬ್ರಾಹ್ಮಣ ಸಂಘಗಳು , ಸಂಘ ಪರಿವಾರದ ಸಂಘಟನೆಗಳು , ಬಾಲಗೋಕುಲಗಳು, ಭಜನಾಮಂದಿರಗಳಲ್ಲೂ ಈ ಜಪಯಜ್ಞ ನಡೆಯುತ್ತಿವೆ. ಹೀಗೆ ದಶಕೋಟಿ ಯಜ್ಞವು ಗುರಿ ಮೀರಿ ಶತಕೋಟಿಯೆಡೆಗೆ ಸಾಗುತ್ತಿದೆ. 

ಲಕ್ಷಾಂತರ ಮಕ್ಕಳು ಮುಗ್ಧ ಮನಸ್ಸಿನಿಂದ ರಾಮನ ಸ್ಮರಣೆ ಮತ್ತು ಲೋಕದ ಒಳಿತಿಗಾಗಿ ಪ್ರಾರ್ಥಿಸಿದ ಸತ್ಫಲ ರಾಜ್ಯಕ್ಕೆ ನಿಶ್ಚಯವಾಗಿಯೂ ಒಳಿತನ್ನುಂಟುಮಾಡುತ್ತದೆ ಅನ್ನೋ ಪೂರ್ಣ ವಿಶ್ವಾಸ ಇದರ  ಸಂಯೋಜಕರಿಗೆ ಇದೆ.
ನಿರಂತರ ನಡೆಸಲು ಪ್ರಯತ್ನಿಸಿ - ಪೇಜಾವರ ಶ್ರೀಗಳು 

ರಾಮಮಂದಿರ ಮುಸ್ಲಿಂಗೆ ಗುತ್ತಿಗೆ ರದ್ದುಪಡಿಸಲು ಶ್ರೀರಾಮ ಸೇನೆ ಮನವಿ

ನಾವೇನೋ ಅಧಿಕ ಶ್ರಾವಣ ಮಾಸವನ್ನು ನೆಪವಾಗಿಟ್ಟುಕೊಂಡು  ಅಯೋಧ್ಯೆ ಮಂದಿರ ನಿರ್ಮಾಣದ ಹೊತ್ತಲ್ಲಿ  ಮಕ್ಕಳಿಂದ ಆರಂಭಿಸಿ ಹಿರಿಯರವರೆಗೆ ಎಲ್ಲರೂ ರಾಮನ ಸ್ಮರಣೆಮಾಡಿ ಎಲ್ಲರ ಒಳಿತಿಗೆ ಪ್ರಾರ್ಥಿಸುವಂತಾಗಲಿ ಎಂಬ ಉದ್ದೇಶದಿಂದ ದಶಕೋಟಿ ರಾಮಯಜ್ಞಕ್ಕೆ ಕರೆಕೊಟ್ಟಿದ್ದೆವು .ಆದರೆ ಇದಕ್ಕೆ ನೂರಾರು ಶಿಕ್ಷಣ ಸಂಸ್ಥೆಗಳು ಹಾಗೂ ಅನೇಕ ಸಂಘ ಸಂಸ್ಥೆಗಳು ಹೃತ್ಪೂರ್ವಕ ಸ್ಪಂದಿಸಿದ್ದರಿಂದ ಲಕ್ಷಾಂತರ ಮಕ್ಕಳು  ರಾಮಜಪವನ್ನು ಶ್ರದ್ಧೆಯಿಂದ ಮಾಡುತ್ತಿರುವುದನ್ನು ತಿಳಿದು ಅಚ್ಚರಿ ಮತ್ತು ಅತೀವ ಸಂತಸವಾಗುತ್ತಿದೆ. ಆ ಎಲ್ಲರನ್ನೂ ಅಭಿನಂದಿಸುತ್ತಾ ಈ ಜಪಯಜ್ಞದ ಫಲವಾಗಿ ನಾಡು, ದೇಶ ಮತ್ತು  ಲೋಕದ ಶಾಂತಿ ಸುಭಿಕ್ಷೆ ನೆಲೆಗೊಳಿಸುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇವೆ. ಅಂತೆಯೇ ಈ ಸತ್ಕಾರ್ಯವನ್ನು ಅಧಿಕ ಮಾಸಕ್ಕೇ ಸೀಮಿತಗೊಳಿಸದೇ ಮಂದಿರದಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆಯವರೆಗೂ ಮತ್ತೂ ಮುಂದುವರೆದು ಸಾಧ್ಯವಿದ್ದರೆ ಪ್ರತಿ ಶಾಲೆಗಳಲ್ಲಿ ಬೆಳಿಗ್ಗೆ ನಿತ್ಯದ ಪ್ರಾರ್ಥನೆಯ ಜೊತೆಗೆ ಕನಿಷ್ಠ ಹತ್ತು ಬಾರಿಯಾದರೂ ರಾಮನ ಸ್ಮರಣೆಮಾಡಲು ಪ್ರಯತ್ನಿಸಬೇಕು. ಈ ವರೆಗೆ ಜಪಯಜ್ಞದಲ್ಲಿ ತೊಡಗಿಸಿಕೊಳ್ಳದ ಶಾಲೆಗಳಲ್ಲಿಯೂ ಈ ಅಭಿಯಾನ ನಡೆಯುವಂತಾಗಲಿ ಎಂದು ಆಶಿಸುತ್ತೇವೆ. ಯಾವ ಖರ್ಚೂ ಇಲ್ಲದೇ ಅತ್ಯಂತ ಸರಳವಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗಲು ಎಲ್ಲ ಪೋಷಕರೂ ಶಾಲೆಗಳೂ ತಮ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ .

ಸೆ .24 ರಂದು ಮೈಸೂರಿನಲ್ಲಿ ರಾಮತಾರಕ ಯಜ್ಞ 

ಮೈಸೂರಿನಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ್ಯವ್ರತದಲ್ಲಿರುವುದರಿಂದ ಸೆ . 24 ರಂದು ಋತ್ವಿಜರ ನೇತೃತ್ವದಲ್ಲಿ ಶ್ರೀ ರಾಮ‌ತಾರಕ ಯಜ್ಞ ನಡೆಸಿ ಈ ದಶಕೋಟಿ ರಾಮಜಪಯಜ್ಞದ ಪರಿಸಮಾಪ್ತಿಗೈದು ಶ್ರೀರಾಮದೇವರಿಗೆ ಅರ್ಪಿಸಿ ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಶ್ರೇಯಸ್ಸನ್ನು ಕರುಣಿಸುವಂತೆ  ಗುರುಗಳ ಮೂಲಕ  ರಾಮದೇವರಲ್ಲಿ ಪ್ರಾರ್ಥಿಸಲಾಗುವುದು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.

click me!