ನೀರು ಬಾರದ್ದಕ್ಕೆ ನಲ್ಲಿ ಮುರಿದ ವ್ಯಕ್ತಿಗೆ ಚಪ್ಪಲಿ ಏಟು: ಗಾಂಧಿ ಗ್ರಾಮ ಪುರಸ್ಕಾರ ಪಂಚಾಯ್ತಿಯಲ್ಲಿ ಪಿಡಿಓ ದರ್ಪ?

By Kannadaprabha NewsFirst Published Oct 15, 2023, 11:28 AM IST
Highlights

ಪಿಡಿಓನಿಂದ ಮತ್ತೋರ್ವ ಗ್ರಾಮಸ್ಥನಿಗೆ ಕೈತಿರುವಿ ಕಪಾಳಮೋಕ್ಷ । ಸುರಪುರದ ಮಲ್ಲಾ (ಬಿ) ಗ್ರಾಪಂನಲ್ಲಿ ಘಟನೆ। ದೌರ್ಜನ್ಯದ ವೀಡಿಯೋ ವೈರಲ್‌ 

ಸುರಪುರ(ಅ.15): ಕುಡಿಯಲು ನೀರು ಸಿಗಲಿಲ್ಲ ಎಂಬ ಕಾರಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕದ ನಲ್ಲಿ (ನಳ) ಮುರಿದಿದ್ದರಿಂದ ರೊಚ್ಚಿಗೆದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗ್ರಾಮಸ್ಥರೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದಲ್ಲದೆ, ಪ್ರಶ್ನಿಸಲು ಬಂದ ಮತ್ತೋರ್ವನ ಕೈ ತಿರುವಿ ಕಪಾಳಮೋಕ್ಷ ಮಾಡಿದ ಘಟನೆ ಸುರಪುರ ತಾಲೂಕಿನ ಮಲ್ಲಾ (ಬಿ) ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಇತ್ತೀಚೆಗಷ್ಟೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಮಲ್ಲಾ (ಬಿ) ಗ್ರಾಪಂನಲ್ಲಿ ಈ ಘಟನೆ ಅಚ್ಚರಿ ಮೂಡಿಸಿದೆ. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಿಡಿಓ ದೌರ್ಜನ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಶಕ್ತಿಯೋಜನೆ ಎಫೆಕ್ಟ್: ಸೀಟು ಬಿಡುವಂತೆ ವೃದ್ಧನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

ನೀರಿನ ಘಟಕದಿಂದ ನೀರು ತರಲು ಸಿದ್ದಣ್ಣ ದೊಡ್ಡಮನಿ ಹಾಗೂ ಶಿವಶಂಕರ ತಳವಾರ ಎನ್ನುವವರು ಹೋಗಿದ್ದಾರೆ. ಕರೆಂಟ್‌ ಇಲ್ಲ ಎಂದು ಬಿಲ್‌ ಕಲೆಕ್ಟರ್ ಹೇಳಿದಾಗ, ಇವರ ಮಧ್ಯೆ ಮಾತಿಗೆ ಮಾತು ಬೆಳೆದು, ಪಿಡಿಓ ಜತೆ ಪೋನ್‌ನಲ್ಲಿ ಮಾತನಾಡುವಂತೆ ಬಿಲ್‌ ಕಲೆಕ್ಟರ್ ತಿಳಿಸಿದಾಗ ಸಿದ್ದಣ್ಣ ಮಾತನಾಡಿದ್ದಾನೆ. ಆಗ ಪಿಡಿಒ ಮತ್ತು ಸಿದ್ದಣ್ಣ ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಬಳಿಕ ನಿವಾಸಿಗಳು ನಲ್ಲಿ ಮುರಿದು ಹಾಕಿ 3 ದಿನಗಳು ಆಗಿದೆ ಎನ್ನಲಾಗುತ್ತಿದೆ.
ಪಿಡಿಓ ಅವರಿಬ್ಬರನ್ನು ಕರೆಯಿಸಿ ಗ್ರಾಮ ಪಂಚಾಯತ್ ಆವರಣಕ್ಕೆ ಬರುತ್ತಿದ್ದಂತೆ ಚಪ್ಪಲಿಯಿಂದ ಹೊಡೆದು, ಕಪಾಳ ಮೋಕ್ಷ ಮಾಡುತ್ತಾರೆ. ಮತ್ತೊಬ್ಬ ವ್ಯಕ್ತಿಗೆ ಕೈಯನ್ನು ತಿರುವಿ ಕಪಾಳಕ್ಕೆ ಹೊಡೆಯುತ್ತಾರೆ. ಇದನ್ನು ಬಹುತೇಕ ಗ್ರಾಮಸ್ಥರು ನಿಂತು ನೋಡುತ್ತಿದ್ದಾರೆ. ಇನ್ನು ಕೆಲವು ಬಿಡಿಸಲು ಹೋಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಪಿಡಿಓ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದು, ಹಾಡಹಗಲಲ್ಲೇ ಪಂಚಾಯಿತಿ ಸಭಾಂಗಣದಲ್ಲಿ ರಾಜಾರೋಷವಾಗಿ ಚಪ್ಪಲಿಯಲ್ಲಿ ಹೊಡೆದು ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಶ್ರೀಗಂಧ ಕಳ್ಳತನ ಪ್ರಕರಣ: ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು!

ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಪುತ್ರಪ್ಪಗೌಡ ಮಾತನಾಡಿ, ಕರೆಂಟ್ ಇಲ್ಲದೆ ಆರ್‌ಓ ಪ್ಲಾಂಟ್‌ನಿಂದ ನೀರು ಕೊಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದಾಗ ಸಿದ್ದಣ್ಣ ಮತ್ತು ಶಿವಶಂಕರ ಇಬ್ಬರು ಮನಸ್ಸೋ ಇಚ್ಛೆ ನಿಂದಿಸಿದರು. ಗ್ರಾಪಂ ಕಚೇರಿಗೆ ಕರ್ತವ್ಯ ನಿರ್ವಹಿಸಲು ಹೋದಾಗ ನನಗೆ ಮತ್ತು ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರಿಂದ ಗ್ರಾಪಂ ಅಧ್ಯಕ್ಷರ ಜತೆಗೂಡಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ಪಿಡಿಓಗೆ ಘಟನೆ ಕುರಿತು ನೋಟಿಸ್ ನೀಡಲಾಗುವುದು. ಪಿಡಿಓ ತಪ್ಪು ಮಾಡಿದ್ದು ಕಂಡು ಬಂದರೆ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಪಂಚಾಯತ್‌ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದ್ದಾರೆ.

click me!