Mandya : ಅಕ್ರಮ ಸಕ್ರಮಕ್ಕಾಗಿ ಜಾತಕ ಪಕ್ಷಿಯಂತೆ 35 ವರ್ಷಗಳಿಂದ ಕಾಯುತ್ತಿರುವ ಜನ

By Kannadaprabha NewsFirst Published Oct 15, 2023, 10:04 AM IST
Highlights

ಸರ್ಕಾರದ ತೂಗುಗತ್ತಿ ನಡೆಯುವೆಯೂ ಪಟ್ಟಣದ ಪುರಸಭಾ ವ್ಯಾಪ್ತಿಯ ಹೇಮಾವತಿ ಮತ್ತು ಟಿ.ಬಿ.ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ 582 ನಿವೇಶನದಾರರು ಅಕ್ರಮ-ಸಕ್ರಮಕ್ಕಾಗಿ ಕಳೆದ 35 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

 ಎಂ.ಕೆ.ಹರಿಚರಣ ತಿಲಕ್

  ಕೆ.ಆರ್.ಪೇಟೆ :  ಸರ್ಕಾರದ ತೂಗುಗತ್ತಿ ನಡೆಯುವೆಯೂ ಪಟ್ಟಣದ ಪುರಸಭಾ ವ್ಯಾಪ್ತಿಯ ಹೇಮಾವತಿ ಮತ್ತು ಟಿ.ಬಿ.ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ 582 ನಿವೇಶನದಾರರು ಅಕ್ರಮ-ಸಕ್ರಮಕ್ಕಾಗಿ ಕಳೆದ 35 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪುರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ರಿಗೆ ನಿವೇಶನಗಳನ್ನು ಹಂಚುವ ಸಲುವಾಗಿ 1976-77 ನೇ ಸಾಲಿನಲ್ಲಿ ಹೇಮಾವತಿ ಬಡಾವಣೆಗೆ ನಿರ್ಮಾಣಗೊಂಡಿರುವ ಪ್ರದೇಶದಲ್ಲಿ 51 ಎಕರೆ10 ಗುಂಟೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಸ್ವಾಧೀನಗೊಂಡ ಪ್ರದೇಶದಲ್ಲಿ ಪುರಸಭೆ 1,276 ಗಳನ್ನು ರೂಪಿಸಿ ಅಭಿವೃದ್ದಿಪಡಿಸಿತ್ತು. ಸದರಿ ಬಡಾವಣೆಯಲ್ಲಿ 1995 ಮತ್ತು ಅನಂತರದ ಅವಧಿಯಲ್ಲಿ ಪುರಸಭೆಯ ಅಧ್ಯಕ್ಷರಾಗಿದ್ದ ಹಲವರು ಸರ್ಕಾರದ ಅನುಮತಿ ಪಡೆಯದೆ ನಿವೇಶನಗಳನ್ನು ಹಂಚಿಕೆ ಮಾಡಿದ ಪರಿಣಾಮ ಟಿ.ಬಿ.ಬಡಾವಣೆಗಳು ವಿವಾದದ ಸುಳಿಗೆ ಸಿಲುಕಿವೆ.

ನಿವೇಶನಗಳ ಹಂಚಿಕೆ ಕಾನೂನು ಬಾಹಿರವಾಗಿ ಮಾಡಲಾಗಿದೆ ಎಂದು ಅಂದಿನ ಪಟ್ಟಣ ಪಂಚಾಯತಿ ಸದಸ್ಯ ಕೆ.ಸಿ.ಮಂಜುನಾಥ್ ಎನ್ನುವವರು 2005ರ ಜೂ.13ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡಸಿದ ಲೋಕಾಯುಕ್ತರು 2010ರಜೂ.28ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಭೂಸ್ವಾಧೀನ ಪ್ರಕ್ರಿಯೆ ಹಂತದಿಂದ ನಿವೇಶನಗಳ ಹಂಚಿಕೆ ಹಂತದವರೆಗೆ ಆಗಿರುವ ಲೋಪಗಳನ್ನು ಸರ್ಕಾರಕ್ಕೆ ವರದಿ ಮಾಡಿತು.

ಲೋಕಾಯುಕ್ತರ ವರದಿ ಸಲ್ಲಿಕೆಯಾಗಿ 7 ವರ್ಷಗಳು ಕಳೆದರೂ ರಾಜ್ಯ ಸರ್ಕಾರ ಅಕ್ರಮ-ಸಕ್ರಮದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಇದರಿಂದ ಒಗ್ಗೂಡಿದ ಹೇಮಾವತಿ ಬಡಾವಣೆಯ ನಿವೇಶನದಾರರು ಹೇಮಾವತಿ ಬಡಾವಣೆ ನಿವಾಸಿಗಳ ಸಂಘ ರಚಿಸಿ ಸಕ್ರಮಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 2018 ರಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

2018ರ ನ.16 ರಲ್ಲಿ ರಿಟ್ ಅರ್ಜಿ ಪರಿಶೀಲಿಸಿದ ಘನ ನ್ಯಾಯಾಲಯ ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಲೋಪದೋಷಗಳನ್ನು ಕುರಿತು ಪಾಂಡವಪುರ ಉಪ ವಿಭಾಗಧಿಕಾರಿಗಳು ಮತ್ತು ಪೌರಾಡಳಿತ ನಿರ್ದೇಶನಾಲಯದ(ಅಭಿವೃದ್ದಿ) ಜಂಟಿ ನಿದೇಶಕರ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿತು.

ಸಮಿತಿ ವರದಿಯ ಅನುಸಾರ 1,276 ನಿವೇಶನಗಳ ಪೈಕಿ 515 ನಿವೇಶನಗಳನ್ನು ಪುರಸಭೆ1995 ರಲ್ಲಿ ನಿವೇಶನ ಹಂಚಿಕೆಗಾಗಿ ರಚಿಸಿದ್ದ ಸಮಿತಿಯ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿದೆ. 167 ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಹಂಚಲಾಗಿದೆ. 12 ನಿವೇಶನಗಳನ್ನು ಸರ್ಕಾರಿ, ಸಹಕಾರಿ ಮತ್ತು ಸಾರ್ವಜನಿಕ ಇಲಾಖೆಗಳಿಗೆ ನೀಡಿದ್ದರೂ ಇವುಗಳಿಗೆ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದಿಲ್ಲ. ಆದರೂ ಮೇಲಿನ 694 ನಿವೇಶನಗಳನ್ನು ವಿಶಾಲ ತಳಹದಿಯ ಮೇಲೆ ಪರಗಣಿಸಿ ಅಕ್ರಮ ಸಕ್ರಮಗೊಳಿಸಲು ಪರಿಗಣಿಸಬಹುದೆಂದು ಸೂಚಿಸಿತು.

ಉಳಿದ 582 ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಬಹುದಾಗಿದ್ದರೂ ಹಂಚಿಕೆಯನ್ನು ರದ್ದುಪಡಿಸುವ ಮುನ್ನ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಅಂತಹ ನೋಟಿಸ್ ಗಳಿಗೆ ಬರುವ ಉತ್ತರಗಳನ್ನು ಪರಿಶೀಲಿಸಿ ರದ್ದು ಪಡಿಸುವ ಬಗ್ಗೆ ಮುಂದಿನ ಕ್ರಮ ವಹಿಸಬಹುದೆಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿತು.

ಪಾಂಡವಪುರ ಉಪ ವಿಭಾಗಧಿಕಾರಿಗಳು ಮತ್ತು ಪೌರಾಡಳಿತ ನಿರ್ದೇಶನಾಲಯದ(ಅಭಿವೃದ್ದಿ) ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ವರದಿ ಆಧರಿಸಿ ನಗರಾಭಿವೃದ್ದಿ ಇಲಾಖೆ ಈ ಹಿಂದೆ ಅಧೀನ ಕಾರ್ಯದರ್ಶಿಗಳಾಗಿದ್ದ ಸತೀಶ್ ಕಬಾಡಿ ಅವರು 694 ನಿವೇಶನಗಳನ್ನು ಮಾತ್ರ ಅಕ್ರಮ ಸಕ್ರಮದಡಿ ನಿವೇಶನಗಳ ಖಾತೆ ಮಾಡಲು ಮತ್ತು ಕಟ್ಟಡಗಳ ಪರವಾನಿಗೆ ನೀಡಲು ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಕ್ರಮ ವಹಿಸಲು ಸೂಚಿಸಿ ಆದೇಶಿಸಿದರು.

ಈ ಆದೇಶದನ್ವಯ ಪುರಸಭೆ 694 ನಿವೇಶನಗಳ ಅಕ್ರಮ ಸಕ್ರಮ ಕಾರ್ಯದಲ್ಲಿ ಕ್ರಿಯಾಶೀಲವಾಗಿದೆ. ಆದರೆ, ಉಳಿದ 582 ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರು ಸರ್ಕಾರದ ತೂಗುಗತ್ತಿಯ ಅಡಿಯಲ್ಲಿಯೇ ವಾಸಿಸುತ್ತಿದ್ದಾರೆ.

ಇವರಿಗೆ ವಿವಿಧ ಕಾಲಘಟ್ಟದಲ್ಲಿ ಪುರಸಭೆ ಅಧ್ಯಕ್ಷರು ಸಭೆಗಳಲ್ಲಿ ನಿರ್ಣಯಿಸಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನಿವೇಶನ ಪಡೆದವರು ಪುರಸಭೆ ನಿಗಧಿ ಪಡಿಸಿದ ಹಣವನ್ನು ತಮ್ಮ ತಮ್ಮ ನಿವೇಶನಗಳಿಗೆ ಸಂದಾಯ ಮಾಡಿದ್ದಾರೆ.

582 ನಿವೇಶನದಾರರಲ್ಲಿ ಶೇ.95 ರಷ್ಟು ಮಂದಿ ಸೋಲ ಮಾಡಿ ತಮ್ಮ ಕನಸಿನ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಪುರಸಭೆ ಮತ್ತು ವಿದ್ಯುತ್ ಇಲಾಖೆ ಹೇಮಾವತಿ ಬಡಾವಣೆಯ ಜನರಿಗೆ ಅಗತ್ಯವಾದ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಬಗೆಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.

1995ರಿಂದ ವಿವಿಧ ಹಂತಗಳಲ್ಲಿ ನಿವೇಶನಗಳನ್ನು ನಿಯಮಗಳ ವಿರುದ್ಧವಾಗಿ ಹಂಚಿಕೆ ಮಾಡಲಾಗಿದೆ. ಅಲ್ಲದೇ ರಾಜಕೀಯ ಕಾರಣಕ್ಕಾಗಿ ಅಕ್ರಮ-ಸಕ್ರಮ ನಿವೇಶನಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯರಾಗಿದ್ದ ಕೆ.ಸಿ.ಮಂಜುನಾಥ್ ದೂರು ನೀಡಿದ್ದರು.

ಪುರಸಭೆ ಎಲ್ಲಾ ಬಗೆಯ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರೂ ಬಡಾವಣೆಯಲ್ಲಿರುವ ನಿವೇಶನಗಳು ಅಕ್ರಮ - ಸಕ್ರಮವಾಗದ ಪರಿಣಾಮ ಪುರಸಭೆಗೆ ಮನೆ ಕಂದಾಯ, ನೀರಿನ ತೆರಿಗೆ ಸೇರಿದಂತೆ ಯಾವುದೇ ಆದಾಯ ಬರದೆ ಆರ್ಥಿಕ ನಷ್ಠಕ್ಕೆ ಒಳಗಾಗುತ್ತಿದೆ. ಆದಷ್ಟು ಬೇಗ ಎಲ್ಲಾ ನಿವೇಶನಗಳನ್ನು ಅಕ್ರಮ ಸಕ್ರಮಗೊಳಿಸಿ ಪುರಸಭೆಗೆ ಆದಾಯ ಹೆಚ್ಚಿಸಬೇಕಿದೆ.

ದಿ.ಕೆಂಗೇಗೌಡರನ್ನು ಹೊರತು ಪಡಿಸಿ ನಿವೇಶನ ಹಂಚಿಕೆ ಮಾಡಿರುವ ಉಳಿದೆಲ್ಲಾ ಅಧ್ಯಕ್ಷರುಗಳೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡರ ಆಪ್ತ ಕೆಂಗೇಗೌಡರ ಪುತ್ರ ಕೆ.ಶ್ರೀನಿವಾಸ್ ಮುಡಾ ಅಧ್ಯಕ್ಷರಾಗಿದ್ದರೂ ಬಡಾವಣೆಯ 1,276 ನಿವೇಶನಗಳನ್ನು ಏಕ ಕಾಲದಲ್ಲಿ ಸಕ್ರಮಗೊಳಿಸುವ ಬದಲು ಕೇವಲ 694 ನಿವೇಶನಗಳನ್ನು ಮಾತ್ರ ಸಕ್ರಮಗೊಳಿಸಿ ತಾರತಮ್ಯ ಮಾಡಿದ್ದಾರೆ. ಸರ್ಕಾರ ಕೂಡಲೇ ಬಡಾವಣೆಯ ಎಲ್ಲಾ ನಿವೇಶಗಳನ್ನು ಸಕ್ರಮಗೊಳಿಸಲು ಮುಂದಾಗಬೇಕು.

- ಕೆ.ಸಿ.ಮಂಜುನಾಥ್ ಪುರಸಭೆ ಸದಸ್ಯರು.

click me!