ಕೊಪ್ಪಳ: ಪಂಚಮಸಾಲಿ ಮುಖಂಡರು- ಸಚಿವ ನಿರಾಣಿ ಮಧ್ಯೆ ಮಾತಿನ ಚಕಮಕಿ

By Kannadaprabha News  |  First Published Mar 1, 2021, 1:58 PM IST

ನಾನು ಹೋರಾಟಕ್ಕೆ 1 ಕೋಟಿ ನೀಡಿದ್ದೇನೆ. ಈಗ ನನ್ನ ಹೆಸರೇ ಇಲ್ಲ. ಅಲ್ಲದೆ ಈಗಲೂ ಹೋರಾಟಕ್ಕೆ ದೇಣಿಗೆ ಕೊಟ್ಟಿದ್ದು, ಆ ಲೆಕ್ಕ ಎಲ್ಲಿ ಹೋಯಿತು ಎಂದು ವಿಜಯಾನಂದ ಕಾಶಪ್ಪನವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಸಚಿವ ನಿರಾಣಿ| ಕಾಶಪ್ಪನವರ ಅವರನ್ನು ಯಾರನ್ನು ಕೇಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಸಚಿವರು| 


ಕೊಪ್ಪಳ(ಮಾ.01): ಕಾರ್ಯಕ್ರಮಕ್ಕೂ ತೆರಳುವ ಮುನ್ನ ಕೊಪ್ಪಳದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ಅವರನ್ನು ಶನಿವಾರ ಅಡ್ಡಗಟ್ಟಿ ಮನವಿ ಸಲ್ಲಿಸಲಾಗಿದೆ. ಈ ಸಮಯದಲ್ಲಿ ನಿರಾಣಿ ಮತ್ತು ಪಂಚಮಸಾಲಿ ಮುಖಂಡರ ನಡುವೆ ಮಾತಿನ ಸಮರ ನಡೆದಿದ್ದು, ಇದೀಗ ವೈರಲ್‌ ಆಗಿದೆ.

ಪಂಚಮಸಾಲಿ ಸಮಾಜವನ್ನು ಶೀಘ್ರವೇ 2ಎ ಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನಡಿ ರಾಜ್ಯ ಪಂಚಸೇನೆಯಿಂದ ಕೊಪ್ಪಳದಲ್ಲಿ ಗಣಿ ಸಚಿವ ಮುರುಗೇಶ ನಿರಾಣಿ ಅವರಿಗೆ ಮನವಿ ಸಲ್ಲಿಸುವ ಯತ್ನಕ್ಕೆ ಹಿನ್ನಡೆಯಾಗಿದ್ದರಿಂದ ಸಚಿವರನ್ನು ಕಾರ್ಯಕ್ರಮಕ್ಕೆ ತೆರಳುವ ಮುನ್ನ ತಡೆದು, ಮನವಿ ಸಲ್ಲಿಸಲಾಯಿತು.

Tap to resize

Latest Videos

ರಾಜ್ಯದಲ್ಲಿ ಪಂಚಮಸಾಲಿ ಸಮಾಜವು 50 ಲಕ್ಷ ಜನಸಂಖ್ಯೆ ಹೊಂದಿದೆ. 13 ಜನ ಶಾಸಕರು ಹಾಗೂ ಇಬ್ಬರು ಸಂಸದರು ನಮ್ಮ ಸಮಾಜದಿಂದ ಆಯ್ಕೆಯಾಗಿದ್ದಾರೆ. ಇಬ್ಬರು ಸಚಿವರಾಗಿದ್ದಾರೆ. ನಮ್ಮ ಸಮಾಜದಲ್ಲಿ ಬಡವರು, ಕೂಲಿ ಕೆಲಸದವರು ತುಂಬಾ ಜನರೇ ಇದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುವ ಪಂಚಮಸಾಲಿ ಸಮಾಜವು ಉದ್ಯೋಗ, ಶೈಕ್ಷಣಿಕ ಸೌಲಭ್ಯದಿಂದ ತುಂಬ ತೊಂದರೆ ಎದುರಿಸುತ್ತಿದ್ದಾರೆ. ಸರ್ಕಾರದ ಹಲವು ಸೌಲಭ್ಯಗಳು ನಮ್ಮ ಸಮಾಜದ ಜನರಿಗೆ ದೊರೆಯುತ್ತಿಲ್ಲ. ಇದರಿಂದ ತುಂಬ ನೊಂದಿದ್ದಾರೆ. ಹಾಗಾಗಿಯೇ ಸಮಾಜವನ್ನು 2ಎ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಲಾಯಿತು.

'ಪಂಚಮ ಕಹಳೆ ಬರೀ ಟ್ರೇಲರ್ ಅಷ್ಟೇ. ಮುಂದೈತೆ ಮಾರಿಹಬ್ಬ'!

ಮನವಿ ಸಲ್ಲಿಸುವ ವೇಳೆ ಪದಾಧಿಕಾರಿಗಳಾದ ಸಂಗಮೇಶ ಬಾದವಾಡಗಿ, ದೇವರಾಜ ಹಾಲಸಮುದ್ರ, ದೊಡ್ಡಬಸಪ್ಪ ಕಂಪ್ಲಿ, ಅರುಣಕುಮಾರ, ಸಿ.ಎನ್‌.ಉಪ್ಪಿನ್‌, ಮಾರ್ಕಂಡೆಪ್ಪ ಚಿತವಾಡಗಿ, ಮಂಜುನಾಥ ಉಜಮಚಗಿ, ಅನೀಲ ಪಟ್ಟಣಶೆಟ್ಟಿ, ಬಸವರಾಜ ಸಂಕನಗೌಡ್ರ, ಎನ್‌.ಟಿ. ಪ್ರವೀಣ, ವಿರೇಶ ನಾಲತವಾಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ನಿರಾಣಿ ಆಕ್ರೋಶ

ನಾನು ಸೇರಿದಂತೆ ಅನೇಕರು ಪಂಚಮಸಾಲಿ ಸಮಾಜ 2ಎ ಗೆ ಸೇರಿಸಬೇಕು ಎಂದು ಹೋರಾಟ ಮಾಡಿದ್ದೇವೆ. ಆಗ ಯಡಿಯೂರಪ್ಪ ಅವರೇ ಸಮಿತಿಯನ್ನು ರಚನೆ ಮಾಡಿದ್ದರು. ಈಗ ಬಡಿದುಕೊಳ್ಳುವವರು ಆಗ ಎಲ್ಲಿ ಹೋಗಿದ್ದರು ಎಂದು ಸಚಿವ ಮುರುಗೇಶ ನಿರಾಣಿ ಅವರು ಮನವಿ ಸಲ್ಲಿಸಲು ಬಂದವರೆದರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಹೋರಾಟಕ್ಕೆ 1 ಕೋಟಿ ನೀಡಿದ್ದೇನೆ. ಈಗ ನನ್ನ ಹೆಸರೇ ಇಲ್ಲ. ಅಲ್ಲದೆ ಈಗಲೂ ಹೋರಾಟಕ್ಕೆ ದೇಣಿಗೆ ಕೊಟ್ಟಿದ್ದು, ಆ ಲೆಕ್ಕ ಎಲ್ಲಿ ಹೋಯಿತು ಎಂದು ವಿಜಯಾನಂದ ಕಾಶೆಪ್ಪನವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ವಿಜಯಾನಂದ ಕಾಶಪ್ಪನವರ ಅವರನ್ನು ಯಾರನ್ನು ಕೇಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಯಾವುದೇ ಪಕ್ಷದಲ್ಲಿರುವವರು ಪದಾಧಿಕಾರಿಗಳು ಆಗುವುದು ಬೇಡ ಎನ್ನುವ ಸಲಹೆಯನ್ನು ಕೇಳದೇ ನೇಮಿಸಲಾಗಿದೆ ಎಂದು ಕಿಡಿಕಾರಿದರು.
 

click me!