ಹುಬ್ಬಳ್ಳಿ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ ಶೀಘ್ರ ಪ್ರಾರಂಭ

By Kannadaprabha NewsFirst Published Mar 1, 2021, 1:38 PM IST
Highlights

ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಕಾರ್ಗೋ ಕಾರ್ಯಾರಂಭ ಸಾಧ್ಯತೆ| ಟರ್ಮಿನಲ್‌ ಆರಂಭಿಸುವ ಕುರಿತು ಅಂತಿಮ ಪರಿಶೀಲನೆ ನಡೆಸುತ್ತಿರುವ ನಾಗರಿಕ ವಿಮಾನಯಾನ ಭದ್ರತೆ ಬ್ಯೂರೋದ ನಿಯಂತ್ರಣ ಪ್ರಾಧಿಕಾರ| ಏರ್‌ಲೈನ್ಸ್‌, ಏರ್‌ ಇಂಡಿಯಾ, ಇಂಡಿಗೋ ಮತ್ತು ಸ್ಟಾರ್‌ ಏರ್‌ ಕಾರ್ಗೋ ಟರ್ಮಿನಲ್‌ ಜತೆಗೆ ಕಾರ್ಯನಿರ್ವಹಿಸಲು ಆಸಕ್ತಿ| 

ಹುಬ್ಬಳ್ಳಿ(ಮಾ.01): ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಾರ್ಗೋ ಲಾಜಿಸ್ಟಿಕ್ಸ್‌ ಮತ್ತು ಎಎಐನ ಅಂಗಸಂಸ್ಥೆ ಅಲೈಡ್‌ ಸವೀರ್‍ಸಸ್‌ ಕಂಪನಿ ಸಹಯೋಗದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉತ್ತರ ಕರ್ನಾಟಕದ ಮೊದಲ ದೇಸೀಯ ಏರ್‌ ಕಾರ್ಗೋ ಟರ್ಮಿನಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಹುಶಃ ಮಾರ್ಚ್‌  ಅಂತ್ಯ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಕಾರ್ಗೋ ಟರ್ಮಿನಲ್‌ ಪ್ರಾರಂಭವಾಗುವ ಲಕ್ಷಣಗಳಿವೆ.

ನಾಗರಿಕ ವಿಮಾನಯಾನ ಭದ್ರತೆ ಬ್ಯೂರೋದ ನಿಯಂತ್ರಣ ಪ್ರಾಧಿಕಾರವು ಟರ್ಮಿನಲ್‌ ಆರಂಭಿಸುವ ಕುರಿತು ಅಂತಿಮ ಪರಿಶೀಲನೆ ನಡೆಸುತ್ತಿದೆ. ನಿಯಂತ್ರಣ ಪ್ರಾಧಿಕಾರದ ಅಂತಿಮ ಅನುಮೋದನೆ ದೊರೆಯುತ್ತಿದ್ದಂತೆ ಸರಕು ಟರ್ಮಿನಲ್‌ಗೆ ಚಾಲನೆ ನೀಡಲಾಗುತ್ತಿದ್ದು, 2021ರ ಮಾರ್ಚ್‌ ಇಲ್ಲವೇ ಏಪ್ರಿಲ್‌ ಆರಂಭದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.

ಹಳೆ ಕಟ್ಟಡದಲ್ಲಿ ಕಾರ್ಗೋ:

ವಿಮಾನ ನಿಲ್ದಾಣದ ಪ್ರಯಾಣಿಕರ ಹಳೇ ಕಟ್ಟಡವನ್ನು ಸುಮಾರು 60.6 ಲಕ್ಷ ವೆಚ್ಚದಲ್ಲಿ 700 ಚ.ಮೀ. ವಿಸ್ತಾರವಾದ ಜಾಗದಲ್ಲಿ ನೂತನ ಸರಕು ಟರ್ಮಿನಲ್‌ ಸ್ಥಾಪಿಸಲಾಗಿದ್ದು, ಟರ್ಮಿನಲ್‌ ಒಳಗೆ ಬರುವ ಹಾಗೂ ಹೊರಗೆ ಹೋಗುವ ವಸ್ತುಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಲೆ ಬಾಳುವ ಮತ್ತು ಅಪಾಯಕಾರಿ ವಸ್ತುಗಳಿಗೆ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿದೆ. ವಾರ್ಷಿಕ 15,000 ಮೆ. ಟನ್‌ ಸರಕು ಸಾಮರ್ಥ್ಯವನ್ನು ಹೊಂದಿದೆ. ಈ ಟರ್ಮಿನಲ್‌ನಲ್ಲಿ ಎಕ್ಸರೇ ಬ್ಯಾಗೇಜ್‌ ತಪಾಸಣೆ ವ್ಯವಸ್ಥೆಯಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ILS ಅಳವಡಿಕೆ ಪೂರ್ಣ

ಈಗಾಗಲೇ ವಿಮಾನಯಾನ ನಡೆಸುತ್ತಿರುವ ಏರ್‌ಲೈನ್ಸ್‌, ಏರ್‌ ಇಂಡಿಯಾ, ಇಂಡಿಗೋ ಮತ್ತು ಸ್ಟಾರ್‌ ಏರ್‌ ಕಾರ್ಗೋ ಟರ್ಮಿನಲ್‌ ಜತೆಗೆ ಕಾರ್ಯನಿರ್ವಹಿಸಲು ಆಸಕ್ತಿ ವ್ಯಕ್ತಪಡಿಸಿವೆ. ಈ ಸಂಸ್ಥೆಗಳು ಹುಬ್ಬಳ್ಳಿಯಿಂದ ನೇರವಾಗಿ ಚೈನ್ನೈ, ಬೆಂಗಳೂರು ಮತ್ತು ಮುಂಬೈಯಂತಹ ಪ್ರಮುಖ ಗೇಟ್‌ವೇ ಬಂದರುಗಳಿಗೆ ಸಂಪರ್ಕ ಹೊಂದಿವೆ.

ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆ ಪ್ರಸ್ತಾಪ ಪರಿಗಣನೆಯಲ್ಲಿದೆ. ಸ್ಥಳೀಯ ಬೇಡಿಕೆಯನ್ನು ಅವಲಂಬಿಸಿ, ವಿಮಾನಯಾನ ಸಂಸ್ಥೆಗಳು ಎ- 320, ಎಟಿಆರ್‌, ಎಂಬ್ರೇರ್‌ ಬೃಹತ್‌ ಸರಕುಗಳನ್ನು ವಿಮಾನಗಳನ್ನು ಹೊರತುಪಡಿಸಿ ಸರಕು ಚಾರ್ಟರ್‌ಗಳನ್ನು ಸಹ ಹಾರಾಟ ನಡೆಸಲು ಸಂಸ್ಥೆಗಳು ಉತ್ಸುಕವಾಗಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್‌ ಕುಮಾರ್‌ ಠಾಕ್ರೆ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರು, ನಿಯಂತ್ರಕ ಅಧಿಕಾರಿಗಳು ಕಾರ್ಗೋ ಟರ್ಮಿನಲ್‌ನ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರಲ್ಲದೇ, ಅನುಮೋದನೆ ಸಹ ನೀಡಿದ್ದಾರೆ. ವಾಯುಯಾನ ಸುರಕ್ಷತೆಗೆ ಸಂಬಂಧಿಸಿದ ನಿಯಮ ಪಾಲನೆ ಅಂತಿಮಗೊಂಡರೆ, 2021ರ ಮಾರ್ಚ್‌ ಅಂತ್ಯ ಇಲ್ಲವೇ ಏಪ್ರಿಲ್‌ 1ನೇ ವಾರದೊಳಗೆ ಮೀಸಲಾದ ಸರಕು ಟರ್ಮಿನಲ್‌ ಆರಂಭಿಸುವ ವಿಶ್ವಾಸವಿದೆ ಎಂದು ಠಾಕ್ರೆ ತಿಳಿಸಿದ್ದಾರೆ.
 

click me!