
ಸುವರ್ಣಸೌಧ(ಡಿ.23): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ನಾನು ಯಾವತ್ತೂ ವಿರೋಧ ಮಾಡಿಲ್ಲ. ನಾನು ಸದಾ ಪಂಚಮಸಾಲಿಗಳ ಪರವಾಗಿದ್ದೇನೆ. ಮೀಸಲಾತಿ ವಿಚಾರದಲ್ಲಿ ಇಂದಲ್ಲ ನಾಳೆ ಅವರಿಗೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುವರ್ಣಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ತಡವಾಗುತ್ತಿರುವುದಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ತಮ್ಮ ಮೇಲೆ ಬೊಟ್ಟು ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪಂಚಮಸಾಲಿಗೆ ಮೀಸಲಾತಿ ಸಿಎಂ ಕೊಟ್ಟೇ ಕೊಡುತ್ತಾರೆ: ಯತ್ನಾಳ
ನಾನು ಅಧಿಕಾರದಲ್ಲಿದ್ದಾಗ ಮತ್ತು ಈಗ, ಯಾವಾಗಲೂ ಪಂಚಮಸಾಲಿಗಳ ಪರವಾಗಿಯೇ ಇದ್ದೇನೆ. ಆ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂದು ನಾನೂ ಕೂಡ ಹೇಳಿದ್ದೇನೆ. ಸ್ವಾಮೀಜಿ ಯಾಕೆ ನನ್ನ ವಿರುದ್ಧ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಮೀಸಲಾತಿ ದೊರೆಯಲಿಲ್ಲ ಎಂಬ ಕಾರಣಕ್ಕೆ ಅಸಮಾದಾನ ಇರಬಹುದು. ನಾನು ಸ್ವಾಮೀಜಿ ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ಮುಖ್ಯಮಂತ್ರಿ ಅವರ ಜೊತೆಗೂ ಚರ್ಚೆ ಮಾಡುತ್ತೇನೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಬೇಡಿಕೆ ನ್ಯಾಯಸಮ್ಮತವಾಗಿದೆ. ಅದು ಇಂದಲ್ಲ ನಾಳೆ ಅವರಿಗೆ ಸಿಗುತ್ತದೆ ಎಂದರು.