ಜ.6ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರುವರೆಗೆ ವಿವಿಧ ಜಿಲ್ಲೆಗಳ ಮೂಲಕ 658 ಕಿಮೀ ಪಾದಯಾತ್ರೆ ಆರಂಭ.
ಮಂಗಳೂರು(ಡಿ.23): ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸೇರಿದಂತೆ ಬಿಲ್ಲವ ಸಮುದಾಯದ ಪ್ರಮುಖ ಮೂರು ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದರೆ ಪಾದಯಾತ್ರೆ ನಿರ್ಧಾರವನ್ನು ವಾಪಸ್ ಪಡೆಯುವ ಚಿಂತನೆ ನಡೆಸುತ್ತೇವೆ. ಇಲ್ಲದಿದ್ದರೆ 658 ಕಿ.ಮೀ. ಪಾದಯಾತ್ರೆ ನಡೆಸಿಯೇ ಸಿದ್ಧ ಎಂದು ಕಲಬುರಗಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.6ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರುವರೆಗೆ ವಿವಿಧ ಜಿಲ್ಲೆಗಳ ಮೂಲಕ 658 ಕಿಮೀ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಗೆ ಮುನ್ನ ಬೆಳಗ್ಗೆ 10ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, 25 ಹಿಂದುಳಿದ ವರ್ಗದ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ತೆಲಂಗಾಣದ ಮಂತ್ರಿ ಶ್ರೀನಿವಾಸ ಗೌಡ್ ನೆರವೇರಿಸುತ್ತಾರೆ. ಶಿವಗಿರಿ ಮಠದಿಂದ ಇಬ್ಬರು ಸನ್ಯಾಸಿಗಳು, ಸಮುದಾಯದ ಸ್ವಾಮೀಜಿಗಳು, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿರುವ ಬಿಲ್ಲವ ಸಮುದಾಯದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ ಎಂದು ತಿಳಿಸಿದರು.
ಬಿಲ್ಲವ,ಈಡಿಗರಿಗೆ 2ಎ ಮೀಸಲು ಹೆಚ್ಚಳಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
ನಮ್ಮ ಒಟ್ಟು 10 ಬೇಡಿಕೆಗಳ ಪೈಕಿ ನಾರಾಯಣ ಗುರು ನಿಗಮ ಸ್ಥಾಪನೆ, ರಾಜ್ಯಾದ್ಯಂತ ಸೇಂದಿ ಇಳಿಸಿ ಮಾರಾಟಕ್ಕೆ ಅವಕಾಶ ನೀಡಬೇಕು, ಸಿಗಂದೂರು ದೇವಳ ವಿಚಾರದಲ್ಲಿ ಈಡಿಗ ಸಮಾಜದ ಬೇಡಿಕೆ ಈಡೇರಿಸುವ ಮೂರು ಪ್ರಬಲ ಬೇಡಿಕೆ ನಮ್ಮದು. ಈ ಬೇಡಿಕೆಗಳು ಈಡೇರಲೇಬೇಕು ಎಂದರು. ಪಾದಯಾತ್ರೆ ಸಮಿತಿ ಜಿಲ್ಲಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಮಾಜಿ ಮೇಯರ್ ಕವಿತಾ ಸನಿಲ್, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶಂಕರ್ ಸುವರ್ಣಇದ್ದರು.
ದ.ಕ.ದಲ್ಲಿ 4 ಸ್ಥಾನ ಕೊಡಬೇಕು
ಬಿಲ್ಲವ ಸಮುದಾಯ ಅತ್ಯಧಿಕ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ 4 ಸೀಟುಗಳನ್ನು ಬಿಲ್ಲವ ಸಮುದಾಯಕ್ಕೆ ನೀಡಬೇಕು. ಉಡುಪಿಯಲ್ಲಿ 3 ಸೀಟುಗಳನ್ನು ನೀಡಲೇಬೇಕು ಎಂದು ಪ್ರಣವಾನಂದ ಶ್ರೀ ಆಗ್ರಹಿಸಿದರು. ಅದೇ ರೀತಿ ಶಿವಮೊಗ್ಗದಲ್ಲಿ 4, ಉ.ಕ.ದಲ್ಲಿ 3 ಸೀಟ್ ನೀಡಬೇಕು. ಇಷ್ಟುವರ್ಷ ಬಿಲ್ಲವರನ್ನು ಒಡೆದು ಆಳಿದ್ದೀರಿ. ಮುಂದೆಯೂ ಸಮುದಾಯಕ್ಕೆ ಅನ್ಯಾಯ ಆಗಬಾರದು ಎಂದರು.