
ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜ.26): ಸಿಲಿಕಾನ್ ಸಿಟಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಹಲವು ಯೋಜನೆಗಳು ಪರಿಸರಕ್ಕೆ ಹಾನಿಕಾರಕ ಎಂದು ಜನರು ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಅದಕ್ಕೆ ಕಿಂಚಿತ್ತೂ ಕಿಮ್ಮತ್ತು ಕೊಡುತ್ತಿಲ್ಲ. ಅಂತಹದ್ದೇ ಒಂದು ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಇದೀಗಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಕಡೆಯಿಂದ ಸಾಕಷ್ಟು ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ. ಆದ್ರೆ ಎಲ್ಲೋ ಒಂದೆಡೆ ಇದು ನಮ್ಮ ಗಾರ್ಡನ್ ಸಿಟಿಯ ಹಸಿರನ್ನು ನಾಶಮಾಡಲು ಹೊರಟಿದೆ.
ಇದನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ಹೊರಟಿದೆ. ಇದಕ್ಕೆಂದು ಸರಿ ಸುಮಾರು 50-60 ಮರಗಳ ಮಾರಣವಾಗುತ್ತದೆ ಎಂದು ತಿಳಿದಿದೆ. ಇದನ್ನು ಕೇಳಿದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಸ್ಯಾಂಕಿ ರಸ್ತೆಯ ವಿಸ್ತರಣೆ ಹಾಗೂ ಟಿ.ಚೌಡಯ್ಯ ರಸ್ತೆಯಿಂದ 18ನೇ ಕ್ರಾಸ್ ತನಕ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ. ಸಾಕಷ್ಟು ವಿಳಂಬದ ನಂತರ ಈ ಬಹುನಿರೀಕ್ಷಿತ 4 ಪಥದ ಮೇಲು ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದಿರುವ ಪಾಲಿಕೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಪ್ಲಾನ್ ಹಾಕಿಕೊಂಡಿದೆ.
ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭ್ರಷ್ಟಾಚಾರ: ಅಧಿಕಾರಿಗಳ ಬಣ್ಣ ಬಯಲು ಮಾಡಿದ ರುಪ್ಸಾ
ಸ್ಯಾಂಕಿ ಟ್ಯಾಂಕ್ ಪಕ್ಕದ ರಸ್ತೆಯ ಮೇಲೆ ಹಾದು ಹೋಗುವ ಫ್ಲೈ ಓವರ್ ಯಶವಂತಪುರ ಕಡೆಗೆ ಸಾಗುವ ಮಲ್ಲೇಶ್ವರಂ 18th ಕ್ರಾಸ್‌ನಲ್ಲಿ ಅಂತ್ಯವಾಗಲಿದೆ. ಫ್ಲೈ ಓವರ್ ವಿಶೇಷತೆಗಳನ್ನು ಹೊಂದಿರಲಿದೆ. ಸಂಪೂರ್ಣ ಪರಿಸರ ಸ್ನೇಹಿತ ಥೀಮ್ ನೊಂದಿಗೆ ಚಿಂತನೆ ನಡೆಸಲಾಗಿದೆ. ಪ್ರತಿದಿನ ಸುಮಾರು 9 ರಿಂದ 10 ಸಾವಿರ ವಾಹನಗಳು ಈ ಸೇತುವೆ ಮೂಲಕ ಹಾದು ಹೋಗಬಹುದು ಅಂದಾಜಿಸಲಾಗಿದೆ. ಹೊಸ ಮೇಲೇತುವೆ 560 ಮೀ ಉದ್ದ ಮತ್ತು 17 ಮೀ ಅಗಲವಿದೆ. ಬಿಬಿಎಂಪಿಯು ಸೇತುವೆಯ ಕೆಳಗೆ 590 ಮೀ ವಿಸ್ತರಿಸುವ ದ್ವಿಪಥ ರಸ್ತೆಗಳನ್ನು ಮತ್ತು 5.5 ಮೀ ಅಗಲದ ಸ್ಲಿಪ್ ರಸ್ತೆಗಳನ್ನು ನಿರ್ಮಿಸುತ್ತದೆ.
ಪಾಲಿಕೆ 49.59 ಕೋಟಿ ಮೊತ್ತದ ಟೆಂಡರ್ ಕರೆದಿದೆ. ಉಳಿದ 10.31 ಕೋಟಿ ರೂ.ಗಳನ್ನು ಜಿಎಸ್ಟಿ ಮತ್ತು ತಯಾರಿಕೆಯಂತಹ ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಿದೆ. ಯೋಜನೆ ಪರಿಸರಕ್ಕೆ ಮಾರಕ ಎಂದು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು, ಸ್ಥಳಿಯರ ಜೊತೆಗೆ ಈಗ ಶಾಲಾ ಮಕ್ಕಳು ಸಹ ಸ್ಯಾಂಕಿ ಕೆರೆ ಉಳಿವಿಗಾಗಿ ಪಣ ತೊಟ್ಟಿದ್ದಾರೆ.ನಗರದ ಸುಮಾರು 2000ಕ್ಕೂ ಹೆಚ್ಚು ಮಕ್ಕಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಸ್ಯಾಂಕಿ ರೋಡ್ ಮೇಲ್ಸೇತುವೆ ನಿಲ್ಲಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ
ಪತ್ರದಲ್ಲಿ, 'ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ. ನಾವು ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಡಲು ಬಯಸುತ್ತೇವೆ' ಎಂದು ಬರೆಯಲಲಾಗಿದೆ. ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಇದಕ್ಕೆ ಪರಿಸರವಾದಿಗಳು ಸೇರಿದಂತೆ ಸ್ಥಳಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯೋಜನೆಯಿಂದ ಬಿಬಿಎಂಪಿ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಬೆಂಗಳೂರಿನ ಕೆಲವು ನಿವಾಸಿಗಳು ಆನ್ಲೈನ್ ಅರ್ಜಿ ಅಭಿಯಾನ ಆರಂಭಿಸಿದ್ದರು. ಇವರಿಗೆ ಈಗ ಮಕ್ಕಳು ಪತ್ರದ ಮೂಲಕ ಸಾಥ್ ನೀಡಿದ್ದಾರೆ.