ಮೆದುಳು ನಿಷ್ಕ್ರೀಯ: ಕೊಪ್ಪಳದ ವ್ಯಕ್ತಿಯ ಅಂಗಾಂಗ ದಾನ, ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ..!

By Kannadaprabha News  |  First Published Sep 23, 2022, 7:30 AM IST

ವೈದ್ಯರ ಮನವರಿಕೆಯಿಂದ ಗಿರೀಶನ ಪತ್ನಿ ಸೀತಾಬಾಯಿ ಮತ್ತು ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದರು.


ಹುಬ್ಬಳ್ಳಿ(ಸೆ.23):  ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಕೊಪ್ಪಳ ತಾಲೂಕಿನ ಕುಣಕೇರಿ ತಾಂಡಾ ನಿವಾಸಿ ಗಿರೀಶ್‌ ಕುರಿ (38) ಅವರ ಮೆದುಳು ನಿಷ್ಕ್ರೀಯವಾದ ಹಿನ್ನಲೆಯಲ್ಲಿ ಕುಟುಂಬದವರು ಗಾಯಾಳುವಿನ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಗುರುವಾರ ತಡರಾತ್ರಿ ನಗರದಲ್ಲಿ ನಡೆದಿದೆ. ಗಾಯಾಳುವನ್ನು ಗುರುವಾರ ಸಂಜೆ ಕೊಪ್ಪಳ ಖಾಸಗೀ ಆಸ್ಪತ್ರೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ತರಲಾಗಿತ್ತು. ದಾರಿ ಮಧ್ಯದಲ್ಲಿಯೇ ಗಾಯಾಳು ರಕ್ತವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥನಾಗಿದ್ದ. ಎಸ್‌ಡಿಎಂ ವೈದ್ಯರು ಪರಿಶೀಲಿಸಿದಾಗ ಮೆದುಳು ನಿಷ್ಕ್ರೀಯಗೊಂಡಿದ್ದು ಖಚಿತವಾಯಿತು. ವೈದ್ಯರ ಮನವರಿಕೆಯಿಂದ ಗಿರೀಶನ ಪತ್ನಿ ಸೀತಾಬಾಯಿ ಮತ್ತು ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದರು.

ತಡರಾತ್ರಿಯೇ ವೈದ್ಯರು ಗಾಯಾಳುವಿನ ಕಿಡ್ನಿ, ಲಿವರ್‌, ಕಣ್ಣು ಮುಂತಾದ ಬಹು ಅಂಗಾಂಗಗಳನ್ನು ತೆಗೆದು ಸಂರಕ್ಷಿಸಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಈ ಅಂಗಾಂಗಗಳಿಂದ ಸುಮಾರು ಮೂರು ಜನರಿಗೆ ಪುನರ್ಜನ್ಮ ಲಭಿಸಿದೆ ಎಂದು ಮೂಲಗಳು ಹೇಳಿವೆ.

Tap to resize

Latest Videos

undefined

Chikkamagaluru: ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ಪುತ್ರನನ್ನು ಉಳಿಸಲು:

ಕೊಪ್ಪಳ ಪಿಬಿಎಸ್‌ ಕಂಪೆನಿಯಲ್ಲಿ ಫಿಟ್ಟರ್‌ ಎಂದು ಗಿರೀಶ್‌ ಕೆಲಸ ಮಾಡುತ್ತಿದ್ದರು. ಹಿರಿಯ ಪುತ್ರ ಪ್ರವೀಣ ಗಂಗಾವತಿ ಸರ್ಕಾರಿ ಹಾಸ್ಟೇಲಿನಲ್ಲಿ ಇದ್ದು ಏಳನೇ ತರಗತಿ ಓದುತ್ತಿದ್ದ. ಆತನಿಗೆ ಜ್ವರ, ನೆಗಡಿ ಕಾಣಿಸಿಕೊಂಡಿದ್ದರಿಂದ ಭಾನುವಾರ ಗಂಗಾವತಿಗೆ ಹೋಗಿ ಮಗನನ್ನು ಕರೆದುಕೊಂಡು ಕೊಪ್ಪಳಕ್ಕೆ ಬಂದು ಚಿಕಿತ್ಸೆ ಕೊಡಿಸಿದ್ದ.

ಬಳಿಕ ಬೈಕ್‌ನಲ್ಲಿ ತಾಂಡಾಕ್ಕೆ ಹೋಗುವಾಗ ಎದುರುಗಡೆ ಪಾನಮತ್ತ ವ್ಯಕ್ತಿಯೊಬ್ಬ ಎರ್ರಾಬ್ರಿಯಾಗಿ ಬೈಕ್‌ ಓಡಿಸಿಕೊಂಡು ಬಂದಿದ್ದಾನೆ. ಹಿಂದೆ ಕುಳಿತ ಮಗನನ್ನು ಎಡಗೈಯಿಂದ ಹಿಡಿದು, ಬಲಗೈಯಲ್ಲಿ ಬೈಕ್‌ ಓಡಿಸುತ್ತಿದ್ದಾಗ ಎದುರು ಬಂದ ಬೈಕ್‌ ಅಪ್ಪಳಿಸಿದೆ. ಆಯ ತಪ್ಪಿ ಇಬ್ಬರೂ ಕೆಳಕ್ಕುರುಳಿದ್ದಾರೆ. ಆದರೆ ಗಿರೀಶನ ತಲೆ ಕಲ್ಲಿಗೆ ಬಡಿದಿದೆ. ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಆಸ್ಪತ್ರೆಗೆ ತಂದಿದ್ದಾರೆ. ಚಿಕಿತ್ಸೆ ಫಲಿಸಿಲ್ಲ.

ಗಿರೀಶನಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅವರೆಲ್ಲ ಕಣ್ಣೀರಲ್ಲಿ ಕೈತೊಳೆಯುತ್ತಲೆ ಬೇರೆ ಜೀವಗಳಿಗೆ ಆಸರೆಯಾಗಿದ್ದಾರೆ ಎಂದು ಕಣ್ಣೀರಿಟ್ಟರು ಗಿರೀಶನ ಮಾವ ಕಾಳಪ್ಪ ರಾಠೋಡ.
 

click me!