Bengaluru Flood: ಬೆಂಗಳೂರಿನಲ್ಲೀಗ ಗುಂಡಿ ಬಿದ್ದ ರಸ್ತೆಗಳಿಂದಲೇ ಸಮಸ್ಯೆ..!

By Kannadaprabha News  |  First Published Sep 11, 2022, 5:51 AM IST

ನೆರೆ ಪೀಡಿತ 27 ರಸ್ತೆಗಳಲ್ಲಿ ನೀರು ಇಳಿಕೆ, ಪ್ರವಾಹದಿಂದ ರಸ್ತೆ ಗುಂಡಿ ಸೃಷ್ಟಿ, ಈ ರಸ್ತೆಗಳಲ್ಲಿ ವಾಹನ ಚಲಾಯಿಸುವ ಸವಾಲು


ಬೆಂಗಳೂರು(ಸೆ.11):  ಭಾರೀ ಮಳೆಗೆ ನಲುಗಿದ್ದ ಮಹದೇವಪುರ ವ್ಯಾಪ್ತಿಯ ಬಡಾವಣೆಗಳು, ಅಪಾರ್ಚ್‌ಮೆಂಟ್‌ಗಳಲ್ಲಿ ಪರಿಹಾರ ಕೈಗೊಂಡಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜೊತೆಗೆ ಪ್ರಮುಖ ರಸ್ತೆಗಳು ಮತ್ತು ವಾರ್ಡ್‌ ರಸ್ತೆಗಳು ಸೇರಿ 27 ರಸ್ತೆಗಳಲ್ಲಿ ತುಂಬಿಕೊಂಡಿದ್ದ ನೀರು ಬಹುತೇಕ ಇಳಿಕೆಯಾಗಿದೆ. ಆದರೆ, ಮಳೆಯಿಂದ ಬಿದ್ದಿರುವ ರಸ್ತೆ ಗುಂಡಿಗಳಿಂದ ವಾಹನ ಸವಾರರು ಸುಗಮ ಸಂಚಾರಕ್ಕೆ ಉಂಟಾಗಿರುವ ಸಮಸ್ಯೆ ಮುಂದುವರೆದಿದೆ.

ಮಳೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದ್ದ ಬಡಾವಣೆಗಳು, ಅಪಾರ್ಚ್‌ಮೆಂಟ್‌ಗಳು ಹಾಗೂ ವಸತಿ ಪ್ರದೇಶಗಳ ಸುಮಾರು 136 ಪ್ರದೇಶಗಳ ಪೈಕಿ 130 ಜಾಗಗಳಲ್ಲಿ ಶುಕ್ರವಾರವೇ ನೀರು ಹೊರಹಾಕಲಾಗಿತ್ತು. ಎಲ್ಲೆಡೆ ಸಾಂಕ್ರಾಮಿಕ ರೋಗ ಹರಡದಂತೆ ಔಷಧಿಗಳನ್ನು ಸಿಂಡಪಿಸಲಾಗಿದೆ. ಜತೆಗೆ ಅಪಾರ್ಚ್‌ಮೆಂಟ್‌ಗಳ ನೆಲಮಹಡಿಯಲ್ಲಿದ್ದ ನೀರು ಪಂಪ್‌ಗಳ ಮೂಲಕ ತೆಗೆದಿದ್ದು, ತುಂಬಿಕೊಂಡಿದ್ದ ಕೆಸರನ್ನು ಕೂಡಾ ಹೊರ ಹಾಕಲಾಗಿದೆ.

Tap to resize

Latest Videos

ನಿರಂತರ ಮಳೆಗೆ ಮತ್ತೆ ಗುಂಡಿ ಬಿದ್ದ ರಸ್ತೆಗಳು

ರೋನ್‌ಬೋ ಡ್ರೈವ್‌ ಲೇಔಟ್‌, ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ದಿ ಕಂಟ್ರಿಸೈಡ್‌ ಲೇಔಟ್‌ ಸೇರಿದಂತೆ ಇತರೆ ಕಡೆಗಳಲ್ಲಿ ಸಂಪ್‌ಗಳಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರು, ಕೆಸರನ್ನು ತೆರವು ಮಾಡುವ ಕಾರ್ಯ ಮುಂದುವರೆದಿದೆ. ಹಾಗೆಯೇ ಯಮಲೂರಿನ ಎಪ್ಸಿಲಾನ್‌ ಲೇಔಟ್‌, ಬೆಳ್ಳತ್ತೂರು ಕೀರ್ತಿ ಹೈಟ್ಸ್‌ ಅಪಾರ್ಚ್‌ಮೆಂಟ್‌, ದಿವ್ಯಶ್ರೀ ಅಪಾರ್ಚ್‌ಮೆಂಟ್‌, ಯಮಲೂರಿನ ಕೋಡಿ ಸಮೀಪದ ವಿಲ್ಲಾಗಳು, ಮುನೇನಕೊಳಲು ಅಪಾರ್ಚ್‌ಮೆಂಟ್‌ ಸೇರಿದಂತೆ ಏಳೆಂಟು ಅಪಾರ್ಚ್‌ಮೆಂಟ್‌ಗಳು, ಒಂದೆರಡು ಲೇಔಟ್‌ಗಳಲ್ಲಿ ಸ್ವಲ್ಪ ನೀರು ಹಾಗೆಯೇ ಇದ್ದು ಶನಿವಾರವೂ ಪರಿಹಾರ ಕಾರ್ಯ ಮುಂದುವರೆದಿತ್ತು.

ಜಲಮಂಡಳಿಯು ಅಪಾರ್ಚ್‌ಮೆಂಟ್‌ಗಳ ನೆಲಮಹಡಿ, ರಸ್ತೆಗಳು, ಲೇಔಟ್‌ಗಳಲ್ಲಿ ತುಂಬಿಕೊಂಡಿರುವ ಕೆಸರು ತೆರವುಗೊಳಿಸುವ ಕಾರ್ಯ ಕೈಗೊಂಡಿತ್ತು. ಸಂಪ್‌ಗಳಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ತೆಗೆಯಲು 15ಕ್ಕೂ ಹೆಚ್ಚು ಸಕ್ಕಿಂಗ್‌ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಜಲಮಂಡಳಿ, ಬಿಬಿಎಂಪಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದರು. ಬೆಸ್ಕಾಂನಿಂದಲೂ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಹಿಂದೆ ಪ್ರವಾಹದ ಹಿನ್ನೆಲೆಯಲ್ಲಿ ಸಿದ್ಧಾರ್ಥ ಲೇಔಟ್‌, ಕೊರಲೂರು ರಸ್ತೆ, ರಾಮಯ್ಯ ಗಾರ್ಡನ್‌ನಿಂದ ಸುಮಾರು 250 ಜನರಿಗೆ ಆರೈಕೆ ಕೇಂದ್ರ ಸ್ಥಾಪಿಸಿ, ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಹುತೇಕ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಹಲವರು ಪುನಃ ತಮ್ಮ ಮನೆಗಳಿಗೆ ತೆರಳಿದ್ದು, ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಆದರೂ ಅಗತ್ಯ ಇರುವವರಿಗೆ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರು ಕೊಡುವುದನ್ನು ಮುಂದುವರೆಸಲಾಗಿದೆ.

PM Modi visit ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ, ವರ್ಷಗಳಿಂದ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರ್!

ಬೊಮ್ಮನಹಳ್ಳಿ ವ್ಯಾಪ್ತಿ ಸ್ವಚ್ಛತೆ ಕಾರ‍್ಯ ಪೂರ್ಣ

ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಲೇಔಟ್‌ 6 ಮತ್ತು 7ನೇ ಹಂತದ 9 ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆಯುಂಟಾಗಿತ್ತು. ಈಗಾಗಲೇ ನೀರನ್ನು ಹೊರಹಾಕಿದ್ದು, ವಾಹನ ಸಂಚಾರ ಸುಗಮಗೊಳಿಸಲಾಗಿದೆ. ಹೊಂಗಸಂದ್ರ ಬಡಾವಣೆ, ಬೇಗೂರು ರಾಜಕಾಲುವೆ ಪಕ್ಕದ ಓಂಶಕ್ತಿ ಬಡಾವಣೆ, ವಾಜಪೇಯಿ ಬಡಾವಣೆ, ಮುನಿಯಪ್ಪ ಬಡಾವಣೆ, ವಿದ್ಯಾಜ್ಯೋತಿ ನಗರದ ವಸತಿ ಪ್ರದೇಶಗಳಲ್ಲೂ ಪರಿಹಾರ ಕಾರ್ಯ ಕೈಗೊಂಡಿದ್ದು ಜನಜೀವನ ಸಹಜ ಸ್ಥಿತಿಯತ್ತ ಬಂದಿದೆ. ಹಾಗೆಯೇ ವಿಶ್ವಪ್ರಿಯ ಬಡಾವಣೆಯಲ್ಲಿ ರಾಜಕಾಲುವೆ ನೀರು ಹರಿದು 140ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ತೊಂದರೆಯುಂಟಾಗಿದ್ದನ್ನು ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್‌ ತಂಡ ಕ್ರಮಕೈಗೊಂಡು ನೀರು ಹೊರಹಾಕಿದ್ದಾರೆ. ಅಲ್ಲದೆ ಮನೆಗಳಲ್ಲಿ ಕುಟುಂಬಸ್ಥರು ಸ್ವಚ್ಛತೆ ಕೈಗೊಂಡಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಮಳೆ ಹಾನಿಗೊಳಗಾದ ಒಂಟಿ ಮನೆಗಳಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಬೊಮ್ಮನಹಳ್ಳಿ ವಲಯದ ಪಾಲಿಕೆ ಅಧಿಕಾರಿಗಳು ಮಹಿತಿ ನೀಡಿದ್ದಾರೆ.

933 ಒಂಟಿ ಮನೆಗಳಿಗೆ 2 ದಿನಗಳಲ್ಲಿ ಪರಿಹಾರ

ಹಾನಿಗೊಳಗಾದ ಒಂಟಿ ಮನೆಗಳ ಪ್ರದೇಶಗಳಲ್ಲಿ ಕಂದಾಯ ವಿಭಾಗದ ಅಧಿಕಾರಿಗಳ ತಂಡವು ಸಮೀಕ್ಷೆ ನಡೆಸಿದ್ದು 933 ಮನೆಗಳನ್ನು ಗುರುತಿಸಿದೆ. ಅವರಿಂದ ದಾಖಲಾತಿ ಪಡೆದು ಎಸ್‌ಡಿಆರ್‌ಎಫ್‌ ನಿಯಮಾವಳಿಯಂತೆ ಪರಿಹಾರ ನೀಡಲು ಕ್ರಮಕೈಗೊಂಡಿದೆ. ಈಗಾಗಲೇ ವರದಿಯನ್ನು ಫಲಾನುಭವಿಗಳಿಗೆ ನೇರ ವರ್ಗಾವಣೆಗೆ (ಡಿಬಿಟಿ) ಕಳುಹಿಸಿ ಕೊಡಲಾಗಿದ್ದು, ಸೋಮವಾರ ಅಥವಾ ಮಂಗಳವಾರ ಪರಿಹಾರ ಸಿಗುವ ಸಾಧ್ಯತೆ ಇದೆ. ಎಸ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಫಲಾನುಭವಿಗಳಿಗೆ ತಲಾ .10 ಸಾವಿರ ಪರಿಹಾರ ಸಿಗಲಿದೆ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
 

click me!