Bengaluru: ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಆಧರಿಸಿ ವಾರ್ಡ್‌ ವಿಂಗಡಣೆ: ಬಿಬಿಎಂಪಿ ಸಮರ್ಥನೆ

By Kannadaprabha NewsFirst Published Sep 11, 2022, 5:00 AM IST
Highlights

ಶೇ.10ರಷ್ಟು ಜನಸಂಖ್ಯೆ ಏರಿಳಿತ ಅನುಪಾತ ಅನುಸರಿಸಿ ವಿಂಗಡಣೆ, ರಾಜಕೀಯ ದುರುದ್ದೇಶವಿಲ್ಲ: ಪ್ರಭುಲಿಂಗ

ಬೆಂಗಳೂರು(ಸೆ.11):  ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳನ್ನು ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಬೆಳವಣಿಗೆಯ ಆಧಾರದಲ್ಲಿ ಮರು ವಿಂಗಡಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ ಮುಂದೆ ಸಮರ್ಥಿಸಿಕೊಂಡಿದೆ. ವಾರ್ಡ್‌ಗಳ ಮರು ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳು ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. ಈ ವೇಳೆ ಅರ್ಜಿದಾರರ ವಾದ ಆಲಿಸಿದ ಬಳಿಕ ವಾರ್ಡ್‌ಗಳ ಮರುವಿಂಗಡಣೆಗೆ ಅನುಸರಿಸಿದ ಮಾನದಂಡಗಳೇನು? ವಾರ್ಡ್‌ ಮರು ವಿಂಗಡಣೆಗೆ ಪರಿಗಣಿಸಿದ ಸರಾಸರಿ ಜನಸಂಖ್ಯೆಯಲ್ಲಿ ಏಕೆ ವ್ಯತ್ಯಾಸವಿದೆ ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿ, 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್‌ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿಸ್ತೀರ್ಣ, ಕ್ಷೇತ್ರದ ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್‌ ಮರು ವಿಂಗಡಿಸಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್‌ ವಿಂಗಡಣೆಯಲ್ಲಿ ಶೇ.10ರಷ್ಟುಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ. ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

BBMP Elections: ಬಿಬಿಎಂಪಿ ಚುನಾವಣೆಯಲ್ಲಿ ಇ-ವೋಟಿಂಗ್‌ಗೆ ಚಿಂತನೆ

ಅಲ್ಲದೆ, ಮರು ವಿಂಗಡಣೆಯಲ್ಲಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಅರ್ಜಿದಾರ ಆರೋಪವನ್ನೂ ತಳ್ಳಿ ಹಾಕಿದ ಅಡ್ವೋಕೇಟ್‌ ಜನರಲ್‌, ಇಲ್ಲಿ ಪಕ್ಷ ಅಥವಾ ರಾಜಕೀಯ ಎಂಬುದು ಅಪ್ರಸ್ತುತ. ಪ್ರತಿಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ, ಶಿವಾಜಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂಬ ಅರ್ಜಿದಾರರ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ, ಬ್ಯಾಟರಾಯನಪುರ, ಬಿಟಿಎಂ ಲೇಔಟ್‌, ಸರ್ವಜ್ಞ ನಗರ, ದಾಸರಹಳ್ಳಿ ಕ್ಷೇತ್ರಗಳನ್ನು ಪ್ರತಿಪಕ್ಷದ ಸದಸ್ಯರೇ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದು ಮರು ವಿಂಗಡಣೆಯಲ್ಲಿ ತಾರತಮ್ಯ ನೀತಿ ಅನುಸರಿಸಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
‘ಆಕ್ಷೇಪಗಳಿದ್ದರೆ ಮುಂದಿನ ಬಾರಿ ಸರಿಪಡಿಸಬಹುದು’

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ಈಗ ನಿಗದಿಪಡಿಸಲಾಗಿರುವ ಮರುವಿಂಗಡಣೆಯ ಅನುಸಾರವೇ ಚುನಾವಣೆ ನಡೆಸಬೇಕು. ಏನಾದರೂ ಆಕ್ಷೇಪಣೆ ಅಥವಾ ಲೋಪದೋಷವಿದ್ದರೆ ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಹಾಗಾಗಿ, ಈ ವಿಚಾರದಲ್ಲಿ ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ತಕರಾರು ತೆಗೆಯುವುದು ಸಮಂಜಸವಲ್ಲ. ಚುನಾಯಿತ ಪ್ರತಿನಿಧಿಗಳಲ್ಲದೆ ಪಾಲಿಕೆಯನ್ನು ಆಡಳಿತಾಧಿಕಾರಿಯ ಕೈಯಲ್ಲಿ ನಡೆಸಿಕೊಂಡು ಹೋಗುವುದು ಸೂಕ್ತವಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.
 

click me!