ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಅವಾಂತರ: ಸಂಕಷ್ಟದಲ್ಲಿ ಅನ್ನದಾತ..!

By Girish GoudarFirst Published Sep 10, 2022, 11:16 PM IST
Highlights

ಕಳೆದ ಹದಿನೈದು‌ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 252 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಸೆ.10): ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರ ಬದುಕು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಭಾರೀ ಮಳೆಯಿಂದ ಜಿಲ್ಲೆಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ‌ ಎಂಬಂತಾಗಿದೆ. ಕಳೆದ ಹದಿನೈದು‌ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 252 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 

ಜಲಾವೃತ್ತ ಗೊಂಡಿರುವ ಮಾವಿನ ತೋಟ, ಹೊಲ, ಗದ್ದೆಗಳಲ್ಲಿ ಕೊಳೆಯುತ್ತಿರುವ ತರಕಾರಿಗಳು, ನಿರಂತರವಾಗಿ‌ ಸುರಿಯುತ್ತಿರುವ ಮಳೆಯಿಂದ‌ ಕುಸಿದು ಬಿದ್ದಿರುವ ಶಾಲಾ ಕೊಠಡಿಗಳು, ರಸ್ತೆಯ ಮೇಲೇ ಹೊಳೆಯಂತೆ ಹರಿಯುತ್ತಿರುವ ನೀರು ಈ ರೀತಿಯ ದೃಶ್ಯಗಳು ಈಗ ಬಯಲುಸೀಮೆ ಕೋಲಾರದಲ್ಲಿ ಸಾಮಾನ್ಯವಾಗಿದೆ.

UDAN: ಹಾಸನದ ಜೊತೆ ರಾಯಚೂರು, ಕೋಲಾರಕ್ಕೂ ಉಡಾನ್‌ ವಿಮಾನ

ಹೌದು ಕೋಲಾರದಲ್ಲಿ ಕಳೆದ ಹದಿನೈದು ದಿನಗಳಿಂದ ಸುರಿಯುತ್ತರುವ ಮಳೆಯ ಆರ್ಭಟಕ್ಕೆ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಸುರಿಯುತ್ತಿರುವ ನಿರಂತರ ಮಳೆಗೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ‌ಯ ಬೆಳೆಗಳು ನಾಶವಾಗಿದೆ.ಮಳೆಯಿಂದಾಗಿ ಗುಲಾಬಿ, ಸೇವಂತಿಗೆ, ಚೆಂಡು ಹೂವುಗಳ ತೋಟಗಳು‌ ಸಂಪೂರ್ಣ ಜಲಾವೃತಗೊಂಡಿವೆ,ನೀರಿನ ಪ್ರಮಾಣ‌ ಹೆಚ್ಚಾಗಿರುವ ಕಾರಣ ಹೂವಿನ ತೋಟಗಳು ಕೊಳೆಯುವ ಸ್ಥಿತಿಗೆ ಬಂದಿವೆ.ಹಬ್ಬಗಳಲ್ಲಿ ಒಂದಿಷ್ಟು ಹಣ ನೋಡಬಹುದು ಎಂದುಕೊಂಡಿದ್ದ ರೈತರಿಗೆ ನಿರಾಸೆ ಆಗಿದೆ.ಇನ್ನು ತರಕಾರಿಯಂತೂ ಕೇಳುವವರು ಇಲ್ಲದೆ ತೋಟದಲ್ಲಿ ಬೀಡುವಂತಾಗಿದೆ. 

ಹೂವು, ಕೋಸು, ಬೀಟ್ ರೂಟ್, ಟೊಮ್ಯಾಟೊ ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಂತಹ ಬೆಳೆ ನೀರು‌ ಪಾಲಾಗಿ ರೈತ‌ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ನೀರು ಪಾಲಾಗಿದ್ದು, ಸರ್ಕಾರ ಮುಂದೆ ಬಂದು ರೈತನ ನೆರವಿಗೆ ದಾವಿಸದಿದ್ದರೆ ರೈತನ ಬದುಕು ಮೂರು ಬಟ್ಟೆಯಾಗಿ ಬೀದಿಗೆ‌ ಬೀಳುವುದರಲ್ಲಿ‌ ಯಾವುದೇ ಅನುಮಾನವಿಲ್ಲ‌ ಅಂತಾರೆ ರೈತರು.

ಇನ್ನು ಕೋಲಾರ ಜಿಲ್ಲೆಯಲ್ಲಿ ಈಗಾಗಲೆ ಸುರಿಯುತ್ತಿರುವ ಮಳೆಯ ಪರಿಣಾಮ 15 ಮನೆ ಕುಸಿತ,252 ಹೆಕ್ಟೇರ್ ನಲ್ಲಿ ಬೆಳೆ ನಷ್ಟ ವಾಗಿದೆ. ಟೊಮೆಟೊ, ರಾಗಿ,ಗುಲಾಬಿ ಸೇರಿದಂತೆ ವಾಣಿಜ್ಯ ಬೆಳೆಗಳು 160 ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಕೃಷಿ ಪ್ರದೇಶದಲ್ಲಿ 55 ಹೇಕ್ಟರ್ ಪ್ರದೇಶದಲ್ಲಿ ರಾಗಿ, ಭತ್ತ ಮತ್ತಿತರರ ಬೆಳೆ ಕೊಚ್ಚಿಕೊಂಡು ಹೋಗಿದೆ. ಜೊತೆಗೆ ಜಿಲ್ಲೆಯಲ್ಲಿ ಸುಮಾರು 50 ಕ್ಕೂ‌ ಶಾಲೆಗಳು ಶಿಥಿಲಗೊಂಡು ಬೀಳುವ ಹಂತಕ್ಕೆ‌ ಬಂದಿದೆ.‌ಈಗಾಗಲೇ‌ 5 ಶಾಲೆಗಳ‌ ಗೋಡೆಗಳು‌ ಬಿದ್ದು‌ ಹೋಗಿವೆ. ಅದೃಷ್ಟವಶಾತ್ ‌ಯಾವುದೇ‌ ಪ್ರಾಣಪಾಯವಾಗಿಲ್ಲ,

ಭರವಸೆ ಈಡೇರಿಸದೇ ಬಿಜೆಪಿ ಜನಾಕ್ರೋಶಕ್ಕೆ ತುತ್ತಾಗಿದೆ: ಉಗ್ರಪ್ಪ ಟೀಕೆ

ಇನ್ನು ಕಳೆದ ಎರಡು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಜೊತೆಗೆ ಕೆ.ಸಿ‌ವ್ಯಾಲಿ ಹರಿದು ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಕೆರೆಕುಂಟೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಕಳೆದ ಹದಿನೈದು‌ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಈ ಭಾರಿ ಅತಿವೃಷ್ಟಿ ಆತಂಕ ಎದುರಾಗಿದೆ. ಬೆಳೆ ಕಳೆದುಕೊಂಡ ತೋಟಗಳಿಗೆ‌ ಕಂದಾಯ ಅಧಿಕಾರಿಗಳು ಬೇಟಿ‌ ನೀಡಿ  ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು, ಸರ್ಕಾರ ಎನ್‌ ಡಿ ಆರ್ ಎಫ್ ಡಿಯಲ್ಲಿ ಪರಿಹಾರ ನೀಡಲಿದೆ ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಿನಲ್ಲಿ ದಶಕಗಳಿಂದ ಬರಕ್ಕೆ ಕಂಗೆಟ್ಟಿದ ಕೊಲಾರ ಜಿಲ್ಲೆಯ ರೈತರು ಈಗ ಮಳೆರಾಯನ ಮುನಿಸಿಗೆ ಮಂಕಾಗುವಂತಾಗಿದೆ. ಈಗಾಗಲೆ ಮಳೆ ಜಿಲ್ಲೆಯಾದ್ಯಂತ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ಇನ್ನಷ್ಟು ಹಾನಿಯಾಗುವ ಸಂಭವವಿರುವುದರಿಂದ ಸರ್ಕಾರ ಎಚ್ಚೆತ್ತುಕೊಂಡು ಮುನ್ನಚ್ಚರಿಕೆ ಕ್ರಮ ಕೈಗೊಂಡರೆ ಉತ್ತಮ.
 

click me!