ಚಾಲಕನ ಶವವನ್ನು ಮನೆಗೆ ಸಾಗಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬಕ್ಕೆ ಸಾಂತ್ವನ ಹೇಳಿದ ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು.
ಚಿಕ್ಕೋಡಿ(ಏ.09): ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ಬಸ್ ಸ್ಟಾರ್ಟ್ ಮಾಡಿ ಚಲಿಸಬೇಕೆನ್ನುವ ಸಂದರ್ಭದಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಯಕ್ಸಂಬಾದಲ್ಲಿ ಗುರುವಾರ ನಡೆದಿದೆ.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಧರೇಪ್ಪ ಶಂಕರ ಮಂಗಸೂಳೆ (56) ಮೃತ ಚಾಲಕ. ಕರ್ತವ್ಯದಲ್ಲಿದ್ದಾಗ ಬೆಳಗಾವಿಯಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮಕ್ಕೆ ಬರಬೇಕಾದ ಬಸ್ಸಿನ ಚಾಲಕನಾಗಿದ್ದ. ಬೆಳಗಾವಿಯಿಂದ ಹೊರಟು ಯಕ್ಸಂಬಾಕ್ಕೆ ಬಂದು ಬಸ್ಸಿನಲ್ಲಿದ್ದ 9 ಸೀಟಗಳಲ್ಲಿ 8 ಸೀಟಗಳನ್ನು ಕೆಳಗೆ ಇಳಿಸಿ ಇನ್ನೇನು ಬಸ್ ಸ್ಟಾರ್ಟ್ ಮಾಡಿ ಹೋಗಬೇಕು ಎನ್ನುವಷ್ಟರಲ್ಲಿ ಸ್ಟೇರಿಂಗ್ ಮೇಲೆಯೇ ಹೃದಯಾಘಾತವಾಗಿದೆ.
ತಮಿಳುನಾಡು: ಹೃದಯಾಘಾತದಿಂದ ಬೀದರ್ ಜಿಲ್ಲೆಯ ಯೋಧ ಸಾವು
ಇದನ್ನರಿಯದ ನಿರ್ವಾಹಕ ಬಸ್ ಬಿಡುವಂತೆ ಸುಮಾರು ಮೂರ್ನಾಲ್ಕು ಸಲ ಸಿಟಿ ಹಾಕಿದರೂ ಚಾಲಕ ಮಂಗಸೂಳೆ ಬಸ್ ಬಿಡದೇ ಇದ್ದದನ್ನು ಅವನ ಹತ್ತಿರ ಹೋಗಿ ನೋಡಿದಾಗ ಸ್ಥಳದಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಆಗ ನಿರ್ವಾಹಕ ಚಕಿತಗೊಂಡು ಅಲ್ಲಿರುವ ಸಾರ್ವಜನಿಕರ ಗಮನಕ್ಕೆ ತಂದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿಯೇ ಜೀವ ಹಾರಿಹೋಗಿತ್ತು.
ಮೃತ ಚಾಲಕನಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ. ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಚಾಲಕನ ಶವವನ್ನು ಮನೆಗೆ ಸಾಗಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬಕ್ಕೆ ಸಾಂತ್ವನ ಹೇಳಿದರು.