ಸ್ಪರ್ಧಾಕಾಂಕ್ಷಿಗಳು ಹೆಚ್ಚಿರುವ ರಾಜಕೀಯ ಪಕ್ಷದಲ್ಲಿ ಟಿಕೆಟ್ ಘೋಷಣೆ ವಿಳಂಬ ಸಹಜ: ಕೋಟ

By Gowthami K  |  First Published Apr 9, 2023, 7:20 PM IST

ಬಿಜೆಪಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಅವರವರ ಮುಖಂಡರ ನೇರಕ್ಕೆ ಅಭ್ಯರ್ಥಿ ಆಯ್ಕೆ ಮಾಡುತ್ತಿವೆ ಎಂದು  ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.


ಉಡುಪಿ (ಏ.9): ಬಿಜೆಪಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಅವರವರ ಮುಖಂಡರ ನೇರಕ್ಕೆ ಅಭ್ಯರ್ಥಿ ಆಯ್ಕೆ ಮಾಡುತ್ತಿವೆ. ಆದರೆ ಬಿಜೆಪಿ ಆಯ ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯ ಕೇಳಿದೆ. ಅಭ್ಯರ್ಥಿ ಯಾರು ಎಂದು ಕೇಂದ್ರ ಮತ್ತು ರಾಜ್ಯ ಮುಖಂಡತ್ವಕ್ಕೆ ಬಿಡುತ್ತೇವೆ. ಆದರೆ ಬೂತ್ ಮಟ್ಟದ ಕಾರ್ಯಕರ್ತನನ್ನು ಕರೆದು ನಿನ್ನ ಭಾವನೆ ಏನು ಎಂದು ಬಿಜೆಪಿ ಕೇಳಿರುವುದು ಕಾರ್ಯಕರ್ತರಿಗೆ ಸಂತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಅವರು ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. 

ಕರಾವಳಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಆಯ್ಕೆಯೂ, ಕಾರ್ಯಕರ್ತರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಅಧ್ಯಕ್ಷ ನಡ್ದಾ ಅವರ ತಂಡ ಅಂತಿಮ ತೀರ್ಮಾನವನ್ನು ಇಂದು (ಭಾನುವಾರ) ಅಥವಾ ನಾಳೆ ( ಸೋಮವಾರ ) ಪ್ರಕಟಿಸುತ್ತದೆ ಎಂದರು. 

Tap to resize

Latest Videos

undefined

ಯಾರೇ ಅಭ್ಯರ್ಥಿಯಾದರು ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುತ್ತದೆ. ಉತ್ಕೃಷ್ಟ ಮಟ್ಟದ ಅಭ್ಯರ್ಥಿಯನ್ನು ನಮ್ಮ ನಾಯಕತ್ವ ಕೊಡುತ್ತದೆ. ಕರಾವಳಿಯಲ್ಲಿ ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ‌. ಮಾಧ್ಯಮಗಳಲ್ಲಿ ಈ ಬಗ್ಗೆ ನಡೆಯುವ ಚರ್ಚೆ ನೋಡಿದ್ದೇನೆ. ನಮ್ಮಲ್ಲಿ ಯಾವ ಗೊಂದಲವು ಇಲ್ಲ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮತ್ತು ಸಮೀಕ್ಷೆಯನ್ನು ಆಧರಿಸಿ ಗೆಲ್ಲುವ ಅಭ್ಯರ್ಥಿಗೆ ಅವಕಾಶ ಸಿಗಲಿದೆ ಎಂದರು. 

ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಒಳ್ಳೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜಕಾರಣ ಇತಿಹಾಸದಲ್ಲಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಮಾದರಿಯಾಗಿದ್ದಾರೆ. ನಿವೃತ್ತಿಯಾದರೂ ಪಾರ್ಟಿಗೆ ಬೇಕಾದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಸ್ಪರ್ಧಾ ರಾಜಕಾರಣದಿಂದ ಹಿಂದೆ ಸರಿದರೂ, ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿಲ್ಲ ಎಂದಿದ್ದಾರೆ. 

ಸಕ್ರಿಯ ರಾಜಕಾರಣದಲ್ಲಿ ಹಾಲಾಡಿ ಮುಂದುವರಿಯಲಿದ್ದು, ರಾಜ್ಯದ ರಾಜಕಾರಣದಲ್ಲಿ ಇವರ ನಿರ್ಧಾರ ತಲ್ಲಣ ಮೂಡಿಸಿದೆ. ಎಲ್ಲಾ ಪಕ್ಷದವರು ಅವರ ನಡವಳಿಕೆಯನ್ನು ಗೌರವಿಸಿದ್ದಾರೆ. ಹಾಲಾಡಿ ಹಿಂದೆ ಸರಿದ ಹಿನ್ನೆಲೆಯಲ್ಲಿ ಕುಂದಾಪುರವು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು.ಕುಂದಾಪುರ ಕ್ಷೇತ್ರದಲ್ಲಿ ಹೊಸ ಮುಖ ಬರಬೇಕಾಗಿದೆ, ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ಘೋಷಣೆ ವಿಳಂಬ ವಿಚಾರ: ಒಂದೊಂದು ಕ್ಷೇತ್ರದಲ್ಲೂ ಐದಾರು ಆಕಾಂಕ್ಷಿಗಳಿದ್ದು, ನಮಗೆ ಅವಕಾಶ ಕೊಡಿ ಗೆಲ್ಲುತ್ತೇವೆ ಎಂಬ ವಾತಾವರಣ ನಿರ್ಮಿಸಿದ್ದಾರೆ. ಅವಕಾಶ ಕೇಳಿದವರೆಲ್ಲ ನಮ್ಮದೇ ಕಾರ್ಯಕರ್ತರು. ಪಕ್ಷಕ್ಕೋಸ್ಕರ ದುಡಿದವರು, ಖರ್ಚು ಮಾಡಿದವರು ಸಮಯ ಕೊಟ್ಟವರು ಇದ್ದಾರೆ. ಹೀಗಾಗಿ ಸ್ಪರ್ಧಾಕಾಂಕ್ಷಿಗಳು ಹೆಚ್ಚಿರುವ ರಾಜಕೀಯ ಪಕ್ಷದಲ್ಲಿ ಟಿಕೆಟ್ ಘೋಷಣೆ ವಿಳಂಬವಾಗುವುದು ಸಹಜ ಎಂದರು. 

ನಂದಿನಿ -ಅಮುಲ್ ವಿವಾದ:
ಗುಜರಾತ್ ನಿಂದ ಅಮುಲ್ ಬಂದರೆ ನಂದಿನಿ ಬ್ರಾಂಡ್ ಗೆ ತೊಂದರೆ ಆಗುತ್ತದೆ, ನಮ್ಮ ರೈತರಿಗೆ ಇದರಿಂದ ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ಮಾಡಿರುವ ಆರೋಪ ಕೇಳಿದ್ದೇನೆ. ಭಾರತ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಮಾರಾಟವಾಗುವ ಬ್ರಾಂಡ್ ನಂದಿನಿ. ನಮ್ಮ ರಾಜ್ಯದಲ್ಲಿ ನಂದಿನಿ ಅಗಾಧವಾದ ವ್ಯವಹಾರ ನಡೆಸುತ್ತಿದ್ದು, ದೇಶದ ಎಂಟು ರಾಜ್ಯದ ಹಾಲುಗಳು ನಮ್ಮ ರಾಜ್ಯದಲ್ಲಿ ಮಾರಾಟವಾಗುತ್ತಿದೆ. 

ಗುಜರಾತ್ ನಿಂದ ಅಮುಲ್ ಬರುವ ಬಗ್ಗೆ ಚರ್ಚೆ ಇದೆ. ರಾಜ್ಯದಲ್ಲಿ ನಮ್ಮ ಕೆಎಂಎಫ್ ನಂದಿನಿಗೆ ಸರಿಗಟ್ಟುವ ಇನ್ನೊಂದು ಮಾರುಕಟ್ಟೆ ಇಲ್ಲ. 74 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದು, ಒಂದು ಕೋಟಿ ಲೀಟರ್ ಗೆ ನಮ್ಮಲ್ಲಿ ಬೇಡಿಕೆ ಇದೆ. ಅಮುಲ್ ಸೇರಿದಂತೆ ಯಾವುದೇ ಬ್ರ್ಯಾಂಡ್ ಬಂದರೂ ನಮ್ಮ ರೈತರಿಗೆ ಯಾವುದೇ ತೊಂದರೆ ಆಗಲ್ಲ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೇರೆ ರಾಜ್ಯದ ಉತ್ಪನ್ನ ಬರಬಹುದು. ಯಾವುದೇ ಹಾಲು ಬಂದರು ನಮ್ಮ ಜೊತೆ ಸ್ಪರ್ಧೆ ಮಾಡಬಹುದೇ ಹೊರತು ನಂದಿನಿ ಬ್ರಾಂಡ್ ಮೇಲೆ ಯಾವುದೇ ಪರಿಣಾಮ ಆಗಲ್ಲ. ರಾಜಕೀಯ ಕಾರಣಗಳಿಗೆ ಜನರ ದಿಕ್ಕು ತಪ್ಪಿಸಬೇಡಿ ಎಂದರು. 

ಅಪಪ್ರಚಾರಕ್ಕಾಗಿ ವಿಪಕ್ಷಗಳು ಈ ರೀತಿ ಮಾಡುತ್ತಿವೆ. ಈ ವಿಚಾರವನ್ನು ರೈತರು ಮತ್ತು ಜನತೆ ಅರ್ಥಮಾಡಿಕೊಳ್ಳಬೇಕು, ಗುಜರಾತ್ ಅಂದ ಕೂಡಲೇ ಕೆಲವರಿಗೆ ಆತಂಕ ಶುರುವಾಗುತ್ತದೆ. ಗುಜರಾತ್ ಮಾದರಿ ಎಂದರೆ ಸಂಕಟಪಡುತ್ತಾರೆ. ಇಡೀ ದೇಶದಲ್ಲಿ ಗುಜರಾತ್ ಒಂದು ಮಾದರಿ ರಾಜ್ಯವಾಗಿದೆ, ಗುಜರಾತ್ ನಮ್ಮದೇ ದೇಶದ ಒಂದು ಭಾಗ ನಮಗೆ ಹೆಮ್ಮೆ ಇದೆ, ಅಮುಲ್ ಸೇರಿದಂತೆ ಯಾವುದೇ ಬ್ರಾಂಡುಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಮರಾಟವಾದರೆ ತಡೆಗಟ್ಟಲು ಸಾಧ್ಯವಿಲ್ಲ. ಅದನ್ನು ನಾವು ಸ್ವಾಗತ ಮಾಡುತ್ತೇವೆ. ಕಾಶ್ಮೀರದವರೆಗೆ ಮಾತ್ರವಲ್ಲ ವಿದೇಶದಲ್ಲೂ ನಂದಿನಿ ಉತ್ತಮ ಮಾರುಕಟ್ಟೆ ಇದೆ ಎಂದವರು ಹೇಳಿದರು. 

ಒಳ ಮೀಸಲಾತಿ ವಿವಾದ ವಿಚಾರ:
ಒಳ ಮೀಸಲಾತಿ ವಿಚಾರದಲ್ಲಿ ಯಾವ ಆತಂಕದ ಅವಶ್ಯಕತೆ ಇಲ್ಲ, ನಾವು ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿಕೆಶಿ ಸಿದ್ದರಾಮಯ್ಯ ಹೇಳುತ್ತಾರೆ. ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿಯ ಹೆಚ್ಚಳವನ್ನು ನೀವೇನಾದರೂ ರದ್ದುಪಡಿಸುತ್ತೀರಾ? ಪರಿಶಿಷ್ಟ ಜಾತಿಗೆ 15% ಶೇಕಡ ಇದ್ದದ್ದನ್ನ 17% ಶೇಕಡಕ್ಕೆ ಹೆಚ್ಚಿಸಿದ್ದೇವೆ. ಮೂರು ಶೇಕಡ ಇದ್ದ ಎಸ್ ಟಿ ಮೀಸಲಾತಿಯನ್ನು 7% ಶೇಕಡ ಏರಿಸಿದ್ದೇವೆ.ಅದನ್ನು ರದ್ದು ಮಾಡುತ್ತೀರಾ? 

ಸಗಣಿ ಬಾಚೋ ತಾಯಂದಿರಿಗೆ 5 ರೂ ಸಬ್ಸಿಡಿ ನೀಡಿದ್ದೇವೆ : ಸಿಟಿ ರವಿ

ಅಲ್ಪಸಂಖ್ಯಾತರ ಮೀಸಲಾತಿಯನ್ನು ಮರು ಹಂಚಿಕೆ ಮಾಡಿ ಆರ್ಥಿಕವಾಗಿ ಬಡವರಿಗೆ ನೀಡಿದ್ದೇವೆ. ಅತ್ಯಂತ ವೈಜ್ಞಾನಿಕವಾಗಿ ಸರ್ವರಿಗೆ ಸಮ ಬಾಳು ನೀಡುವ ಮೀಸಲಾತಿ ಜಾರಿಗೆ ತಂದಿದ್ದೇವೆ. ಜೇನುಗೂಡಿಗೆ ಕೈ ಹಾಕಿದ್ದೀರಿ ಅನ್ನೋ ಟೀಕೆ ಇದೆ. ಜೇನುಗೂಡಿಗೆ ಕೈ ಹಾಕಿದ್ದು ಹೇಗೆ ಸತ್ಯವೋ ಅದರಲ್ಲಿರುವ ಜೇನನ್ನು ಕಟ್ಟಕಡೆಯ ಬಡವನಿಗೆ ಬದುಕು ಕಟ್ಟಲು ಬಳಸಿದ್ದೇವೆ. ಸದಾಶಿವ ಆಯೋಗದ ವರದಿಯನ್ನು ಗಮನದಲ್ಲಿ ಇಟ್ಟುಕೊಂಡು ಒಳ ಮೀಸಲಾತಿಯನ್ನು ಮಾಡಿದ್ದೇವೆ.

ಕರ್ನಾಟಕದಲ್ಲಿ ಗುಜರಾತ್ ಮಾಡೆಲ್‌ ಗೆ ವಿರೋಧ, ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ ಸೆಡ್ಡು!

ಇಲ್ಲಿಯವರೆಗೆ ವಂಚನೆಗೆ ಒಳಗಾದ ಜನರಿಗೆ ನ್ಯಾಯ ಕೊಡುತ್ತೇವೆ. ವೈದ್ಯನ ಮಗ ವೈದ್ಯನಾಗುವುದು ಇಂಜಿನಿಯರ್ ಮಗ ಇಂಜಿನಿಯರ್ ಆಗುವುದು ಸಹಜ. ಆದರೆ ಚರಂಡಿ ತೊಳೆಯುವವನ ಮಗ ಡಾಕ್ಟರ್, ಇಂಜಿನಿಯರ್ ಆಗೋದು ಯಾವಾಗ? ಎಂದು ಪ್ರಶ್ನಿಸಿದರು.

click me!