ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶಾಶ್ವತ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ (ಜು.28): ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶಾಶ್ವತ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹೊಳೆಜೋಳದಗುಡ್ಡೆ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಲೂಕಿನ ಜೀವನದಿಗಳಾದ ವರದಾ ಮತ್ತು ದಂಡಾವತಿ ನದಿಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಆದರೆ, ಬೇಸಿಗೆ ಸಂದರ್ಭದಲ್ಲಿ ಬತ್ತಿ ಬರಡಾಗುತ್ತವೆ. ಈ ಸಂದರ್ಭದಲ್ಲಿ ಜನ, ಜಾನುವಾರು ಮತ್ತು ಕೃಷಿಗೆ ನೀರಿನ ಸಮಸ್ಯೆ ಉದ್ಭವಿಸುವುದರಿಂದ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಯೋಜನೆಗೆ ಚಾಲನೆ ತರಲಾಗುವುದು ಎಂದರು. ವರದಾ ನದಿ ಪ್ರವಾಹದಿಂದ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಬಾಡದಬೈಲು, ಹೊಳೆಜೋಳದಗುಡ್ಡೆ, ತಟ್ಟಿಕೆರೆ, ಕಡಸೂರು ಮೊದಲಾದ ಗ್ರಾಮಗಳ ಜಮೀನುಗಳು ಮುಳುಗಡೆಯಾಗಿ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗುತ್ತದೆ. ಇದು ಪ್ರತಿ ವರ್ಷದ ಸಮಸ್ಯೆಯಾಗಿದೆ. ನೆರೆ ಬಂದು ನಾಲ್ಕೆ ೖದು ದಿನಗಳ ನಂತರ ನದಿ ನೀರು ಸಹಜ ಸ್ಥಿತಿಗೆ ಬರುತ್ತದೆ. ಬೆಳೆಹಾನಿ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
undefined
ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ: ಸಚಿವ ಶಿವರಾಜ ತಂಗಡಗಿ
ಜಿಲ್ಲೆ ಮತ್ತು ತಾಲೂಕಿನಲ್ಲಿ ಅಧಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವರ್ಷ ಬೆಳೆ ವಿಮೆ ಪರಿಹಾರದ ಸಮೀಕ್ಷೆಯನ್ನು ಮಳೆ ಮತ್ತು ಜಮೀನುಗಳು ಹಸಿರಿದ್ದ ಸಂದರ್ಭದಲ್ಲಿ ನಡೆಸಲಾಗುತ್ತದೆ. ಇದು ಅವೈಜ್ಞಾನಿವಾಗಿದ್ದು, ಬೆಳೆ ಹಾನಿಯಾಗಿದ್ದ ಸಂದರ್ಭದಲ್ಲಿ ಸರ್ವೆ ನಡೆಸಿ, ವೈಜ್ಞಾನಿಕವಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗ್ರಾಪಂ ಮಾಜಿ ಅಧ್ಯಕ್ಷ ಮಾರ‍್ಯಪ್ಪ ಬೆನ್ನೂರು, ಗ್ರಾಪಂ ಸದಸ್ಯರಾದ ಎಂ.ಪಿ. ರತ್ನಾಕರ, ರೇಣುಕಾಪ್ರಸಾದ್, ತಾ.ಪಂ. ಮಾಜಿ ಸದಸ್ಯ ಸುನೀಲ್ ಗೌಡ, ಮುಖಂಡರಾದ ಕೆ.ವಿ.ಗೌಡ, ಕಲ್ಲಂಬಿ ಹಿರಿಯಣ್ಣ, ಎಂ.ಡಿ.ಶೇಖರ್, ತನ್ವೀರ್ ಅಹ್ಮದ್ ಉಳವಿ ಮೊದಲಾದವರು ಹಾಜರಿದ್ದರು.
ಹಣ ಅಪವ್ಯಯಕ್ಕೆ ಅವಕಾಶ ನೀಡಲ್ಲ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ತರಾತುರಿಯಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ಹಣವನ್ನು ಅಪವ್ಯಯಗೊಳಿಸಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲೂಕಿನಲ್ಲಿ ಆಗಿರುವ ಮಳೆಹಾನಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪಿಎಂಜಿಎಸ್‌ವೈ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಗಳನ್ನು ಐದು ವರ್ಷ ಸಂಬಂಧಪಟ್ಟಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು.
ಒಂದುವೇಳೆ ಈ ರಸ್ತೆಗಳು ಕಳಪೆಯಾಗಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗುಣಮಟ್ಟದ ರಸ್ತೆ ನಿರ್ಮಿಸಲುಯ ಸರ್ಕಾರ ಕೋಟ್ಯಂತರ ರು. ವಿನಿಯೋಗಿಸುತ್ತದೆ. ಮನಸ್ಸಿಗೆ ಬಂದಂತೆ ಅಧಿಕಾರಿಗಳು ಕೆಲಸ ಮಾಡಬೇಡಿ. ಜಿಲ್ಲಾ ಪಂಚಾಯಿತಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಮೇಲೆ ಸಾಕಷ್ಟುದೂರುಗಳಿವೆ. ಕಳಪೆ ಗುಣಮಟ್ಟದ ರಸ್ತೆಗಳನ್ನು ಮೊದಲು ಸರಿಪಡಿಸಿ. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಉಳಿದ ಹಣ ಬಿಡುಗಡೆ ಮಾಡಬೇಡಿ ಎಂದು ಸೂಚನೆ ನೀಡಿದರು.
ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಜಗದೀಶ್ ಶೆಟ್ಟರ್
ಇದೇ ವಿಚಾರವಾಗಿ ಸಚಿವರ ಗಮನ ಸೆಳೆದ ಶಾಸಕ ಗೋಪಾಲಕೃಷ್ಣ ಬೇಳೂರು, ಪಿಎಂಜಿಎಸ್‌ವೈಆರ್ ಅಡಿ ಮೂರು ತಿಂಗಳ ಹಿಂದೆ 12 ಕೋಟಿ ವೆಚ್ಚದಲ್ಲಿಎರಡು ರಸ್ತೆ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯನ್ನೇ ಕಾಣದ ಆ ರಸ್ತೆಗಳು ಈಗಾಗಲೇ ರಸ್ತೆ ಕಿತ್ತುಹೋಗಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಅಡಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗಕ್ಕೆ ಕಳೆದ ವರ್ಷ ಕಲ್ಲಂಗಡಿ ಹಣ್ಣಿಗೆ ಹೊಡೆಯುವ ಔಷಧಿಯನ್ನು ನೀಡಿದ್ದರು. ಇದರಿಂದ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಈ ಬಾರಿ ಹೊಸ ಔಷಧಿಯನ್ನು ಕೊಡಬೇಕು. ಈ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆಯಲು ತಿಳಿಸಿದರು. ಸಭೆಯಲ್ಲಿ ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.