
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.30): ಭಾರತೀಯ ವಾಯುನೆಲೆ, ಜಕ್ಕೂರು ಏರೋಸ್ಪೇಸ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆದ್ದಾರಿ, ಜಿಕೆವಿಕೆ ಸೇರಿದಂತೆ ವಿವಿಧ ಸರ್ಕಾರಿ ಸೌಮ್ಯದ ಸಂಸ್ಥೆಗಳಿರುವ ಯಲಹಂಕ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಗುಂಡಿ ಭರ್ತಿ ಕಾರ್ಯ ಭರದಿಂದ ಸಾಗಿದ್ದರೂ, ವಾರ್ಡ್ ಮಟ್ಟದ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಜೀವಂತವಾಗಿದೆ.
ಯಲಹಂಕ ವಲಯವು ಬಿಬಿಎಂಪಿಯ ಎಂಟು ವಲಯಗಳ ಪೈಕಿ ಎರಡನೇ ಅತ್ಯಂತ ಚಿಕ್ಕ ವಲಯವಾಗಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿದ್ದು, ವಾರ್ಡ್ ಮರುವಿಂಗಡಣೆಯ ಬಳಿಕ ವಾರ್ಡ್ ಸಂಖ್ಯೆ 11ರಿಂದ 15ಕ್ಕೆ ಏರಿಕೆಯಾಗಿದೆ.
ತುಮಕೂರು ರಸ್ತೆ, ಕೆಆರ್ ಪುರ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸೇರಿದಂತೆ ಒಟ್ಟು 1,624 ಕಿ.ಮೀ. ಉದ್ದದ ರಸ್ತೆ ಜಾಲವನ್ನು ಯಲಹಂಕ ವಲಯ ಹೊಂದಿದೆ. ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಯಲಹಂಕ ವಲಯದ ರಸ್ತೆಗಳಲ್ಲಿಯೂ ಸಾವಿರಾರು ಸಂಖ್ಯೆಯ ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. ಆದರೆ, ಮಳೆ ಪ್ರಮಾಣ ಇಳಿಕೆ ಆಗುತ್ತಿದಂತೆ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಭರ್ತಿ ಮಾಡುವ ಕಾರ್ಯ ಈ ವಲಯದಲ್ಲಿ ಆರಂಭಿಸಲಾಗಿದೆ.
ಬೆಂಗ್ಳೂರಲ್ಲಿವೆ 25,000ಕ್ಕೂ ಅಧಿಕ ರಸ್ತೆ ಗುಂಡಿಗಳು..!
ಮೊದಲ ಹಂತದಲ್ಲಿ ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆದರೆ, ವಾರ್ಡ್ ರಸ್ತೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುಂಡಿ ಮುಚ್ಚುವ ಕೆಲಸ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
5 ವಾರ್ಡ್ ರಸ್ತೆಯಲ್ಲಿ 100ಕ್ಕಿಂತ ಹೆಚ್ಚು ಗುಂಡಿ
ಯಲಹಂಕ ವಲಯದಲ್ಲಿ ಒಟ್ಟು 15 ವಾರ್ಡ್‌ಗಳಿದ್ದು, ಈ ಪೈಕಿ ವಿದ್ಯಾರಣ್ಯಪುರ, ತಣಿಸಂದ್ರ, ಜಕ್ಕೂರು, ಕುವೆಂಪು ನಗರ ಹಾಗೂ ಕೊಟ್ಟಿಗೆಪಾಳ್ಯ ವಾರ್ಡ್‌ನ ರಸ್ತೆಗಳಲ್ಲಿ ಮಾತ್ರ ನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಗುಂಡಿಗಳು ಪತ್ತೆಯಾಗಿವೆ. ಈಗಾಗಲೇ ಬಹುತೇಕ ರಸ್ತೆ ಗುಂಡಿ ಮುಚ್ಚಿರುವುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಇನ್ನೂ ಕೆಲವು ವಾರ್ಡ್ ರಸ್ತೆಗಳಲ್ಲಿ ಗುಂಡಿಗಳು ಕಾಣಸಿಗುತ್ತವೆ.
ಗುಂಡಿಗೆ ಜಲ್ಲಿಕಲ್ಲು
ಎಂಎಸ್‌ಪಾಳ್ಯದ ಪ್ರಮುಖ ರಸ್ತೆಗಳು, ವಿದ್ಯಾರಣ್ಯಪುರ ಮುಖ್ಯ ರಸ್ತೆ, ದೊಡ್ಡಬೊಮ್ಮಸಂದ್ರದ ರಸ್ತೆಗಳು, ಭದ್ರಪ್ಪ ಲೇಔಟ್, ಕೊಟ್ಟಿಪಾಳ್ಯ, ಕೆಂಪಾಪುರ ರಸ್ತೆ, ಜಿಕೆವಿಕೆ ಆವರಣದ ರಸ್ತೆಗಳು, ಸಿಂಗಾಪುರ ಮುಖ್ಯ ರಸ್ತೆ, ಶ್ರೀರಾಮಪುರ ಮುಖ್ಯ ರಸ್ತೆ, ಜಕ್ಕೂರು ಫ್ಲೈಯಿಂಗ್ ರಸ್ತೆ, ಟಾಟಾ ನಗರ ಮುಖ್ಯ ರಸ್ತೆ, ನ್ಯೂ ಕೃಷ್ಣ ಟೆಂಪಲ್ ರಸ್ತೆ, ಕೋಗಿಲು ಮುಖ್ಯ ರಸ್ತೆ, ಬಾಗಲೂರು ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ (ಹೆಬ್ಬಾಳ) ಸವೀರ್‍ಸ್ ರಸ್ತೆ ಸೇರಿದಂತೆ ಈಗಾಗಲೇ ಬಹುತೇಕ ಕಡೆ ರಸ್ತೆ ಗುಂಡಿ ಮುಚ್ಚಲಾಗಿದೆ.
ಇನ್ನು ಕೆಲವು ಕಡೆ ರಸ್ತೆ ಗುಂಡಿಗೆ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆ, ಜಲಮಂಡಳಿಯ ಕೊಳವೆ ಅಳವಡಿಕೆಗೆ ಕತ್ತರಿಸಲಾದ ರಸ್ತೆಗಳಿಗೆ ಕೋಲ್ಡ್ ಬಿಟುಮಿನ್ (ಜಲ್ಲಿಕಲ್ಲು, ಸಿಮೆಂಟ್ ಮಿಶ್ರಣ) ಹಾಕಿ ಮೊದಲ ಹಂತದಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ. ಹಾಟ್ ಬಿಟುಮಿನ್ ಡಾಂಬರ್ ಮಿಶ್ರಣ ಹಾಕುವುದು ಬಾಕಿ ಉಳಿದಿದೆ. ಕೆಲವು ಕಡೆ ಜಲ್ಲಿಕಲ್ಲು ಮೇಲೆ ಎದ್ದಿರುವುದರಿಂದ ಬೈಕ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಇನ್ನೂ 449 ಗುಂಡಿ ಭರ್ತಿ ಕಾರ‍್ಯ ಬಾಕಿ
ಕಳೆದ ಮೇ ತಿಂಗಳಿಂದ ಈವರೆಗೆ ಯಲಹಂಕ ವಲಯದಲ್ಲಿ ಈವರೆಗೆ 1,170 ರಸ್ತೆ ಗುಂಡಿ ಪತ್ತೆ ಮಾಡಲಾಗಿದೆ. ಈ ಪೈಕಿ ಈಗಾಗಲೇ 721 ರಸ್ತೆ ಗುಂಡಿ ಮುಚ್ಚಲಾಗಿದ್ದು, ಇನ್ನೂ 449 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ. ಈ ಪೈಕಿ 96 ಕಿ.ಮೀ ಉದ್ದದ ಮುಖ್ಯ ರಸ್ತೆಗಳಲ್ಲಿ 26 ಗುಂಡಿ ಮಾತ್ರ ಮುಚ್ಚುವುದು ಬಾಕಿ ಇದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಗಣ್ಯರು ಓಡಾಡುವ ರಸ್ತೆಗಳೇ ಅಧೋಗತಿ..!
ಬಹುತೇಕ ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ ರಸ್ತೆ ಗುಂಡಿಗಳನ್ನು ಆಯುಕ್ತರು ನೀಡಿದ ಗಡುವಿನ ಒಳಗಾಗಿ ಪೂರ್ಣಗೊಳಿಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಂತ ಯಲಹಂಕ ವಲಯ ಮುಖ್ಯ ಎಂಜಿನಿಯರ್ ರಂಗನಾಥ ತಿಳಿಸಿದ್ದಾರೆ.
ಕ್ಷೇತ್ರವಾರು ರಸ್ತೆ ಗುಂಡಿ ವಿವರ: ವಿಧಾನಸಭಾ ಕ್ಷೇತ್ರ ಒಟ್ಟು ಗುಂಡಿ ಭರ್ತಿ ಬಾಕಿ
ಯಲಹಂಕ 237 108 129
ಬ್ಯಾಟರಾಯನಪುರ 778 484 294
ಮುಖ್ಯರಸ್ತೆ 155 129 26
ಒಟ್ಟು 1,170 721 449
ಯಲಹಂಕ ವಲಯದ ರಸ್ತೆಯ ವಿವರ
ಒಟ್ಟು ರಸ್ತೆ ಸಂಖ್ಯೆ: 9,055
ಮುಖ್ಯ ರಸ್ತೆ ಉದ್ದ (ಕಿ.ಮೀ): 96
ವಾರ್ಡ್ ರಸ್ತೆ (ಕಿ.ಮೀ): 1,528.38
ರಸ್ತೆಯ ಉದ್ದ (ಕಿ.ಮೀ): 1,624.38
ಯಲಹಂಕ ವಲಯದ ಗುಂಡಿ ಮುಚ್ಚಲು ವೆಚ್ಚದ ವಿವರ (ಕೋಟಿಗಳಲ್ಲಿ): ವರ್ಷ ಗುಂಡಿ ಭರ್ತಿಗೆ ವೆಚ್ಚ
2017-18 2.40
2018-19 1.85
2019-20 3.10
2020-21 0.00
2021-22 2.20
ಒಟ್ಟು 9.55