ಬೆಂಗಳೂರು: 100 ಕನಿಷ್ಠ ದರಕ್ಕೆ ಆ್ಯಪ್‌ ಆಟೋ ಬೇಡಿಕೆ..!

By Kannadaprabha News  |  First Published Oct 30, 2022, 6:16 AM IST

ದರ ನಿಗದಿ ಕುರಿತು ಓಲಾ, ಉಬರ್‌ ಜತೆ ಸಾರಿಗೆ ಇಲಾಖೆ ಸಭೆ, ಅಂತಿಮ ದರ ಪಟ್ಟಿ ಸರ್ಕಾರದಿಂದ ನ.7ಕ್ಕೆ ಹೈಕೋರ್ಟ್‌ಗೆ ಸಲ್ಲಿಕೆ


ಬೆಂಗಳೂರು(ಅ.30): ಆ್ಯಪ್‌ ಆಧಾರಿತ ಆಟೋ ರಿಕ್ಷಾಗಳ ದರ ನಿಗದಿಗೆ ಸಂಬಂಧಿಸಿದಂತೆ ಶನಿವಾರ ಓಲಾ, ಉಬರ್‌ ಹಾಗೂ ರಾರ‍ಯಪಿಡೋ ಕಂಪನಿಗಳ ಜತೆ ರಾಜ್ಯ ಸರ್ಕಾರ ಸಭೆ ನಡೆಸಿದೆ. ದರ ಹೆಚ್ಚಳ ಕುರಿತಂತೆ ಕಂಪನಿಗಳ ವಿವಿಧ ಬೇಡಿಕೆಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ವಿಶ್ಲೇಷಣೆ ಮಾಡಿ ಅಂತಿಮ ದರ ಪಟ್ಟಿಯನ್ನು ನ.7ರಂದು ಹೈಕೋರ್ಟ್‌ಗೆ ಸಲ್ಲಿಸಲು ತೀರ್ಮಾನಿಸಿದೆ. ಸಭೆಯಲ್ಲಿ ಆ್ಯಪ್‌ ಆಧಾರಿತ ಕಂಪನಿಯೊಂದು 2 ಕಿ.ಮೀ. ಕನಿಷ್ಠ ದೂರಕ್ಕೆ 100 ರು. ಶುಲ್ಕ ನಿಗದಿ ಮಾಡಬೇಕು. ಆನಂತರ ಪ್ರತಿ ಕಿ.ಮೀ 15 ರು. ಇದ್ದು, ಶೇ.30ರಷ್ಟುದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದೆ. ಜತೆಗೆ ಹೆಚ್ಚುವರಿ, ಕಾಯುವಿಕೆ, ಬುಕಿಂಗ್‌ ರದ್ದು ಶುಲ್ಕ ವಿಧಿಸಲು ಕಂಪನಿಗಳು ಮನವಿ ಮಾಡಿವೆ ಎನ್ನಲಾಗಿದೆ.

ಆ್ಯಪ್‌ ಆಧರಿತ ಆಟೋಗಳ ಅನಧಿಕೃತ ಸೇವೆ, ಹೆಚ್ಚು ದರ ವಸೂಲಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್‌ ಹೈಕೋರ್ಟ್‌ ಮೊರೆ ಹೋಗಿದ್ದವು. ‘ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಆ್ಯಪ್‌ಗಳ ಆಟೋ ರಿಕ್ಷಾ ಸೇವೆಗೆ ಅನುಮತಿ ನೀಡುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಬಹುಮಹಡಿ ಕಟ್ಟಡದ ಸಾರಿಗೆ ಇಲಾಖೆ ಕಚೇರಿಯಲ್ಲಿ ಇಲಾಖೆ ಕಾರ್ಯದರ್ಶಿ ಡಾ. ಎನ್‌.ವಿ. ಪ್ರಸಾದ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಎಲ್ಲಾ ಆ್ಯಪ್‌ ಆಧಾರಿತ ಟ್ಯಾಕ್ಸಿ (ಅಗ್ರಿಗೇಟರ್ಸ್‌) ಕಂಪನಿಗಳು, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಆಟೋರಿಕ್ಷಾ ಯೂನಿಯನ್‌ಗಳು, ಆಟೋರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆಗಳು ಭಾಗಿಯಾಗಿದ್ದವು.

Tap to resize

Latest Videos

ಕೊನೆಗೂ ಉಬರ್‌ ಆಟೋ ದರ ಇಳಿಕೆ; ಓಲಾ ಸಡ್ಡು..!

ಮೀಟರ್‌ ದರದಲ್ಲಿ ಸೇವೆ ಕಷ್ಟ:

ಸದ್ಯ ರಾಜ್ಯ ಸರ್ಕಾರ ಆಟೋರಿಕ್ಷಾಗಳಿಗೆ ನಿಗದಿಪಡಿಸಿರುವ ಕನಿಷ್ಠ ದರ 30 ರು., ಅನಂತರ ಪ್ರತಿ ಕಿ.ಮೀ. 15 ರು. ಮೊತ್ತಕ್ಕೆ ಸೇವೆ ನೀಡಲು ಕಷ್ಟವಾಗುತ್ತದೆ. ಆ್ಯಪ್‌ಗಳ ನಿರ್ವಹಣೆ ಸೇರಿದಂತೆ ಇತರೆ ವೆಚ್ಚ ತಗುಲುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ, ಚಾಲಕರ ಕಾಯುವಿಕೆ ಅವಧಿ ಇರುತ್ತದೆ. ಕೇಂದ್ರ ಸರ್ಕಾರದ ನಿಯಮಗಳಲ್ಲಿ ದರ ಹೆಚ್ಚಳಕ್ಕೆ ಅವಕಾಶಗಳಿವೆ. ಬೇಡಿಕೆ ಹೆಚ್ಚು (ಪೀಕ್‌ ಅವರ್‌) ಇದ್ದಾಗ ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ನೀಡಬೇಕು. ಕಾಯುವಿಕೆ ಶುಲ್ಕಕ್ಕೆ ಅನುಮತಿ ನೀಡಬೇಕು. ಗ್ರಾಹಕ ಬುಕಿಂಗ್‌ ರದ್ದುಗೊಳಿಸಿದಾಗ ದಂಡ ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಕಂಪನಿಗಳು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಿದವು.

ವಿಶ್ಲೇಷಣೆ ನಡೆಸಿ ನ.7ಕ್ಕೆ ಹೈಕೋರ್ಟ್‌ಗೆ ಸಲ್ಲಿಕೆ:

ಸಭೆಯಲ್ಲಿ ಗ್ರಾಹಕರ ವೇದಿಕೆ, ಆ್ಯಪ್‌ ಕಂಪನಿಗಳು ಹಾಗೂ ಆಟೋ ಯೂನಿಯನ್‌ಗಳ ಅಭಿಪ್ರಾಯ ವರದಿ ಸಂಗ್ರಹಿಸಿರುವ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಅಂತಿಮ ದರ ಪಟ್ಟಿಯನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಲಿದ್ದಾರೆ. ನ.7ಕ್ಕೆ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿ ಆ ಬಳಿಕ ಸಾರ್ವಜನಿಕವಾಗಿ ದರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
 

click me!