ಕರಾವಳಿ ಜಿಲ್ಲೆಗಳ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ಮಣಿಪಾಲದಲ್ಲಿ ವೀಕೆಂಡ್ ಮಸ್ತಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ತಡರಾತ್ರಿ ಕಾರ್ಯಾಚರಣೆ ಮೂಲಕ, ಪೋಲಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಉಡುಪಿ (ಆ.13) : ಕರಾವಳಿ ಜಿಲ್ಲೆಗಳ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ಮಣಿಪಾಲದಲ್ಲಿ ವೀಕೆಂಡ್ ಮಸ್ತಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ತಡರಾತ್ರಿ ಕಾರ್ಯಾಚರಣೆ ಮೂಲಕ, ಪೋಲಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ರಜಾ ದಿನಗಳು ಮುಗಿದು ಇದೀಗ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳು ಆರಂಭವಾಗುತ್ತಿವೆ. ಈ ಹಿನ್ನಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಣಿಪಾಲದಲ್ಲಿ ಶಿಕ್ಷಣಾರ್ಥಿಗಳಾಗಿ ಬಂದಿದ್ದಾರೆ. ಶನಿವಾರ, ಭಾನುವಾರ ಬಂತೆಂದರೆ ಮಣಿಪಾಲದ ಬೀದಿಗಳು ಪಬ್ ಗಳು ರಂಗೇರುತ್ತವೆ. ಹಾಗಾಗಿ ಮಣಿಪಾಲ ಪೊಲೀಸರು ಹೆಚ್ಚುವರಿ ಠಾಣೆಗಳಿಂದ ಪೊಲೀಸರನ್ನು ಕರೆಸಿಕೊಂಡು, ಹೈ ಅಲರ್ಟ್ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
undefined
ಇತ್ತೀಚಿನ ದಿನಗಳಲ್ಲಿ ಕರಾವಳಿಯ ವಿದ್ಯಾ ಕೇಂದ್ರಗಳು ಸುಲಭವಾಗಿ ಡ್ರಕ್ಸ್ ದಂದೆಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ, ಪೊಲೀಸರ ಕಾರ್ಯಾಚರಣೆ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕರ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ ಹಾಕೆ ಅವರನ್ನು ಭೇಟಿಯಾಗಿ ಮಣಿಪಾಲದ ಪಬ್ ಗಳಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದ್ದರು. ಬಿಜೆಪಿ ನಾಯಕರಿಗೆ ಸೇರಿದ ಅನೇಕ ಪಬ್ಬುಗಳು ಇದೆ ಎಂಬ ಆರೋಪದ ಕಾರಣಕ್ಕೆ ಕಾಂಗ್ರೆಸ್ ನಾಯಕರ ಈ ಬೇಡಿಕೆ ಗಮನ ಸೆಳೆದಿತ್ತು .ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ವೀಕೆಂಡ್ ಕಾರ್ಯಾಚರಣೆ ಬಲಪಡಿಸಲಾಗಿದೆ.
ಆಳ ಸಮುದ್ರ ಮೀನುಗಾರಿಕೆ ಆರಂಭ- ಇನ್ನು ತಿನ್ನಬಹುದು ತಾಜಾ ಮೀನು!
ನಿಯಮ ಮೀರಿ ಕಾರ್ಯಾಚರಿಸುವ ಪಬ್ ಗಳ ಮೇಲೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಪಡೆದು ತಡ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಮಣಿಪಾಲದ ಆರು ಪಬ್ ಗಳಿಗೆ ಸಂಗೀತ ಹಾಕದೆ ಕೇವಲ ಮಧ್ಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಪಬ್ ಕಡ್ಡಾಯವಾಗಿ ಬಂದ್ ಮಾಡುವಂತೆ ಎಚ್ಚರಿಸಿದ್ದಾರೆ.
ಉಡುಪಿಯಲ್ಲಿ ಸದ್ಯ ಬೀಡು ಬಿಟ್ಟಿರುವ ಕೆಎಸ್ಆರ್ಪಿ ತುಕುಡಿಯನ್ನು ಬಳಸಿಕೊಂಡು ಮಣಿಪಾಲದ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ,ನಾಕಾ ಬಂದಿ ಮಾಡಿದ್ದಾರೆ. ಮಧ್ಯರಾತ್ರಿಯ ನಂತರ ಚೆಕ್ ಪೋಸ್ಟ್ ಗಳ ಮೂಲಕ ಅನಗತ್ಯ ಓಡಾಡುವ ವಿದ್ಯಾರ್ಥಿಗಳು ಹಾಗೂ ವಾಹನಗಳ ತಪಾಸಣೆ ನಡೆಸಿದ್ದಾರೆ.
ಅಮಾನವೀಯವಾಗಿ ವರ್ತಿಸಿ ವಿದ್ಯಾರ್ಥಿನಿಯನ್ನ ಮಾರ್ಗಮಧ್ಯೆ ಇಳಿಸಿದ ಬಿಎಂಟಿಸಿ ಕಂಡಕ್ಟರ್!
ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಡೀ ರಾತ್ರಿ ನಡೆದ ಈ ವೀಕೆಂಡ್ ಕಾರ್ಯ ಚರಣೆ, ಪೋಲಿ ತಿರುಗುವ ಯುವಕರಿಗೆ ಬಿಸಿ ಮುಟ್ಟಿಸಿದೆ. ಮಣಿಪಾಲದ ನೈಟ್ ಲೈಫ್ ಮೇಲೆ ಕಣ್ಗಾವಲು ಇಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದು, ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವುದು ಈ ಕಾರ್ಯಚರಣೆಯ ಮೂಲ ಉದ್ದೇಶವಾಗಿದೆ.