ಇಲ್ಲಿ ಕನ್ನಡ ಸಂಪೂರ್ಣ ನಾಪತ್ತೆಯಾಗಿದೆ. ಕನ್ನಡಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಈ ಜಾಗದಿಂದಲೇ ಸಂಪೂರ್ಣವಾಗಿ ನಶಿಸಿ ಹೋಗಿದೆ
ಕಲಬುರಗಿ (ನ.01): ಕನ್ನಡದ ಮೊಟ್ಟಮೊದಲ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗದ ನೆಲ ಕಲಬುರಗಿಯಲ್ಲೇ ಕನ್ನಡ ನಾಮಫಲಕಗಳನ್ನು ದುರ್ಬೀನು ಹಿಡಿದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲಿನ ಮಳಿಗೆ-ಮುಂಗಟ್ಟು, ಸಂಘ-ಸಂಸ್ಥೆಗಳ ಕಚೇರಿಗಳ ಮೇಲೆ ಕೇವಲ ಹಿಂದಿ, ಇಂಗ್ಲಿಷ್ ನಾಮಫಲಕಗಳೇ ರಾರಾಜಿಸುತ್ತಿವೆ.
ಹೌದು, ಹೇಳಿಕೇಳಿ ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕೇಂದ್ರ, ಕರ್ನಾಟಕದ 2ನೇ ಅತಿದೊಡ್ಡ ಜಿಲ್ಲೆ. ಕನ್ನಡದ ಮೊದಲ ಗ್ರಂಥ ರಚನೆಗೊಂಡ ನೆಲ, ಶರಣರ, ದಾಸರ ಸಂಸ್ಕೃತಿಯ ತಾಣ, ಜನಪದ ಸಾಹಿತ್ಯದ ಸೆಲೆಯಾಗಿರುವ ಇಲ್ಲೇ ಕನ್ನಡ ಫಲಕಗಳಿಗೆ ಹುಡುಕಾಡಬೇಕಾದ ಪರಿಸ್ಥಿತಿ ಎದುರಾದರೆ ಕಲ್ಯಾಣ ಕರ್ನಾಟಕದ ಉಳಿದ ಜಿಲ್ಲೆಗಳ ಗತಿಯೇನು? ಈಗಾಗಲೇ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಕನ್ನಡಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ. ಮರಾಠಿ ಪ್ರಭಾವದಿಂದಾಗಿ ಅಲ್ಲಿ ಕನ್ನಡ ದಿನೇ ದಿನೆ ಸೊರಗುತ್ತಿದೆ. ಕನ್ನಡ ರಾಜ್ಯೋತ್ಸವ ಆಚರಣೆ ವೇಳೆಯೂ ಪ್ರತಿರೋಧ ಎದುರಿಸಬೇಕಾದ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲೂ ಕನ್ನಡವನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಬರಬಹುದು ಎಂಬ ಕೂಗು ಕನ್ನಡಾಭಿಮಾನಿಗಳಲ್ಲಿ ಕೇಳಿಬಂದಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಪರ್ಕ ತರಗತಿ ರದ್ದು ...
ಕೆಲ ಸಮಯದ ಹಿಂದೆ ಕಲಬುರಗಿಯ ಪಾಲಿಕೆಯಲ್ಲಿ ಉರ್ದು ನಾಮಫಲಕ ಕಾಣಿಸಿಕೊಂಡು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಕನ್ನಡ ನಾಮಫಲಕಗಳು ಮಾಯವಾಗುತ್ತಿರುವ ಕುರಿತು ಆಕ್ಷೇಪ ಕೇಳಿಬಂದಿತ್ತಾದರೂ ಅದು ದೊಡ್ಡ ಆಂದೋಲನವಾಗಿ ರೂಪುಗೊಳ್ಳಲಿಲ್ಲ. ಈ ಮೊದಲು ಕನ್ನಡ ಕಾವಲು ಸಮಿತಿಯವರು ಕಲಬುರಗಿಯಲ್ಲಿ ಸಭೆ ಕರೆದಾಗೆಲ್ಲಾ ನಾಮಫಲಕಗಳ ವಿಚಾರದಲ್ಲಿ ಆಕ್ಷೇಪ ಎತ್ತುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಈ ಬಗ್ಗೆ ಕೊಂಚ ಗಮನ ಹರಿಸುತ್ತಿತ್ತು. ಆದರೆ ನಾಲ್ಕಾರು ವರ್ಷಗಳಿಂದ ಇಂತಹ ಯಾವುದೇ ಚಟುವಟಿಕೆಗಳು ಇಲ್ಲಿ ಮಾಯವಾಗಿವೆ. ಪರಿಣಾಮ ಕನ್ನಡ ನಾಮಫಲಕಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.