ದೇವನಹಳ್ಳಿಗೆ 3 ವರ್ಷದಲ್ಲಿ ಸಬ್‌ಅರ್ಬನ್‌ ರೈಲು

By Kannadaprabha News  |  First Published Nov 1, 2020, 7:33 AM IST

ಮೆಜೆಸ್ಟಿಕ್‌ನಿಂದ 41 ಕಿ.ಮೀ. ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಸೂಚನೆ|ಕೆ-ರೈಡ್‌ನಿಂದ ಯೋಜನೆ ಅನುಷ್ಠಾನ| ಈ ಕಾರಿಡಾರ್‌ ನಿರ್ಮಾಣದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ| ಉಪನಗರ ರೈಲು ಯೋಜನೆಗೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆ| 


ಬೆಂಗಳೂರು(ನ.01):  ಬೆಂಗಳೂರು ಉಪನಗರ ರೈಲು ಯೋಜನೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಗೆ ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣ- ದೇವನಹಳ್ಳಿ ಕಾರಿಡಾರ್‌ (41.40 ಕಿ.ಮೀ.) ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದೆ.

ರಾಜಧಾನಿಯ ಬಹುವರ್ಷ ಬೇಡಿಕೆಯಾಗಿದ್ದ ಈ ಉಪನಗರ ರೈಲು ಯೋಜನೆಗೆ ಈವರೆಗೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 15,767 ಕೋಟಿ ಅಂದಾಜು ವೆಚ್ಚದ 148.17 ಕಿ.ಮೀ. ಮಾರ್ಗದ ಉಪನಗರ ರೈಲು ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡುವುದರ ಜೊತೆಗೆ ಯೋಜನೆ ಅನುಷ್ಠಾನದ ಅಂದಾಜು ವೆಚ್ಚವನ್ನು ಹಂಚಿಕೆ ಮಾಡಿದೆ.

Latest Videos

undefined

ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ಮಾದರಿಯಲ್ಲಿ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌) ಈ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದ್ದು, ಆರು ವರ್ಷಗಳಲ್ಲಿ ಪೂರ್ಣ ಯೋಜನೆ ಅನುಷ್ಠಾನಗೊಳಿಸಬೇಕು. ಆದ್ಯತೆ ಮೇರೆಗೆ ಮೊದಲ ಹಂತದಲ್ಲಿ ಕೆಎಸ್‌ಆರ್‌ ರೈಲು ನಿಲ್ದಾಣ-ದೇವನಹಳ್ಳಿ ಕಾರಿಡಾರ್‌ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲು ಸೂಚಿಸಿದೆ.

ಬೆಂಗಳೂರು ಸಬ್‌ಅರ್ಬನ್‌ ರೈಲು: ಯೋಜನಾ ವೆಚ್ಚ ಹಂಚಿಕೆ

ಈ ಯೋಜನೆಯಲ್ಲಿ ಪ್ರಮುಖವಾಗಿ ಕೆಎಸ್‌ಆರ್‌ ಬೆಂಗಳೂರು ನಗರ ನಿಲ್ದಾಣ-ದೇವನಹಳ್ಳಿ (41.40 ಕಿ.ಮೀ.), ಬೈಯಪ್ಪನಹಳ್ಳಿ ಟರ್ಮಿನಲ್‌- ಚಿಕ್ಕಬಾಣಾವಾರ (25.01 ಕಿ.ಮೀ.), ಕೆಂಗೇರಿ- ವೈಟ್‌ಫೀಲ್ಡ್‌ (35.52 ಕಿ.ಮೀ.), ಹೀಲಲಿಗೆ ನಿಲ್ದಾಣ- ರಾಜಾನುಕುಂಟೆ (46.24 ಕಿ.ಮೀ.) ಕಾರಿಡಾರ್‌ ಸೇರಿವೆ. ಯೋಜನೆಯ ಒಟ್ಟು ಅಂದಾಜು ವೆಚ್ಚ .15,767 ಕೋಟಿ. ಈ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟುಹಾಗೂ ಉಳಿದ ಶೇ.60ರಷ್ಟನ್ನು ಕೆ-ರೈಡ್‌ ಸಂಸ್ಥೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗೆ ಸಾಕಷ್ಟುಸಮಯ ಹಿಡಿಯಲಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನದ ಪೈಕಿ ಕೊಂಚ ಅನುದಾನ ನೀಡಿದರೆ ಕೆಎಸ್‌ಆರ್‌ ಬೆಂಗಳೂರು ನಗರ ನಿಲ್ದಾಣ-ದೇವನಹಳ್ಳಿ ಕಾರಿಡಾರ್‌ ನಿರ್ಮಾಣ ಕೈಗೆತ್ತಿಕೊಳ್ಳಲು ಅನುವಾಗಲಿದೆ.

ನಿತ್ಯ 2.82 ಲಕ್ಷ ಮಂದಿಗೆ ಅನುಕೂಲ:

ಕೆಎಸ್‌ಆರ್‌ ರೈಲು ನಿಲ್ದಾಣ- ದೇವನಹಳ್ಳಿ ಕಾರಿಡಾರ್‌ ನಿರ್ಮಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಂದಾಜಿನ ಪ್ರಕಾರ 2.82 ಲಕ್ಷ ಪ್ರಯಾಣಿಕರು ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆಯಿದೆ. ಈ ಕಾರಿಡಾರ್‌ನಲ್ಲಿ ಒಟ್ಟು 15 ನಿಲ್ದಾಣಗಳು ಬರಲಿವೆ. ಈ ಪೈಕಿ 8 ಎಲಿವೇಟೆಡ್‌ ನಿಲ್ದಾಣ ಹಾಗೂ 7 ನೆಲಮಟ್ಟದ ನಿಲ್ದಾಣಗಳು ಸೇರಿವೆ. ಈ ಕಾರಿಡಾರ್‌ ನಿರ್ಮಾಣಕ್ಕೆ ಅಂದಾಜು 12.10 ಹೆಕ್ಟರ್‌ ಭೂಮಿಯ ಅಗತ್ಯವಿದೆ.

ಈ ಕಾರಿಡಾರ್‌ ಮಾರ್ಗ ಕೆಎಸ್‌ಆರ್‌ ರೈಲು ನಿಲ್ದಾಣ- ಶ್ರೀರಾಂಪುರ, ಮಲ್ಲೇಶ್ವರ- ಯಶವಂತಪುರ- ಮುತ್ಯಾಲನಗರ- ಕೊಡಿಗೇಹಳ್ಳಿ- ನ್ಯಾಯಾಂಗ ಬಡಾವಣೆ- ಯಲಹಂಕ- ಬೆಟ್ಟಹಲಸೂರು- ದೊಡ್ಡಜಾಲ- ಕೆಐಎ ಟ್ರಂಪೆಟ್‌- ದೇವನಹಳ್ಳಿ ಸೇರಿದೆ.

‘ರಾಜ್ಯ ಸರ್ಕಾರದ ನೆರವು ಅಗತ್ಯ’

ಆದ್ಯತೆ ಮೇರೆಗೆ ಮೊದಲೇ ಹಂತದಲ್ಲೇ ಈ ಕಾರಿಡಾರ್‌ ನಿರ್ಮಿಸುವುದರಿಂದ ವಿಮಾನ ನಿಲ್ದಾಣದ ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ತ್ವರಿತ ಪರಿಹಾರ ಸಿಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕಾರಿಡಾರ್‌ ನಿರ್ಮಾಣಕ್ಕೆ ಕೆ-ರೈಡ್‌ ಸಂಸ್ಥೆಗೆ ಅಗತ್ಯಅನುದಾನ ನೀಡಬೇಕು. ಅಗತ್ಯ ಭೂಮಿ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಿಗಳ ಅನುಮತಿ ಸೇರಿದಂತೆ ಸಹಕಾರ ನೀಡಬೇಕು. ಈ ಕಾರಿಡಾರ್‌ ನಿರ್ಮಾಣದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಜಾರಾಗ್‌ ಸಂಸ್ಥೆಯ ಸದಸ್ಯ ಸಂಜೀವ್‌ ದ್ಯಾಮಣ್ಣನವರ್‌ ಹೇಳಿದರು.
 

click me!