
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಫೆ.21): 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗಾಗಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ವಿವಿಧ ಹಂತದ ಸುಮಾರು 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಈಗಾಗಲೇ ಆದೇಶ ನೀಡಿ ಮೊದಲ ಹಂತದ ತರಬೇತಿಯು ನಡೆಯುತ್ತಿದೆ ಆದರೆ ಕೆಲವು ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೇಳಿ, ಅರ್ಜಿ ಸಲ್ಲಿಸುವದು, ಇತರರಿಂದ ಶಿಪಾರಸ್ಸು ಮಾಡಿಸುವುದು, ಅಪ್ರಸ್ತುತ ಕಾರಣ ಹೇಳುವುದು ಕಂಡುಬರುತ್ತಿದೆ. ಅನಾರೋಗ್ಯ ಅಥವಾ ತೀರಾ ಅನಿವಾರ್ಯವಾದ ಕಾರಣಗಳಿದ್ದಲ್ಲಿ ಅವುಗಳನ್ನು ನಿಯಮಾನುಸಾರ ಪರಿಶೀಲಿಸಲಾಗುವದು ಅದಕ್ಕಾಗಿ ಪ್ರತ್ಯೇಕ ಪರಿಶೀಲನಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಇಂದು(ಬುಧವಾರ) ಚುನಾವಣಾ ನಿಯೋಜಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ದಿವ್ಯ ಪ್ರಭು ಅವರು, ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೇಳಿ ಸಲ್ಲಿಸುವ ಅರ್ಜಿಗಳನ್ನು ಕೂಲಂಕೂಷವಾಗಿ ಪರಿಶೀಲಿಸಿ, ಕ್ರಮ ವಹಿಸಲಾಗುವುದು ಮೆಡಿಕಲ್ ಬೊರ್ಡ್ ಮೂಲಕ ಆರೋಗ್ಯ ಸಂಬಂಧಿತ ಅರ್ಜಿಗಳನ್ನು ಪರಿಶೀಲಿಸಲಾಗುವುದು ಅರ್ಜಿಯೊಂದಿಗೆ ಅಧಿಕೃತ ದಾಖಲೆ ಸಲ್ಲಿಸಬೇಕು ಚುನಾವಣಾ ಕರ್ತವ್ಯದಿಂದ ಹೊರಗುಳಿಯಲು ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿ ಅನಗತ್ಯ ಕಾರಣ ಅನಧಿಕೃತ ದಾಖಲೆ ಸಲ್ಲಿಸಿದರೆ ಅಥವಾ ಬೇರೆಯವರಿಂದ ಶಿಪಾರಸ್ಸುಗಳನ್ನು ಮಾಡಿಸಿದರೆ ಅಂತವರ ಮೇಲೆ ನಿಗಾ ಇರಿಸಿ ತಕ್ಷಣ ಜಿಲ್ಲೆಯಿಂದ ಬಿಡುಗಡೆಗೊಳಿಸಿ, ಸೂಕ್ತ ಕ್ರಮಕೈಗೊಳ್ಳಲು ಭಾರತ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳ ಮಧ್ಯೆ ಮಾರಾಮಾರಿ; ಮಲ್ಲೇಶ್ವರ ಬಾಂಬ್ ಬ್ಲಾಸ್ಟ್ ಕೈದಿಗೆ ಇರಿದ ಪಾತಕಿ ಪಚ್ಚಿ!
ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ, ಆಲಸ್ಯ, ಉದಾಸೀನತೆ ತೊರುವ ಹಾಗೂ ಪಾರದರ್ಶಕವಾಗಿ ಚುನಾವಣಾ ಕೆಲಸ ಮಾಡದವರ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಿ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಕರ್ತವ್ಯಕ್ಕೆ ನಿಯೋಜಿತರ ಅರ್ಜಿಗಳು ಸತ್ಯಂಶಗಳಿಂದ ಕೂಡಿದ್ದಲ್ಲಿ ಪರಿಶೀಲಿಸಿ, ನಿಯಮಾನುಸಾರ ಕ್ರಮ ವಹಿಸಲಾಗುವುದು. ಪ್ರತಿ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಣೆಯು ಕಡ್ಡಾಯವಾಗಿದೆ.ಯಾವುದೇ ನೆಪಗಳನ್ನು ಹೇಳದೆ ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಚುನಾವಣಾ ಕಾರ್ಯ ಯಶಸ್ವಿ ಆಗುವಂತೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.