ರಾಮನಗರ: ಪಿಎಸ್‌ಐ ಸಸ್ಪೆಂಡ್, ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ..!

By Girish Goudar  |  First Published Feb 21, 2024, 8:58 PM IST

40 ಕ್ಕೂ ಹೆಚ್ಚು ವಕೀಲರ ಮೇಲೆ ಸುಳ್ಳು ಎಫ್ ಐ ಆರ್ ಖಂಡಿಸಿ ನ್ಯಾಯವಾದಿಗಳೇ ನ್ಯಾಯಕ್ಕಾಗಿ ಕಳೆದ 10 ದಿನದಿಂದ ಹೋರಾಟ ಮಾಡ್ತಿದ್ದರು, ವಕೀಲರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಐಜೂರು ಪಿಎಸ್ ಐ ತನ್ವೀರ್ ಹುಸೇನ್ ಸಸ್ಪೆಂಡ್ ಮಾಡುವ ಮೂಲಕ ವಕೀಲರು ಮತ್ತು ಪೋಲಿಸರು ನಡುವಿನ ಜಟಾಪಟಿಗೆ ತೆರೆ ಎಳೆದಿದೆ. 


ವರದಿ- ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ

ರಾಮನಗರ(ಫೆ.21): ವಕೀಲರು ಹಾಗೂ ಪೋಲಿಸರ ನಡುವೆ ನಡೆಯುತ್ತಿದ್ದ ಜಟಾಪಟಿ‌‌ಗೆ ಕೊನೆಗೂ ತೆರೆಬಿದ್ದಿದೆ. ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ‌ ಪಿಎಸ್ ಐ ತನ್ವೀರ್ ಹುಸೇನ್ ಸಸ್ಪೆಂಡ್ ಮಾಡಿದೆ. ಇತ್ತ ಧರಣಿ ನಡೆಸುತ್ತಿದ್ದ ವಕೀಲರು ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟು ಕೋರ್ಟ್ ಕಲಾಪದಲ್ಲಿ ಭಾಗಿಯಾದರು. 

Tap to resize

Latest Videos

ರಾಜಕೀಯ ಕೆಸರೆರೆಚಾಟ ನಡುವೆ ಸುಖಾಂತ್ಯ ಕಂಡ ಹೋರಾಟ

ಹೌದು, 40 ಕ್ಕೂ ಹೆಚ್ಚು ವಕೀಲರ ಮೇಲೆ ಸುಳ್ಳು ಎಫ್ ಐ ಆರ್ ಖಂಡಿಸಿ ನ್ಯಾಯವಾದಿಗಳೇ ನ್ಯಾಯಕ್ಕಾಗಿ ಕಳೆದ 10 ದಿನದಿಂದ ಹೋರಾಟ ಮಾಡ್ತಿದ್ದರು, ವಕೀಲರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಐಜೂರು ಪಿಎಸ್ ಐ ತನ್ವೀರ್ ಹುಸೇನ್ ಸಸ್ಪೆಂಡ್ ಮಾಡುವ ಮೂಲಕ ವಕೀಲರು ಮತ್ತು ಪೋಲಿಸರು ನಡುವಿನ ಜಟಾಪಟಿಗೆ ತೆರೆ ಎಳೆದಿದೆ. ನಿನ್ನೆ ಸದನದಲ್ಲಿ ಈ ಬಗ್ಗೆ ಬಿಜೆಪಿ ನಾಯಕರು ಚರ್ಚೆ ಮಾಡ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.  ಸಂಜೆ ಸ್ಪೀಕರ್ ನೇತೃತ್ವದಲ್ಲಿ ಗೃಹ ಸಚಿವ ಪರಮೇಶ್ವರ್, ಕಾನೂನು‌ ಸಚಿವ ಹೆಚ್ ಕೆ ಪಾಟೀಲ್ ಸಮ್ಮುಖದಲ್ಲಿ ಮಾತುಕಥೆ ನಡೆಯಿತು. ಮೊದಲು ಪಿಎಸ್ಐ ಸಸ್ಪೆಂಡ್ ಮಾಡಿ ನಂತರ ತನಿಖೆ ನಡೆಸುವಂತೆ ಬಿಜೆಪಿ ನಾಯಕರು ಕೂಡ ಪಟ್ಟು ಹಿಡಿದಿದ್ದರು. ಈ ಬಗ್ಗೆ ಪರಮೇಶ್ವರ್ ಕೂಡ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕಲೆಹಾಕಿ ನಾಳೆ ಸದನದಲ್ಲೇ ಈ ಬಗ್ಗೆ ಉತ್ತರಿಸಲಾಗುವುದು ಎಂದು ತಿಳಿಸಿದ್ದರು. ಇಂದು ಸದನ ಆರಂಭವಾಗ್ತಿದ್ದಂತೆ ಪಿಎಸ್ಐ ಅಮಾನತ್ತು ಮಾಡಲಾಗಿದ್ದು, ಜೊತೆಗೆ ಇಡೀ ಪ್ರಕರಣದಲ್ಲಿ ವಕೀಲ ಚಾನ್ ಪಾಷಾ ಪಾತ್ರ ಹೆಚ್ಚಿದ್ದು ಅವರ ಮೇಲೂ ಕೂಡ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು..

ಸಾವಿನ ಹೆದ್ದಾರಿಯಾಗ್ತಿದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ! ಭೀಕರ ಅಪಘಾತ ಸ್ಥಳದಲ್ಲೇ ಮೂವರ ದುರ್ಮರಣ!

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ನಾನೂ ಕೂಡಾ ಹೇಳಿದ್ದೆ, ಶಾಸಕರೂ ಕಾನೂನು ಪ್ರಕಾರ ಮಾಡಿ ಅಂದಿದ್ರು. ನಾವು ಅಧಿಕಾರಿಗಳಿಗೆ ಹೇಳಿದ್ದೆವು, ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ರೆ ಕ್ರಮ ತಗೊಳ್ಳಿ. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ನವರು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಮೊಸರಲ್ಲಿ ಕಲ್ಲು ಹುಡುಕ್ತಾರೆ. ಬಿಜೆಪಿಯವ್ರು ಅಶಾಂತಿ ಸೃಷ್ಠಿಸೋದು ಮಾಮೂಲಿ.
ಕಮ್ಯೂನಲ್ ಇಶ್ಯೂ ತೆಗೆದುಕೊಂಡು ರಾಜಕೀಯ ಮಾಡ್ತಾರೆ. ಅವರಿಗೆ ಮೈನಾರಿಟಿ ಅವರನ್ನ ಕಂಡ್ರೆ ಆಗಲ್ಲ. ಸ್ಥಳೀಯ ಶಾಸಕ, ಅಧಿಕಾರಿ ಮೈನಾರಿಟಿ ಇರೋದ್ರಿಂದ ರಾಜಕೀಯ ಮಾಡಿದ್ದಾರೆ. ನಿನ್ನೆ ಅಸೆಂಬ್ಲಿಯಲ್ಲೇ ಹೇಳ್ತಿದ್ರಲ್ಲ, ಮೈನಾರಿಟಿ ಅಧಿಕಾರಿ ಬೇಡ ಅಂತಾ  ಬಿಜೆಪಿ-ಜೆಡಿಎಸ್ ವಿರುದ್ಧ ಡಿಸಿಎಂ ಡಿಕೆಶಿ ಕಿಡಿ ಕಾರಿದರು.

ಅಂದಹಾಗೆ ಸದನದಲ್ಲಿ ಈ ವಿಚಾರ ಪ್ರಸ್ತಾಪ ಆಗ್ತಿದ್ದಂತೆ, ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಸಂತಸ ವ್ಯಕ್ತಪಡಿಸಿದರು. ವಕೀಲರ ಹೋರಾಟಕ್ಕೆ ಸಿಕ್ಕ ಜಯ ಎಂದು ಘೋಷಣೆ ಕೂಗಿದರು. ವಕೀಲ ಪರಿಷತ್ ಅಧ್ಯಕ್ಷ ವಿಶಾಲ್ ರಘು ಮಾತನಾಡಿ, ಸರ್ಕಾರ ಮಧ್ಯೆ ಪ್ರವೇಶಿಸಿ ವಕೀಲರಿಗೆ ನ್ಯಾಯ ದೊರಕಿಸಿದೆ. ಸಸ್ಪೆಂಡ್ ಬಗ್ಗೆ ವಿಧಾನಸಭೆಯಲ್ಲಿ ಗೃಹಸಚಿವರು ಅನುಮೋದಿಸಿದ್ದಾರೆ. ನಮ್ಮ ಹೋರಾಟಕ್ಕೆ ತಡವಾಗಿಯಾದರೂ ಜಯ ಸಿಕ್ಕಿದೆ. ಪಿಎಸ್ಐ ಸಸ್ಪೆಂಡ್ ಮಾಡಿರುವ ಕುರಿತು ಗೃಹ ಸಚಿವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಹಾಗಾಗಿ ನಮ್ಮ ಹೋರಾಟ ಕೈಬಿಟ್ಟಿದ್ದೇವೆ‌. ನಾಳೆ ಕರೆ ನೀಡಿದ್ದ ವಿಧಾನಸೌಧ ಚಲೋವನ್ನೂ ಕೈಬಿಟ್ಟಿದ್ದೇವೆ ಎಂದರು..

ಒಟ್ಟಾರೆ ವಕೀಲರ ಹೋರಾಟದಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುವ ಮೂಲಕ ಆರೋಪ ಪ್ರತ್ಯಾರೋಪಗಳ ನಡುವೆ ಸರ್ಕಾರ ಪಿಎಸ್ ಐ ಸಸ್ಪೆಂಡ್ ಮಾಡುವ ಮೂಲಕ ಇಬ್ಬರ ನಡುವಿನ ಜಟಾಪಟಿ‌‌ಗೆ ಇತೀಶ್ರಿ ಹಾಡಿದೆ.

click me!