
ಬೆಂಗಳೂರು(ಮೇ.15): ಬೆಸ್ಕಾಂ(BESCOM) ವ್ಯಾಪ್ತಿಯ ಕೆಂಗೇರಿ-1 ಉಪ ವಿಭಾಗದ ಕುಂಬಳಗೋಡು ವ್ಯಾಪ್ತಿಯಲ್ಲಿ ಭಾರೀ ಮಳೆ(Rain) ಹಾಗೂ ಗಾಳಿಗೆ 400 ಕೆ.ವಿ. ಸಾಮರ್ಥ್ಯದ ಬೃಹತ್ ವಿದ್ಯುತ್ ಟವರ್‌ಗಳು(Electric Tower) ಹಾಗೂ 36 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಇದರಿಂದ ಸುಮಾರು 20 ಹಳ್ಳಿಗಳು(Villages) 4 ದಿನ ಸಂಪೂರ್ಣ ಕಗ್ಗತ್ತಲಲ್ಲಿ ಹಾಗೂ ಮತ್ತೆ 3 ದಿನ ಭಾಗಶಃ ವಿದ್ಯುತ್ (Electricity) ವ್ಯತ್ಯಯವಾಗಿದೆ.
ಭಾರೀ ಮಳೆಯಿಂದಾಗಿ ಕುಂಬಳಗೋಡು ಬಳಿಯ ಕಂಬಿಪುರದ ಬಳಿ 400 ಕೆ.ವಿ. ಸಾಮರ್ಥ್ಯದ ಬೃಹತ್ ಟವರ್‌ಗಳು ನೆಲಕ್ಕುರುಳಿವೆ. ಇದರಿಂದ ಸ್ಥಳೀಯ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪ್ರಸರಣ ಜಾಲವೂ ಅಸ್ತವ್ಯವಸ್ಥಗೊಂಡಿದೆ. ಇದಲ್ಲದೆ ಭಾರೀ ಮಳೆಯಿಂದಾಗಿ 36 ವಿದ್ಯುತ್ ಕಂಬ ಹಾಗೂ 3 ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದರಿಂದ ಕುಂಬಳಗೋಡು, ಭೀಮನಕುಪ್ಪೆ ಸುತ್ತಮುತ್ತಲಿನ 20 ಹಳ್ಳಿಗಳು ಅಕ್ಷರಶಃ ಕತ್ತಲಲ್ಲಿ ಕಾಲ ಕಳೆದಿವೆ.
ಭದ್ರತಾ ಠೇವಣಿ ಹೆಚ್ಚಿಸಿ ಶಾಕ್ ಕೊಟ್ಟ ಬೆಸ್ಕಾಂ, 30 ದಿನದಲ್ಲಿ ಪಾವತಿಯಾಗದಿದ್ದರೆ ವಿದ್ಯುತ್ ಕಟ್!
ಮೇ 7ರಿಂದಲೂ ತೀವ್ರ ವಿದ್ಯುತ್ ಸಮಸ್ಯೆ ಎದುರಿಸಿದ್ದು, ಮೇ 11ರಂದು ಬುಧವಾರದಿಂದ ವಿದ್ಯುತ್ ಸಮಸ್ಯೆ ಒಂದು ಹಂತಕ್ಕೆ ನಿವಾರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈಗಲೂ ಶೇ.80ರಷ್ಟು ವಿದ್ಯುತ್ ಕಂಬಗಳ ದುರಸ್ತಿ ಮಾತ್ರ ಪೂರ್ಣಗೊಂಡಿದ್ದು, ಇನ್ನೂ ಶೇ.20ರಷ್ಟು ದುರಸ್ತಿ(Repair) ಬಾಕಿ ಇದೆ. ಆದರೆ ಎರಡು-ಮೂರು ಮನೆಗಳಿರುವ ಸ್ಥಳಗಳಿಗೆ ಹೊರತುಪಡಿಸಿ ಬಹುತೇಕ ಎಲ್ಲಾ ಊರುಗಳಿಗೆ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಸಮಸ್ಯೆಯಿಂದಾಗಿ ಕುಂಬಳಗೋಡು ವ್ಯಾಪ್ತಿಯ ರಾಮಯ್ಯನಪಾಳ್ಯ, ತಗಚಗುಪ್ಪೆ, ದೇವಗೆರೆ, ಕುಳ್ಳೇಗೌಡನಪಾಳ್ಯ, ಗುಡಿಮಾವು, ವೆಂಕಟಾಪುರ, ಕೇತೋಹಳ್ಳಿ, ಕೋಡಿಪಾಳ್ಯ, ಬೆಟ್ಟನಪಾಳ್ಯ, ಮಲಿಗಂಡನಹಳ್ಳಿ ವ್ಯಾಪ್ತಿಯ ಜನರು ಪರದಾಡಿದ್ದಾರೆ. ಜತೆಗೆ ಈ ಭಾಗದ ಕಾರ್ಖಾನೆಗಳು, ಉದ್ದಿಮೆಗಳೂ ತೀವ್ರ ನಷ್ಟ ಅನುಭವಿಸಿವೆ.
ಸಮಸ್ಯೆಯಾಗಿದ್ದು ಸತ್ಯ: ಮೋಹಿತಾ
ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಬೆಸ್ಕಾಂ ಕುಂಬಳಗೋಡು ಸಹಾಯಕ ಎಂಜಿನಿಯರ್ ಮೋಹಿತಾ, ತೀವ್ರ ಮಳೆಯಿಂದಾಗಿ ಕುಂಬಳಗೋಡು ಸುತ್ತಮುತ್ತಲೂ ತೀವ್ರ ವಿದ್ಯುತ್ ಸಮಸ್ಯೆಯಾಗಿದ್ದು ಸತ್ಯ. ಜನರು ಕೆಲ ದಿನ ವಿದ್ಯುತ್ ಇಲ್ಲದೆ ಪರದಾಡಿದ್ದೂ ಸತ್ಯ. ವಿದ್ಯುತ್ ಸಮಸ್ಯೆ ಬಗೆಹರಿಸಿ ಯತಾಸ್ಥಿತಿಗೆ ತರಲು ಇನ್ನಿಲ್ಲದಂತೆ ಪರದಾಡಿದ್ದೇವೆ. ಮಳೆಯ ನಡುವೆಯೂ ನಮ್ಮ ಸಿಬ್ಬಂದಿ ಕೆಲಸ ಮಾಡಿದ್ದಾರೆ. ವಿದ್ಯುತ್ ಕಂಬಗಳು ದುರಸ್ತಿಯಾಗದ ಕಡೆ ತಾತ್ಕಾಲಿಕವಾಗಿ ವಿದ್ಯುತ್ ತಂತಿಯನ್ನು ಎಳೆಸಿ ವಿದ್ಯುತ್ ಸಂಪರ್ಕ ನೀಡಿದ್ದೇವೆ. ಸದ್ಯಕ್ಕೆ ಬಹುತೇಕ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ ಎಂದು ಹೇಳಿದರು.
ಬೆಸ್ಕಾಂ ಕಚೇರಿಗೆ ಮಂಗಳಾರತಿ ಮಾಡಿ ಉದ್ಯಮಿಗಳ ಆಕ್ರೋಶ
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಳಗೋಡು ಹಾಗೂ ಭೀಮನಕುಪ್ಪೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಾರದಿಂದ ತೀವ್ರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕಾರ್ಖಾನೆಯೊಂದರ ಮಾಲಿಕರು ಕೆಂಗೇರಿ ವಿಭಾಗದ ಕೆ-1 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಹೂವಿನ ಹಾರ ಹಾಕಿ ಮಂಗಳಾರತಿ ಮಾಡುವ ಮೂಲಕ ವಿಶಿಷ್ಟವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
Bengaluru: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, 27 ವರ್ಷ ಯುವಕ ಸಾವು
ಮೆಟ್ರೋ ಪ್ರಿಂಟ್ ಪ್ಯಾಕ್ ಕಾರ್ಖಾನೆ ಮಾಲಿಕರಾದ ಜ್ಯೋತಿ ಅವರು ಸಿಬ್ಬಂದಿ ಸಮೇತ ಬುಧವಾರ ಕಚೇರಿಗೆ ಆಗಮಿಸಿ ಎಂಜಿನಿಯರ್ ಗೈರು ಹಾಜರಿ ಹಿನ್ನೆಲೆಯಲ್ಲಿ ಕಚೇರಿ ಬಾಗಿಲಿಗೆ ಹರಿಶಿನ-ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಮಂಗಳಾರತಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಜ್ಯೋತಿ ಅವರು, ಒಂದು ವಾರದಿಂದ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಕನಿಷ್ಠ ದೂರವಾಣಿ ಕರೆಗೂ ಸ್ಪಂದಿಸದೆ ಸತಾಯಿಸುತ್ತಿದ್ದರು. ನಾವು ವಿದ್ಯುತ್ ಬಿಲ್ ಪಾವತಿ ವಿಳಂಬ ಮಾಡಿದರೆ ತಕ್ಷಣ ಪವರ್‌ಕಟ್ ಮಾಡುವ ಇವರು ನಮಗೆ ಗುಣಮಟ್ಟದ ಸೇವೆ ನೀಡಬೇಕಲ್ಲವೇ? ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆಯಿಂದ ಕಾರ್ಖಾನೆಯಲ್ಲಿ ಕೆಲಸ ಇಲ್ಲದಂತಾಗಿದೆ. ನಮಗೆ ಬಂದಿರುವ ಆರ್ಡರ್‌ಗಳನ್ನು ಪೂರೈಸಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಯಾರು ಪರಿಹಾರ ಕಟ್ಟಿಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.